ಮಡಿಕೇರಿ, ಮೇ 29: ಜನಜೀವನಕ್ಕೆ ಅಡ್ಡಿ ಉಂಟು ಮಾಡಿ ಬಂದ್ಗೆ ಕರೆ ನೀಡುವದನ್ನು ಸ್ವತ: ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಕಾನೂನು ಮೀರಿ ಕರ್ನಾಟಕ ಬಂದ್ ಹೋರಾಟ ನಡೆಸಿರುವ ಬಿಜೆಪಿ ಕ್ರಮ ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟೂ ಮೊಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧಿಕಾರ ಸಿಗದೆ ಹತಾಶೆಗೊಳಗಾಗಿರುವ ಬಿಜೆಪಿ ನಾಯಕರು ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿತ್ತು. ಆದರೆ 18 ಬಿಜೆಪಿ ಸಂಸದರನ್ನು ನೀಡಿರುವ ನಮ್ಮ ರಾಜ್ಯಕ್ಕೆ ಮತ್ತು ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಯಾವದೇ ಉಪಕಾರವನ್ನು ಮಾಡಿಲ್ಲ. ಇದನ್ನು ಪ್ರಶ್ನಿಸುವ ಗೋಜಿಗೆ ಹೋಗದ ರಾಜ್ಯದ ಬಿಜೆಪಿ ಮುಖಂಡರು ಈಗಷ್ಟೇ ಅಧಿಕಾರಕ್ಕೆ ಬಂದಿರುವ ಮೈತ್ರಿ ಸರ್ಕಾರದ ವಿರುದ್ಧ ಸಾಲಮನ್ನಾದ ನೆಪ ಮಾಡಿ ಆರೋಪ ಮಾಡುತ್ತಿರುವದು ಖಂಡನೀಯ ವೆಂದು ಟಾಟೂ ಮೊಣ್ಣಪ್ಪ ತಿಳಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ಜವಬ್ದಾರಿ ಯುತವಾಗಿ ನಡೆದುಕೊಳ್ಳದ ಸಂಸದರು ಬಂದ್ಗೆ ಪ್ರಚೋದನೆ ನೀಡಿರುವದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರÀ ಕಳೆದ 4 ವರ್ಷಗಳಲ್ಲಿ ರೈತರ ಒಂದು ರೂಪಾಯಿ ಸಾಲವನ್ನು ಕೂಡ ಮನ್ನಾ ಮಾಡಿಲ್ಲ. ಆದರೆ ಕೈಗಾರಿಕೋದ್ಯಮಿ ಗಳ 2.5 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ ಎಂದು ಆರೋಪಿಸಿದ್ದಾರೆ.
ಕರಿಮೆಣಸು ಆಮದು ದಂಧೆಯಲ್ಲಿ ಬಿಜೆಪಿ ಪ್ರಮುಖರೇ ಇರುವದು ಸಾಬೀತಾಗಿರುವ ಮಾಹಿತಿ ಈಗಾಗಲೇ ಬಹಿರಂಗವಾಗಿದೆ ಎಂದು ಆರೋಪಿಸಿರುವ ಅವರು ಕೊಡಗಿನ ಪ್ರಜ್ಞಾವಂತ ಜನರು ಬಿಜೆಪಿಯ ನೈಜ ಬಣ್ಣವನ್ನು ತಿಳಿದಿದ್ದು, ಬಂದ್ನಂತಹ ನಾಟಕಗಳಿಂದ ಮೈತ್ರಿ ಸರ್ಕಾರಕ್ಕೆ ಯಾವದೇ ತೊಡಕಾಗುವದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.