ಸೋಮವಾರಪೇಟೆ,ಮೇ.27: ಭಾನುವಾರ ಸಂಜೆ ವೇಳೆಗೆ ಸೋಮವಾರಪೇಟೆ ಭಾಗಕ್ಕೆ ಭಾರೀ ವರ್ಷಾಧಾರೆಯಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಯಿತು. ಸಂಜೆ 4 ರ ವೇಳೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿಯಿತು.
ರಸ್ತೆಯ ಚರಂಡಿಗಳಲ್ಲಿ ಮಳೆ ನೀರು ತುಂಬಿ ಹರಿದರೆ, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ತಡೆ ಬಿದ್ದಿತ್ತು. ಭಾರೀ ಮಳೆಯಾದ ಹಿನ್ನೆಲೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಯಿತು.
ಗುಂಡಿ ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನವೂ ಅಸ್ತವ್ಯಸ್ಥಗೊಂಡಿತು. ಸಮೀಪದ ಆಲೇಕಟ್ಟೆ ರಸ್ತೆಯ ದೇವಯ್ಯ ಅವರ ಮನೆಯ ಮುಂಭಾಗ ನೀರು ಶೇಖರಣೆಗೊಂಡು, ಕೆರೆಯಂತಾಗಿತ್ತು.
ಚರಂಡಿಗಳಲ್ಲಿದ್ದ ಕಸಕಡ್ಡಿಗಳು ನೀರಿನ ಹರಿವಿನ ರಭಸಕ್ಕೆ ರಸ್ತೆಯ ಮೇಲೆ ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು. ಭಾನುವಾರವಾದ್ದರಿಂದ ಪಟ್ಟಣದ ಎಲ್ಲಾ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಮದುವೆಗೆ ಆಗಮಿಸಿದ್ದ ಹೊರ ಭಾಗದ ಅತಿಥಿಗಳು ಮಳೆಯಿಂದ ತೊಂದರೆಗೆ ಒಳಗಾದರು.
ಇತ್ತ ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ದಿಡೀರ್ ಮಳೆಗೆ ಸಂಕಷ್ಟ ಅನುಭವಿಸಿದರು. ಚರಂಡಿ ಇಲ್ಲದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ನೀರು ಶೇಖರಣೆಗೊಂಡು ಸಂಚಾರಕ್ಕೆ ತೊಡಕಾಯಿತು. ಸೋಮವಾರಪೇಟೆ ಭಾಗದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದು, ಸಂಜೆಯ ವೇಳೆಗೆ ಕತ್ತಲಿನ ಸನ್ನಿವೇಶ ನಿರ್ಮಿಸಿತ್ತು.