ಮಡಿಕೇರಿ, ಮೇ. 28: ಪರ ವಿರೋಧಗಳ ನಡುವೆ ಇಂದು ಕೊಡಗು ಬಂದ್ ನಡೆದಿದೆ. ಜಿಲ್ಲೆಯ ಮುಖ್ಯ ಕೇಂದ್ರ ಮಡಿಕೇರಿಯಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ. ಬೆರಳೆಣಿಕೆ ಅಂಗಡಿಗಳಷ್ಟೆ ತೆರೆದಿದ್ದವು. ಉಳಿದಂತೆ ಬಹುತೇಕ ಮುಚ್ಚಲ್ಪಟ್ಟಿದ್ದವು. ಶಾಲಾ ಕಾಲೇಜುಗಳು ಕೆಲವು ಮುಚ್ಚಲ್ಪಟ್ಟ್ಟಿದ್ದು ಕೆಲವು ಶಾಲೆಗಳಲ್ಲಿ ಪುಸ್ತಕ ವಿತರಣೆ ಹಾಗೂ ಕೆಲವು ಶಾಲೆಗಳಲ್ಲಿ ಪ್ರಾರಂಭಿಕ ತರಗತಿ ನಡೆದಿದೆ. ಬ್ಯಾಂಕ್ಗಳು ಹೊರಗಿನಿಂದ ಬಾಗಿಲು ಮುಚ್ಚಿಕೊಂಡಿದ್ದರೂ ಒಳಗೆ ವಹಿವಾಟು ನಡೆಯಿತು. ಜಿಲ್ಲಾ ಆಡಳಿತ ಭವನ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಆಟೋರಿಕ್ಷಾ, ಖಾಸಗಿ, ಪ್ರವಾಸಿ ವಾಹನಗಳು ಎಂದಿನಂತೆ ಸಂಚರಿಸಿದವು. ಆದರೆ, ಎಲ್ಲ ಖಾಸಗಿ ಬಸ್ಗಳು ಇಂದು ಸ್ಥಗಿತಗೊಂಡಿದ್ದು ಸ್ಥಳೀಯ ಪ್ರಯಾಣಿಕರು ಪರದಾಡಬೇಕಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳು ಎಂದಿನಂತೆ ಸಂಚರಿಸಿದುದರಿಂದ ದೂರದ ಪ್ರಯಾಣಿಕರಿಗೆ ಯಾವದೇ ಅಡಚಣೆಯುಂಟಾಗÀಲಿಲ್ಲ. ಆದರೆ, ಹೊಟೇಲ್ಗಳು ಮುಚ್ಚಲ್ಪಟ್ಟುದರಿಂದ ಪ್ರವಾಸಿಗರಿಗೆ ಆಹಾರ ಸೇವನೆ ಸಮಸ್ಯೆ ಎದುರಾಯಿತು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕೆಲವು ಕಾಲ ವಾಹನಗಳನ್ನು ತಡೆಯಲು ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ಕೊಡದಿದ್ದು, ಕಾನೂನು ಉಲ್ಲಂಘÀನೆಯಿಂದ ಮುಂದೆ ತೊಂದರೆಯುಂಟಾಗುವ ಮುಂದಾಲೋಚನೆಯಿಂದ ರಸ್ತೆ ತಡೆಯನ್ನು ಕೈ ಬಿಟ್ಟಿದ್ದಾಗಿ ಕೆಲವು ಕಾರ್ಯಕರ್ತರು “ಶಕ್ತಿ” ಯೊಂದಿಗೆ ಹೇಳಿಕೊಂಡರು.
ತಾಲೂಕು ಮುಖ್ಯ ಕೇಂದ್ರವಾದ ವೀರಾಜಪೇಟೆಯಲ್ಲಿ ಬಂದ್ ಸಂಪೂರ್ಣ ಯಶಸ್ಸು ಕಂಡಿದೆ. ಎಲ್ಲ ಅಂಗಡಿ ಮುಂಗಟ್ಟ್ಟುಗಳು ಮುಚ್ಚಲ್ಪಡುವದರೊಂದಿಗೆ ನಗರದಲ್ಲಿ ವಿರಳ ವಾಹನ ಸಂಚಾರ ಗೋಚರಿಸಿತು.
ಮತ್ತೊಂದು ತಾಲೂಕು ಕೇಂದ್ರವಾದ ಸೋಮವಾರಪೇಟೆಯಲ್ಲಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವೆ ಹಲವು ಕಾಲ ಮಾತಿನ ಚಕಮಕಿ ನಡೆದಿದೆ. ಜೆಡಿಎಸ್ನಿಂದ ಬ್ಯಾಂಕ್ಗಳನ್ನು ತೆರೆಸುವ ಯತ್ನ- ಬಿಜೆಪಿಯಿಂದ ಅದಕ್ಕೆ ವಿರೋಧಗಳ ನಡುವೆ ಪೊಲೀಸ್ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು. ನಗರದಲ್ಲಿ ಬಂದ್ ಯಶಸ್ವಿಗೊಂಡಿದೆ.
ಕುಶಾಲನಗರದಲ್ಲಿ ವಿಫಲ
ಜಿಲ್ಲೆಯ ಬಹುತೇಕ ಕಡೆ ಬಂದ್ ಬಿಸಿಯಿದ್ದರೂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಜಿಲ್ಲೆಯ ಪ್ರವೇಶದ್ವಾರವೆನಿಸಿರುವ ಕುಶಾಲನಗರ ಮಾತ್ರ ತಣ್ಣಗಿತ್ತು. ಯಾವದೆ ತಲೆ ಬಿಸಿಯಿಲ್ಲದೆ ವ್ಯಾಪಾರ ವಹಿವಾಟು ಸಾಗಿತ್ತು. ವಾಹನ ಸಂಚಾರವೂ ನಿಬಿಡವಾಗಿತ್ತು. ಜಿಲ್ಲೆಯ ಮಟ್ಟಿಗೆ ಕುಶಾಲನಗರದಲ್ಲಿ ಬಂದ್ ಸಂಪೂರ್ಣ ವಿಫಲಗೊಂಡಿದೆ. ಕೂಡಿಗೆಯಲ್ಲಿಯೂ ಬಂದ್ಗೆ ಸ್ಪಂದನ ದೊರಕಿಲ್ಲ. ಹುದಿಕೇರಿಯಲ್ಲಿಯೂ ಬಂದ್ ಆಗಿಲ್ಲ.
ಇನ್ನುಳಿದಂತೆ ಜಿಲ್ಲೆಯ ನಾಪೋಕ್ಲು, ಟಿ. ಶೆಟ್ಟಿಗೇರಿ, ಶನಿವಾರಸಂತೆ, ಕೊಡ್ಲಿಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಉಳಿದಂತೆ ಜಿಲ್ಲೆಯ ಇತರೆಡೆ ಬಂದ್ ಯಶಸ್ವಿಯಾಗಿದೆ.
ವ್ಯಾಪಕ ಭದ್ರತೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ಪ್ರಕಾರ ಬಂದ್ ಸಂದರ್ಭ ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಗಡಿಗಳ ಸಹಿತ ವಾಹನ ಸಂಚಾರಕ್ಕೆ ಎಲ್ಲಿಯೂ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿತ್ತು ಎಂದು ಅವರು “ಶಕ್ತಿ” ಯೊಂದಿಗೆ ಖಚಿತಪಡಿಸಿದರು.ಎಲ್ಲ ರಾಜಕೀಯ ಪಕ್ಷಗಳು, ಸಂಘÀ ಸಂಸ್ಥೆಗಳು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಬಂದ್ ಮುಂಜಾಗ್ರತಾ ಕ್ರಮವಾಗಿ ಮೂವರು ಡಿವೈಎಸ್ಪಿಗಳ ಉಸ್ತುವಾರಿಯೊಂದಿಗೆ
(ಮೊದಲ ಪುಟದಿಂದ) ಒಂದು ಸಾವಿರ ಪೊಲೀಸರು, 100 ಮಂದಿ ಗೃಹರಕ್ಷಕ ಸಿಬ್ಬಂದಿ, ಹತ್ತು ಡಿ.ಎ.ಆರ್ ಮತ್ತು ನಾಲ್ಕು ಕೆಎಸ್ಆರ್ಪಿ ತುಕಡಿ, ಕೊಡಗು ಪೊಲೀಸ್ ನಕ್ಸಲ್ ನಿಗ್ರಹ ಪಡೆ ಕಮಾಂಡೋಗಳು ಕಾನೂನು ಸುವ್ಯವಸ್ಥೆ ದಿಸೆಯಲ್ಲಿ ಎಲ್ಲೆಡೆ ನಿಗಾ ವಹಿಸಿದ್ದಾಗಿಯೂ ಎಸ್ಪಿ ವಿವರಿಸಿದರು. ಹೀಗಾಗಿ ಸಾರ್ವಜನಿಕ ಕೆಲಸಗಳಿಗೆ ಯಾವದೇ ತೊಂದರೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಿಗ್ಗೆಯಿಂದಲೇ ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಹಾಗೂ ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಾಹನಗಳ ತಡೆಗೆ ಯತ್ನಿಸಿದರು. ಡಿವೈಎಸ್ಪಿ ಸುಂದರರಾಜ್, ಸಿಐ ಉಮೇಶ್ ಉಪ್ಪಳಿಕೆ, ಎಸ್ ಐ ಷಣ್ಮುಗಪ್ಪ ಮತ್ತು ಸಿಬ್ಬಂದಿ ಯಾವದೇ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗದಂತೆ ನಿಗಾ ವಹಿಸಿದರು.
ಶಾಸಕರುಗಳ ನೇತೃತ್ವ
ನಗರದ ಜನರಲ್ ತಿಮ್ಯಯ್ಯ ವೃತ್ತದಲ್ಲಿ ಬೆಳಿಗ್ಗೆಯಿಂದ ಅಪರಾಹ್ನ 3 ಗಂಟೆಯ ತನಕ, ಕರ್ನಾಟಕ ಬಂದ್ ಹಿನ್ನೆಲೆ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಪೊಲೀಸ್ ಇಲಾಖೆಯ ಮಧ್ಯೆ ಪ್ರವೇಶದೊಂದಿಗೆ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆಯೊಂದಿಗೆ, ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿದರು. ಅಪರಾಹ್ನ 3 ಗಂಟೆಯಾಗುತ್ತಿದ್ದಂತೆಯೇ ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ, ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡದ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ‘ಶಕ್ತಿ’ಯೊಂದಿಗೆ ಮಾತನಾಡಿದ ಸುನಿಲ್ ಸುಬ್ರಮಣಿ ಅವರು ಈಗಿನ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಅವರಿಗೆ ಸರಕಾರ ನಡೆಸುವದು ಕಷ್ಟ ಸಾಧ್ಯವಾಗಿದೆ. ಇದು ಹೆಚ್ಚು ಕಾಲ ಉಳಿಯುವದಿಲ್ಲ. ಮತ್ತೆ ಅವರು ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯ ಸಹಕಾರ ಕೇಳುವಂತಹ ಅನಿವಾರ್ಯ ಸ್ಥಿತಿ ಒದಗಲಿದೆ. ಇದೀಗ ರೈತರ ಸಾಲ ಮನ್ನಾ ಮಾಡದೆ ವಚನ ಭ್ರಷ್ಟರಾಗಿ ಅವರು ಹೇಗೆ ಮುಂದುವರಿಯಲು ಸಾಧ್ಯ? ಎಂದು ಪ್ರಶ್ನಿಸಿದರು.
ಅನಾರೋಗ್ಯದ ಕಾರಣ ಶಾಸಕ ಕೆ.ಜಿ. ಬೋಪಯ್ಯ ಮಾತನಾಡುತ್ತಿಲ್ಲ ವೆಂದ ಸುನಿಲ್, ಬಂದ್ಗೆ ಸಹಕರಿಸಿದ ಪೊಲೀಸ್ ಇಲಾಖೆ ಹಾಗೂ ಕಾರ್ಯಕರ್ತರಿಗೆ ಶ್ಲಾಘಿಸಿದರು. ಬಿಜೆಪಿ ಪ್ರಮುಖರಾದ ರಾಬಿನ್ ದೇವಯ್ಯ, ಬೆಲ್ಲು ಸೋಮಯ್ಯ, ರವಿ ಬಸಪ್ಪ, ರವಿ ಕಾಳಪ್ಪ, ಕಾಂಗೀರ ಸತೀಶ್, ಶಜಿಲ್ ಕೃಷ್ಣನ್, ಮೋಂತಿ ಗಣೇಶ್, ಲಕ್ಷ್ಮಿ, ಕಲಾವತಿ, ಗೌರಮ್ಮ, ಅನಿತಾ ಪೂವಯ್ಯ, ಬಿ.ಕೆ. ಅರುಣ್ ಕುಮಾರ್, ಜಗದೀಶ್, ಮಹೇಶ್ ಜೈನಿ, ಮನು ಮಂಜುನಾಥ್, ಟಿ.ಎಸ್. ಪ್ರಕಾಶ್, ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಸತೀಶ್, ಉಮೇಶ್ ಸುಬ್ರಮಣಿ, ಕೀರ್ತನ್, ತಿರುಪತಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.