ಮಡಿಕೇರಿ, ಮೇ 28: ಜಿಲ್ಲೆಯಲ್ಲಿ ಬೀಗ ಹಾಕಿದ ಮನೆಗಳಲ್ಲಿ, ಗೋದಾಮುಗಳಲ್ಲಿ ಹಾಗೂ ಅಂಗಡಿಗಳಲ್ಲಿ ಕಳ್ಳತನ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಿ ಕಳ್ಳತನ ಹತ್ತಿಕ್ಕಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಆಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಕೋರಿದ್ದಾರೆ.
ಮನೆಗೆ ಬೀಗ ಹಾಕಿ ದೂರದ ಊರಿಗೆ ಹೋಗುವಾಗ ಮನೆಯ ಮಾಲೀಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಠಾಣೆಗೆ ತಿಳಿಸಿ ಹೋಗುವಂತೆ ಸೂಚಿಸುವದು. ದೀರ್ಘಕಾಲ ಮನೆಯಿಂದ ಹೊರಗೆ ಹೋಗುವಾಗ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವದು ಹಾಗೂ ಮನೆಯಲ್ಲಿ ಪರಿಚಯಸ್ಥರೊಬ್ಬರನ್ನು ಬಿಟ್ಟು ಹೋಗುವದು. ಅನುಕೂಲತೆ ಇರುವವರು ಕಾವಲುಗಾರರನ್ನು ನೇಮಿಸಿಕೊಳ್ಳುವದ ಒಳ್ಳೆಯದೆಂದು ಸಲಹೆ ನೀಡಿದ್ದಾರೆ.
ಮನೆಯಿಂದ ಹೋಗುವಾಗ ಮನೆಯ ಬಾಗಿಲನ್ನು ಭದ್ರಪಡಿಸಲು ಬಾಗಿಲಿಗೆ ಹೊರಗೆ ಕಾಣುವ ಹಾಗೆ ಬೀಗ ಹಾಕದೆ ಬಾಗಿಲು ಒಳಗಡೆಯಿಂದ ಬೀಗವನ್ನು (ಡೋರ್ ಲಾಕ್ನ್ನು) ಅಳವಡಿಸಿಕೊಳ್ಳುವದು. ಅಕ್ಕಪಕ್ಕದವರಿಗೆ, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ತಿಳಿಸಿ ಮನೆಯ ಕಡೆಗೆ ನೋಡಿಕೊಳ್ಳುವಂತೆ ಮನೆಯ ಮಾಲೀಕರು ಕೇಳಿಕೊಳ್ಳುವದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳ್ಳತನವನ್ನು ಹತ್ತಿಕ್ಕಲು ಸಿಸಿ ಟಿವಿ ಪ್ರಮುಖ ಪಾತ್ರವಹಿಸುತ್ತದೆ. ಸಿಸಿ ಕ್ಯಾಮರಾವನ್ನು ಮನೆಯ ಮುಂದೆ ಅಳವಡಿಸಲು ಮನೆ ಮಾಲೀಕರಿಗೆ ತಿಳುವಳಿಕೆ ನೀಡುವದು. ಮನೆಗೆ ಬೀಗ ಹಾಕಿ ಹೋಗುವ ಸಮಯದಲ್ಲಿ ಪೇಪರ್ ಹಾಗೂ ಹಾಲು ಹಾಕುವವರಿಗೆ ವಿಷಯ ತಿಳಿಸುವದು.
ಕೆಲಸಗಾರರನ್ನು ಅಥವಾ ವಾಹನ ಚಾಲಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಅವರ ಪೂರ್ವೋತ್ತರಗಳನ್ನು ಪರಿಶೀಲಿಸಿ, ವಿಳಾಸ, ಭಾವಚಿತ್ರ ತೆಗೆದುಕೊಳ್ಳುವದು. ಒಡವೆ ಹಾಗೂ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ.
ಕಾಫಿ, ಕರಿಮೆಣಸು ಬೆಳೆಗಾರರು ಕಾಫಿ ಕಣ ಮತ್ತು ಗೋದಾಮುಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸುವದು. ವ್ಯಾಪಾರ ಮಳಿಗೆಗಳಾಗಿದ್ದಲ್ಲಿ ಸಿಸಿ ಕ್ಯಾಮರಾ ಹಾಗೂ ಬಗ್ರ್ಯುಲರ್ ಅಲಾರಾಂನ್ನು ಅಳವಡಿಸುವಂತೆ ಅಂಗಡಿ ಮಾಲೀಕರಿಗೆ ಹಾಗೂ ವ್ಯಾಪಾರಸ್ಥರಿಗೆ ನಿರ್ದೇಶಿಸಿದ್ದಾರೆ.
ಚಿನ್ನಾಭರಣ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಗಿರವಿ ಇಡಲು ಬರುವವರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ನ್ನು ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಂಡು ರಿಜಿಸ್ಟರ್ನಲ್ಲಿ ನಮೂದಿಸುವದು. ಅನುಮಾನ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸ್ಪಿ ತಿಳಿಸಿದ್ದಾರೆ.
ಚಿನ್ನಾಭರಣ ವ್ಯಾಪಾರಸ್ಥರು ತಮ್ಮ ಅಂಗಡಿಯ ವಹಿವಾಟು ಮುಗಿದ ಮೇಲೆ ಚಿನ್ನಾಭರಣಗಳನ್ನು ಭದ್ರವಾದ ತೀಜೋರಿಯಲ್ಲಿಟ್ಟು ಜೋಪಾನ ಮಾಡುವದು. ವ್ಯಾಪಾರ ವಹಿವಾಟು ಮಾಡುವವರು ತಮ್ಮ ವ್ಯಾಪಾರ ಮುಗಿದ ಮೇಲೆ ಹಣವನ್ನು ಅಂಗಡಿಯಲ್ಲಿ ಇಡಬಾರದು. ಅಂಗಡಿಗೆ ಆಧುನಿಕ ಬಾಗಿಲುಗಳನ್ನು ಅಳವಡಿಸಿ ರೌಂಡ್ ಲಾಕ್ ಮತ್ತು ಬಗ್ರ್ಯುಲರ್ ಅಲಾರಾಂನ್ನು ಅಳವಡಿಸುವದು ಸೂಕ್ತವೆಂದು ಸಲಹೆ ಮಾಡಿದ್ದಾರೆ.
ತಮ್ಮ ವಾಹನಗಳನ್ನು ರಾತ್ರಿ ವೇಳೆಯಲ್ಲಿ ನಿಲ್ಲಿಸುವಾಗ ಸ್ಟೇಯರಿಂಗ್ ಮತ್ತು ಡೋರ್ಲಾಕ್ ಮಾಡಿ ಪರಿಶೀಲಿಸಿ ನಿಲ್ಲಿಸುವದು. ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸದೇ ಮನೆಯ ಅಂಗಳದಲ್ಲಿ ನಿಲ್ಲಿಸುವದು.
ಒಂದೇ ನೋಂದಣಿ ಸಂಖ್ಯೆಯ ವಾಹನಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಾಗಲೀ ಅಥವಾ ಆರ್.ಟಿ.ಓ. ಕಚೇರಿಗಾಗಲೀ ಮಾಹಿತಿಯನ್ನು ನೀಡುವದು ಸೇರಿದಂತೆ ಅಪರಾಧಗಳನ್ನು ತಡೆಗಟ್ಟಲು ಬೇಕಾದ ಸೂಕ್ತ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಿದ್ದಾರೆ.