ವೀರಾಜಪೇಟೆ, ಮೇ 27: ವೀರಾಜಪೇಟೆ ಪಟ್ಟಣ ಪಂಚಾಯಿ ತಿಯ ಅವಧಿ ಮುಂದಿನ ಸೆಪ್ಟಂಬರ್ ತಿಂಗಳ 12ಕ್ಕೆ ಮುಗಿಯಲಿದ್ದು, ಚುನಾವಣೆಯ ಪೂರ್ವ ಸಿದ್ಧತೆಗೆ ಚಾಲನೆ ನೀಡಲಾಗಿದೆ.ಕಳೆದ 2013ರ ಮಾರ್ಚ್ 7ರಂದು ಪಟ್ಟಣ ಪಂಚಾಯಿತಿಯ ಹದಿನಾರು ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದರೂ ತಾ. 12.9.2013 ರಂದು ಆರು ತಿಂಗಳ ವಿಳಂಬವಾಗಿ ಆಡಳಿತಾಧಿಕಾರಿ ಅಧಿಕಾರ ಹಸ್ತಾಂತರಿಸಿ ಪ್ರಥಮ ಮಾಸಿಕ ಸಭೆಯು ಆಗಿನ ನೂತನ ಅಧ್ಯಕ್ಷೆ ಮನೆಯಪಂಡ ಕೆ. ದೇಚಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಪಟ್ಟಣ ಪಂಚಾಯಿತಿಯ ಪ್ರಥಮ ಸಭೆಯಿಂದ ಪಂಚಾಯಿತಿಯ ಅವಧಿ 5 ವರ್ಷಗಳಾಗಿರುವದರಿಂದ ಪಂಚಾಯಿತಿಯ ಈಗಿನ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮುಂದಿನ ಸೆಪ್ಟಂಬರ್ 11ಕ್ಕೆ ಕೊನೆಗೊಳ್ಳುವದರಿಂದ ಮೂರು ತಿಂಗಳ ಮೊದಲೇ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳ ಬೇಕಿರುವ ಹಿನ್ನೆಲೆ ಪಂಚಾಯಿತಿ ಸಿಬ್ಬಂದಿಗಳು ವಾರ್ಡ್‍ಗಳ ಪ್ರಕಾರ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸುವ ಕಾರ್ಯ ಆರಂಭಿಸಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪರಿಷ್ಕøತ ಮತದಾರರ ಪಟ್ಟಿಯ ಕರಡು ಸಿದ್ಧತೆ ಮುಕ್ತಾಯದ ಹಂತದಲ್ಲಿದೆ. ಪಟ್ಟಣ ಪಂಚಾಯಿತಿ ಪರಿಷ್ಕøತ ಮತದಾರರ ಕರಡು ಪಟ್ಟಿಯನ್ನು ತಾಲೂಕು ಸಹಾಯಕ ಚುನಾವಣಾಧಿಕಾರಿಗೆ ಸಲ್ಲಸಲಿದೆ.

2013ರ ಚುನಾವಣೆಯ ಮುನ್ನದ ಮತದಾರರ ಪಟ್ಟಿಯ ಪ್ರಕಾರ ಪಟ್ಟಣ ಪಂಚಾಯಿತಿಯ 16ವಾರ್ಡ್‍ಗಳಲ್ಲಿ ಒಟ್ಟು 17,246 ಮತದಾರರಿದ್ದರು.

ಈ ಪೈಕಿ 8,724 ಪುರುಷರು, 8522 ಮಂದಿ ಮಹಿಳಾ ಮತದಾರರಿದ್ದಾರೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಟ್ಟಣದಲ್ಲಿ ಮಾತ್ರ ಪರಿಷ್ಕರಿಸಲಾದ ಹೊಸ ಮತದಾರರು ಇದಕ್ಕೆ ಸೇರ್ಪಡೆಯಾಗಲಿದ್ದಾರೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಪ್ರಸ್ತುತ ಚುನಾವಣೆಗೆ ಒಟ್ಟು 18 ವಾರ್ಡ್‍ಗಳು.

2013ರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾರರ ಪಟ್ಟಿಯ ಆಧಾರದ ಮೇಲೆ ಪಟ್ಟಣ ಪಂಚಾಯಿತಿಯನ್ನು ಹದಿನಾರು ವಾರ್ಡ್‍ಗಳಾಗಿ ವಿಂಗಡಿಸಲಾಗಿತ್ತು. ಈಗ ಹದಿನಾರು ವಾರ್ಡ್‍ಗಳ ಪೈಕಿ ಶಿವಕೇರಿ ಹಾಗೂ ನೆಹರೂ ನಗರ ವಾರ್ಡ್‍ಗಳು ಅಧಿಕ ಸಂಖ್ಯೆಯ ಮತದಾರರನ್ನು ಹೊಂದಿರುವದರಿಂದ ಈ ಬಾರಿ ಎರಡು ವಾರ್ಡ್‍ಗಳನ್ನು ಪುನರ್ ವಿಂಗಡಿಸಿ ನಾಲ್ಕು ವಾರ್ಡ್ ಗಳನ್ನಾಗಿ ಪರಿವರ್ತಿಸಿರು ವದರಿಂದ ಈಗ ಹದಿನಾರು ವಾರ್ಡ್‍ಗಳ ಸಂಖ್ಯೆ ಹದಿನೆಂಟಕ್ಕೆ ಏರಿದೆ. ಪ್ರತಿ ವಾರ್ಡ್‍ಗೆ ಒಬ್ಬ ಜನಪ್ರತಿನಿಧಿಯಂತೆ ಹದಿನೆಂಟು ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶವಾಗಿದೆ.

ಇದರ ಜೊತೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಡಳಿತ ಪಕ್ಷದಿಂದ ಮೂರು ಮಂದಿಯನ್ನು ಸರಕಾರ ನಾಮಕರಣ ಮಾಡಲಿದೆ.

ಕಳೆದ 2013ರ ಚುನಾವಣೆಯಲ್ಲಿ ಹದಿನಾರು ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 10ಸ್ಥಾನಗಳು, ಕಾಂಗ್ರೆಸ್ ಪಕ್ಷ 2 ಹಾಗೂ ಜನತಾದಳ 4 ಸ್ಥಾನಗಳನ್ನು ಪಡೆದಿತ್ತು.