*ಸಿದ್ದಾಪುರ, ಮೇ 28: ಸೇತುವೆಗೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಇರುವದರಿಂದ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿ ಗ್ರಾಮದಲ್ಲಿ ಸಿದ್ದಾಪುರ-ಕೇರಳ ಸಂಪರ್ಕ ರಸ್ತೆಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಿಸಲಾಗಿದೆ. ಶಾಸಕ ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ಸೇತುವೆ ನಿರ್ಮಾಣಗೊಂಡು ಉದ್ಘಾಟನೆ ಹಂತದಲ್ಲಿದೆ. ಆದರೆ, ಸೇತುವೆ ಅಗಲೀಕರಣಗೊಳಿಸುವ ಸಂದರ್ಭ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಇರುವದರಿಂದ ಇದೀಗ ಕಂಬ ರಸ್ತೆ ನಡುವಿನಲ್ಲಿ ನಿಂತಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಸೆಸ್ಕ್ ಇಲಾಖೆಗೆ ಮನವಿ ಮಾಡಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕಾಗಿತ್ತಾದರೂ, ಆ ಕೆಲಸ ಮಾಡದೆ ಸೇತುವೆ ನಿರ್ಮಿಸಿ ಸುಮ್ಮನಾಗಿದೆ. ಭಾರೀ ವಾಹನಗಳು ಸಂಚರಿಸುವಾಗ ಕಂಬಕ್ಕೆ ಡಿಕ್ಕಿ ಹೊಡೆಯುವ ಸಂಭವವಿದ್ದು, ಅಪಾಯವರಿತ ಸೆಸ್ಕ್ ಇಲಾಖೆಯವರೇ ಕಂಬ ತೆರವುಗೊಳಿಸುವ ಸಂಬಂಧ ಇಲಾಖೆಗೆ ಪಾವತಿಸಬೇಕಾದ ಹಣ ಸಂದಾಯ ಮಾಡಿ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಕಳುಹಿಸಿದೆ. ಆದರೂ ಲೋಕೋಪಯೋಗಿ ಇಲಾಖೆಯಿಂದ ಯಾವದೇ ಸ್ಪಂದನೆ ಇಲ್ಲವಾಗಿದೆ.

ಅಪಾಯ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಂಡು ಕಂಬವನ್ನು ತೆರವುಗೊಳಿಸಿಕೊಡಬೇಕೆಂಬದು ಗ್ರಾಮಸ್ಥರ ಆಗ್ರಹವಾಗಿದೆ.

-ಅಂಚೆಮನೆ ಸುಧಿ