ಮಡಿಕೇರಿ, ಮೇ 28: ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವದಾಗಿ ಚುನಾವಣೆ ಸಂದರ್ಭ ಘೋಷಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜನತೆಗೆ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಆರೋಪಿಸಿ ಇಂದು ನಡೆಸಲಾಗುತ್ತಿರುವ ಕರ್ನಾಟಕ ಬಂದ್ ಹಿನ್ನೆಲೆ, ಕೊಡಗಿನಲ್ಲಿ ಕೆಲವೆಡೆ ಬಂದ್ ಬಿಸಿ ತಟ್ಟಿತು.ಬೆಳಿಗ್ಗೆಯಿಂದಲೇ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಎಂಎಲ್‍ಸಿ ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದರು. ಅಲ್ಲದೆ ವಾಹನಗಳ ಸಂಚಾರವನ್ನು ತಡೆಯಲು ಮುಂದಾಗಿದ್ದರು.ಈ ವೇಳೆ ನಗರ ಪೊಲೀಸ್ ಠಾಣಾಧಿಕಾರಿ ಷಣ್ಮುಗಪ್ಪ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸರಕಾರಿ ಬಸ್‍ಗಳ ಸಹಿತ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸದಂತೆ ನಿಗಾವಹಿಸಿದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಬಿಜೆಪಿ ಕಾರ್ಯಕರ್ತರು ಪೊಲೀಸರ ಹಸ್ತಕ್ಷೇಪವನ್ನು ಖಂಡಿಸಿ ವಾಕ್ಸಮರ ನಡೆಸಿದರು.ಪೊಲೀಸರು ಸರಕಾರದ ಸೂಚನೆ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ಬಂದ್‍ಗೆ ಅವಕಾಶವಿಲ್ಲವೆಂದು, ಸ್ವಯಂ ಪ್ರೇರಿತರಾಗಿ ಬೆಂಬಲಿಸುವದಕ್ಕೆ ಮಾತ್ರ ಅವಕಾಶವಿದ್ದು, ಯಾರೂ ವಾಹನಗಳನ್ನು ತಡೆಯದಂತೆ ಸೂಚಿಸಿ ಬಿಜೆಪಿ ಕಾರ್ಯಕರ್ತರ ಟೀಕೆಗೆ ಒಳಗಾದರು.
ಬೋಪಯ್ಯ ಕಿಡಿ: ಈ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಕೊಡಗಿನ ವರ್ತಕ ಸಮುದಾಯ, ಜನತೆ, ವಾಹನ ಚಾಲಕ-ಮಾಲೀಕರ ಸಹಿತ ಎಲ್ಲ ವರ್ಗದ ಜನತೆ ಸ್ವಯಂ ಪ್ರೇರಿತರಾಗಿ ಬಂದ್ ಬೆಂಬಲಿಸಿದ್ದು, ಪೊಲೀಸರು ರಾಜಕೀಯ ಪಕ್ಷವೊಂದರ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
(ಮೊದಲ ಪುಟದಿಂದ)
ಬಿಜೆಪಿ ಕಾರ್ಯಕರ್ತರು ಬಂದ್ ಯಶಸ್ವಿಗೆ ಶ್ರಮಿಸಲಿದ್ದು, ಪೊಲೀಸರು ಕಾನೂನಿನ ಅಡಿಯಲ್ಲಿ ಶಾಂತಿ-ಸುವ್ಯವಸ್ಥೆ ಕೈಗೊಳ್ಳುವ ಹೊರತಾಗಿ ಗೊಂದಲ ಸೃಷ್ಟಿಸಲು ಮುಂದಾಗಿದ್ದು, ಈ ವರ್ತನೆಯನ್ನು ತಿದ್ದಿಕೊಳ್ಳಬೇಕೆಂದು ಆಗ್ರಹಿಸಿದರು.
ಅಂಗಡಿಗಳ ಬಂದ್: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶಾಲಾ ಕಾಲೇಜುಗಳ ಸಹಿತ ಬಹುತೇಕ ಅಂಗಡಿ, ಹೊಟೇಲ್‍ಗಳು, ಬ್ಯಾಂಕ್‍ಗಳು ಬಾಗಿಲು ಮುಚ್ಚಿಕೊಂಡಿದ್ದರೆ, ಇಲ್ಲಿನ ಸರಕಾರಿ ಪ.ಪೂ. ಕಾಲೇಜು, ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬೋಧಕ ವರ್ಗದೊಂದಿಗೆ ಕೈಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಬಂದಿರುವದು ಗೋಚರಿಸಿತು.
ಕೊಡಗು ವಿದ್ಯಾಲಯ ಹಾಗೂ ಸಂತ ಮೈಕಲ್ಲರ ಶಾಲೆಗಳಿಗೆ ಬೆಳಿಗ್ಗೆ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಗೆ ಬಂದಿದ್ದ ಮಕ್ಕಳು ಪುಸ್ತಕಗಳನ್ನು ಪಡೆದು ಹಿಂತಿರುಗಿದರು. ಸಂತ ಜೋಸೆಫರ ಶಾಲೆಯಲ್ಲಿ ಮಧ್ಯಾಹ್ನ 12 ಗಂಟೆವರೆಗೆ ತರಗತಿ ನಡೆಸಿ ನಂತರ ರಜೆ ನೀಡಲಾಯಿತು.
ಪ್ರಥಮ ದಿನದಂದು ಪ್ರಾರಂಭೋತ್ಸವಕ್ಕೆ ತಯಾರಿಯೊಂದಿಗೆ, ತಾ. 29 ರಿಂದ ಅಧಿಕೃತ ತರಗತಿಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಶಿವರಾಂ ಸ್ಪಷ್ಟಪಡಿಸಿದರು.
ವ್ಯಾಪಾರವಿಲ್ಲ...: ನಗರದ ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಮೀನು, ಕೋಳಿ, ಹಣ್ಣು ಅಂಗಡಿಗಳು ಒಂದು ಸಮುದಾಯ ತೆರೆದಿರುವದು ಕಂಡು ಬಂದಿತ್ತಾದರೂ ವ್ಯಾಪಾರ ವಿರಳವಿತ್ತು. ನಗರದ ಅಲ್ಲಲ್ಲಿ ಸಣ್ಣಪುಟ್ಟ ಕ್ಯಾಂಟೀನ್, ಮಳಿಗೆಗಳಲ್ಲಿ ಅಪೂರ್ಣ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದು ಕಾಣಬಂತು. ಆದರೆ ಗ್ರಾಹಕರಿಲ್ಲದೆ ವ್ಯಾಪಾರ ವಹಿವಾಟು ಇರಲಿಲ್ಲ.
ವಾಹನಗಳ ಓಡಾಟ: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಖಾಸಗಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತವಿದ್ದು, ಪ್ರವಾಸಿ ಬಸ್‍ಗಳ ಸಹಿತ ಇತರ ವಾಹನಗಳು ಸಂಚರಿಸುವದು ಗೋಚರಿಸಿತು. ಕೆಲವು ಆಟೋರಿಕ್ಷಾಗಳು ಸಂಚರಿಸಿದವು.
ಆಸ್ಪತ್ರೆಯಲ್ಲಿ: ಬಂದ್ ಕರೆಯಿದ್ದರೂ ವಾಹನಗಳ ಓಡಾಟವಿದ್ದುದರಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮಾಮೂಲಿಯಂತೆ ಕಂಡುಬಂದರು. ವೈದ್ಯರುಗಳು ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದುದು ಕಂಡುಬಂತು.
ಲಾರಿಗೆ ತಡೆ: ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಮಂಗಳೂರು ರಸ್ತೆ ಕಡೆಯಿಂದ ಒಂದಾದ ನಂತರ ಮತ್ತೊಂದು ಭಾರೀ ಸರಕು ಲಾರಿಗಳು ಬಂದವು. ಈ ಲಾರಿಗಳನ್ನು ತಡೆದ ಪ್ರತಿಭಟನಾಕಾರರು, ರಾತ್ರಿ ವೇಳೆ ಸಂಚರಿಸಬೇಕಾದ ಲಾರಿಗಳು ಹಗಲು ವೇಳೆ ಬಂದಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸರು ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಚಾಲಕರಿಗೆ ಸೂಚಿಸಿ, ಅಲ್ಲಿಂದ ಕಳುಹಿಸಿದರು.
ಡಿವೈಎಸ್‍ಪಿ ಸುಂದರರಾಜ್, ಇನ್ಸ್‍ಪೆಕ್ಟರ್ ಉಮೇಶ ಉಪ್ಪಳಿಕೆ ಸೇರಿದಂತೆ ಜಿಲ್ಲಾ ಸಶಸ್ತ್ರ ಪಡೆ, ಮೀಸಲು ಪೊಲೀಸರು ಸಹಿತ ನಕ್ಸಲ್ ನಿಗ್ರಹದಳ ಹಾಗೂ ಸಂಚಾರಿ ಪೊಲೀಸರು ಖುದ್ದು ರಸ್ತೆ ಗಿಳಿದು ಖಾಸಗಿ ಮತ್ತು ಸರಕಾರಿ ವಾಹನಗಳು, ಬಸ್ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಕೆಲವರು ವಾಹನಗಳಲ್ಲಿ ಕಚೇರಿ ಹಾಗೂ ದೈನಂದಿನ ಕೆಲಸಗಳಿಗೆ ಆಗಮಿಸುತ್ತಿರುವದು ಕಂಡುಬಂತು.
ಮಾಂಸ ವ್ಯಾಪಾರವಿಲ್ಲ...: ಮಾರುಕಟ್ಟೆ ಬಳಿ ಕೋಳಿ-ಕುರಿಮಾಂಸದ ಅಂಗಡಿಗಳು ತೆರೆದಿದ್ದವಾದರೂ ಕೊಳ್ಳಲು ಗ್ರಾಹಕರಿಲ್ಲದೆ ಅಂಗಡಿಯವರು ಗ್ರಾಹಕರಿಗಾಗಿ ಕಾದುಕುಳಿತ್ತಿದ್ದ ದೃಶ್ಯ ಗೋಚರಿಸಿತು.
ಸ್ವಚ್ಛತಾ ಕಾರ್ಯ: ನಗರವಿಡೀ ಬಂದ್ ಆಚರಣೆಯಲ್ಲಿದ್ದರೇ, ನಗರಸಭೆ ಪೌರ ಕಾರ್ಮಿಕರು ಮಾತ್ರ ತಮ್ಮ ಕಾಯಕದಲ್ಲಿ ತಲ್ಲೀನರಾಗಿದ್ದರು. ಕಸ ಸಂಗ್ರಹಣೆಯ ವಾಹನಗಳು ನಗರ ಸಂಚಾರ ಮಾಡಿದರೆ, ಕಾರ್ಮಿಕರು ರಸ್ತೆಯುದ್ದಕ್ಕೂ ಶುಚಿಗೊಳಿಸುತ್ತಿದ್ದದು ಕಂಡು ಬಂತು.
ಭಾಗಮಂಡಲ: ಭಾಗಮಂಡಲ-ಚೇರಂಬಾಣೆ ವಿಭಾಗಗಳಲ್ಲಿ ಬಂದ್ ಯಶಸ್ವಿಯಾಯಿತು. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ವಾಹನಗಳ ಸಂಚಾರ ಎಂದಿನಂತೆ ಇತ್ತು. ಕ್ಷೇತ್ರಗಳಲ್ಲಿ ಭಕ್ತರ ಓಡಾಟ ಕಂಡುಬಂದಿತು.
ಕರಿಕೆ: ರೈತರ ಸಾಲ ಮನ್ನ ವಿಚಾರದಲ್ಲಿ ರಾಜ್ಯ ಸರಕಾರ ರೈತರಿಗೆ ಮೋಸ ಮಾಡಿದ್ದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ರಾಜ್ಯ ಬಂದ್, ರಾಜ್ಯದ ಗಡಿ ಗ್ರಾಮ ಕರಿಕೆ ಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದು, ಶಾಲಾ ವಾಹನ, ಹಾಲಿನ ವಾಹನ ಮತ್ತು ತುರ್ತು ಕೆಲಸದ ನಿಮಿತ್ತ ತೆರಳುವ ವಾಹನಗಳ ಸಂಚಾರಕ್ಕೆ ಯಾವದೇ ಅಡ್ಡಿಯಾಗಿಲ್ಲ. ಗಡಿಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಬಿಜೆಪಿ ಮುಖಂಡರು ಖಾಸಗಿ ಬಸ್ ಸೇರಿದಂತೆ ಇತರ ವಾಹನಗಳನ್ನು ತಡೆದು ನಿಲ್ಲಿಸಿ ಮರಳಿ ಕಳುಹಿಸುತ್ತಿದ್ದರು.ಮೂರು ಮದ್ಯದ ಅಂಗಡಿಯಿರುವ ಚೆಂಬೇರಿಯಲ್ಲಿ ಯಾವಾಗಲೂ ಕೇರಳದ ಪಾನ ಪ್ರಿಯರಿಂದ ತುಂಬಿ ತುಳುಕುತ್ತಿದ್ದರೂ, ಇಂದು ಬಂದ್‍ನಿಂದ ಬಿಕೋ ಅನಿಸುತ್ತಿತ್ತು. ರಸ್ತೆ ತಡೆ ಸಂದರ್ಭದಲ್ಲಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಹೊದಮನೆ ಹರೀಶ್, ರಮೇಶ್, ಬಾಬು ಬಿ.ಸಿ. ರಾಮಚಂದ್ರ ಸೇರಿದಂತೆ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಾಪೋಕ್ಲು: ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಪಕ್ಷದ ವತಿಯಿಂದ ಕರೆಯಲಾಗಿದ್ದ ಬಂದ್‍ಗೆ ನಾಪೆÇೀಕ್ಲುವಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ.ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.ಪಟ್ಟಣದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳನ್ನು ಬಂದ್‍ಗೆ ಬೆಂಬಲವಾಗಿ ಮುಚ್ಚಲಾಗಿತ್ತು. ಖಾಸಗಿ ವಾಹನಗಳು, ಆಟೋ ರಿಕ್ಷಾಗಳು ಎಂದಿನಂತೆ ಓಡಾಟ ನಡೆಸಿದವು.
ಮಧ್ಯಾಹ್ನದವರೆಗೆ ಬಂದ್‍ಗೆ ಬೆಂಬಲವಿದ್ದರೂ, ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಯಿತು. ಸಂತೆಯಲ್ಲಿ ಜನಸಂಖ್ಯೆ ವಿರಳವಾಗಿತ್ತು. ಶಾಲಾ ಆರಂಭದ ದಿನವೇ ಶಿಕ್ಷಕರು ಪರದಾಡಿದರು. ಸರಕಾರಿ ಶಾಲೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗೆ ಬರಲು ಖಾಸಗಿ ಬಸ್‍ಗಳಿಲ್ಲದೆ ಶಾಲಾ ಆರಂಭದ ದಿನವೇ ವಿಘ್ನವಾಯಿತು. ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಬಸ್ ಸಂಚಾರವಿಲ್ಲದೇ ಗ್ರಾಮೀಣ ಪ್ರದೇಶಗಳಿಂದ ಸಂತೆಗೆ ಜನರು ಆಗಮಿಸದೇ ಪರೋಕ್ಷವಾಗಿ ಬಂದ್‍ಗೆ ಬೆಂಬಲ ಘೋಷಿಸಿದಂತೆ ಕಂಡುಬಂತು.