ಕುಶಾಲನಗರ, ಮೇ 27: ಬಿ.ಎಂ. ರಸ್ತೆಯ ಮನೆಯೊಂದರ ಶೌಚಾಲಯದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವದು ಬೆಳಕಿಗೆ ಬಂದಿದೆ. ಇಲ್ಲಿಗೆÀ ಸಮೀಪದ ವಾಲ್ನೂರು ತ್ಯಾಗತ್ತೂರು ನಿವಾಸಿ ಸೈದಲವಿ ಎಂಬವರ ಮಗನಾದ ಸಮದ್ (36) ಎಂಬಾತನೇ ಮೃತಪಟ್ಟ ದುರ್ದೈವಿ. ಸಮದ್ ವಿವಾಹಿತನಾಗಿದ್ದು ವೃತ್ತಿಯಲ್ಲಿ ಟಿಂಬರ್ ವ್ಯಾಪಾರಿ. ತನ್ನ ವ್ಯಾಪಾರಕ್ಕೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಕುಶಾಲನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದ್ದು, ನಾಲ್ಕೈದು ದಿನಗಳ ಹಿಂದೆಯೇ ಈತ ತನ್ನ ಬಾಡಿಗೆ ಮನೆಯ ಶೌಚಾಲಯದಲ್ಲಿ ಮೃತಪಟ್ಟಿರುವದಾಗಿ ಹೇಳಲಾಗುತ್ತಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶೌಚಾಲಯಕ್ಕೆ ಹೋಗಿದ್ದ ಸಂದರ್ಭ ಹೃದಯಾಘಾತವಾಗಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತಗೊಂಡಿದೆ.
ಇಂದು ಬೆಳಗ್ಗೆಯಿಂದಲೇ ಈತ ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲಿನಲ್ಲಿ ದುರ್ವಾಸನೆ ಬೀರುತ್ತಿದ್ದುದ್ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕುಶಾಲನಗರ ಠಾಣಾಧಿಕಾರಿ ಎಚ್.ಕೆ. ಜಗದೀಶ್ ಹಾಗೂ ಸಿಬ್ಬಂದಿ ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿ ಇದ್ದುದನ್ನು ಗಮನಿಸಿ ಒಳ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಂತರ ಠಾಣಾ ಸಹಾಯಕರಾದ ಮುನೀರ್ ಹಾಗೂ ರೆಹಮಾನ್ ಎಂಬವರ ಸಹಾಯದಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಮಾಹಿತಿಯೂ ಲಭ್ಯವಾಗಲಿದೆ. ಈ ಕುರಿತು ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಪ್ರಕರಣವನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.