ಸೋಮವಾರಪೇಟೆ, ಮೇ 27: ನಾಡಿನ ಬೆನ್ನೆಲುಬಾಗಿರುವ ರೈತರ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ತಾ. 28ರಂದು (ಇಂದು) ಕೊಡಗು ಬಂದ್ ನಡೆಯಲಿದ್ದು, ಸೋಮವಾರದ ಸಂತೆ ತಾ. 29ರ ಮಂಗಳವಾರ ನಡೆಯಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆ ಬಂದ್ ನಡೆಯಲಿದೆ ಎಂದರು.
ವಿಧಾನಸಭಾ ಚುನಾವಣೆ ಸಂದರ್ಭ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು, ತಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಐದು ದಿನ ಕಳೆದರೂ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ರೈತರ 1ಲಕ್ಷ ವರೆಗಿನ ಸಾಲ ಮನ್ನಾ ಮಾಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ರೈತರ ಸಾಲ ಮನ್ನಾ ಬಗ್ಗೆ ಚಕಾರ ಎತ್ತದೇ ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು.
ಸಹಕಾರಿ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲದೊಂದಿಗೆ ಸ್ವಸಹಾಯ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಭರವಸೆಯಿಂದ ಕುಮಾರಸ್ವಾಮಿ ಅವರು ಹಿಂದೆ ಸರಿದಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕ್ರಮದ ವಿರುದ್ಧ ಭಾರತೀಯ ಜನತಾ ಪಾರ್ಟಿ ಬೀದಿಗಿಳಿದು ಹೋರಾಟ ನಡೆಸಲಿದೆ. ಇದರ ಪ್ರಥಮ ಭಾಗವಾಗಿ ತಾ. 28ರಂದು ರಾಜ್ಯಾದ್ಯಂತ ಬಂದ್ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸ್ವಯಂಪ್ರೇರಿತ ಬಂದ್ ನಡೆಯಲಿದೆ ಎಂದರು.
ಕೊಡಗು ಜಿಲ್ಲೆಯ 5ಲಕ್ಷ ರೈತರು ಸಾಲಗಾರರಾಗಿದ್ದಾರೆ. ರೈತರ ಮೇಲಿನ ಕಾಳಜಿಯಿಂದ ಬಿಜೆಪಿ ಬಂದ್‍ಗೆ ಕರೆ ನೀಡಿದ್ದು, ಎಲ್ಲಾ ಸಂಘ ಸಂಸ್ಥೆಗಳು, ಆಟೋ, ಬಸ್ ಮಾಲೀಕರ ಸಂಘ, ವಾಹನ ಚಾಲಕರ ಸಂಘದ ಸದಸ್ಯರು, ವರ್ತಕರ ಸಂಘದವರು ಹಾಗೂ ಸಾರ್ವಜನಿಕರು ಬಂದ್‍ಗೆ ಸಹಕಾರ ನೀಡಿದ್ದಾರೆ. ತಾ. 28ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಜಿಲ್ಲೆಯಾದ್ಯಂತ ಬಂದ್ ನಡೆಯಲಿದ್ದು, ಸೋಮವಾರಪೇಟೆಯ ಸಂತೆ ಮಂಗಳವಾರ ನಡೆಯಲಿದೆ. ರೈತರ ಹಿತಕ್ಕಾಗಿ ಸಾರ್ವಜನಿಕರೂ ಸಹ ಸಹಕಾರ ನೀಡಲಿದ್ದಾರೆ ಎಂದು ಶಾಸಕ ರಂಜನ್ ತಿಳಿಸಿದರು.