ಸೋಮವಾರಪೇಟೆ,ಮೇ.28: ಸೋಮವಾರಪೇಟೆಯಲ್ಲಿ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಬಲವಂತದ ಬಂದ್ ಮಾಡಿಸಿದ್ದು, ಇವರುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಕ್ಷೇತ್ರ ಸಮಿತಿಯ ಪ್ರಮುಖರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ವಿಧಾನ ಸಭೆಯಲ್ಲಿ ಹೋರಾಟ ಮಾಡುವ ಬದಲು ಸ್ಥಳಿಯವಾಗಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬಲವಂತದ ಬಂದ್ ನಡೆಸಿರುವದು ಖಂಡನೀಯ ಎಂದರು.
ಬಿಜೆಪಿಯ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಹಣಬಲ, ಗೂಂಡಾಗಿರಿ, ಮತಯಂತ್ರದ ದೋಷದಿಂದ ಬಿಜೆಪಿ ಗೆಲುವು ಸಾಧಿಸಿದೆ. ಸೋಮವಾರ ಸಂತೆ ದಿನವಾಗಿದ್ದು ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಬಂದ್ ಅಡ್ಡಿಯಾಗಿದೆ. ಶಾಸಕರು ವಿಧಾನ ಸಭೆಯಲ್ಲಿ ರೈತರ ಪರ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರೈತಪರ ಕಾಳಜಿ ಎಲ್ಲಿ ಹೋಗಿತ್ತು? ರೈತರ ಮೇಲೆ ಗೋಲಿಬಾರ್ ಮಾಡಿಸಿದವರಿಗೆ ಇದೀಗ ರಾಜಕೀಯಕ್ಕಾಗಿ ರೈತರ ಬಗ್ಗೆ ಕಾಳಜಿ ಬಂದಿದೆ ಎಂದು ಸುರೇಶ್ ಟೀಕಿಸಿದರು. ಇಂತಹ ಬಂದ್ಗಳು ಮುಂದುವರೆದರೆ ಜೆಡಿಎಸ್ನಿಂದ ತಕ್ಕ ಪ್ರತಿಭಟನೆ ವ್ಯಕ್ತವಾಗಲಿದೆ ಎಂದು ಎಚ್ಚರಿಸಿದರು.
ಪಕ್ಷದ ಕಾರ್ಯದರ್ಶಿ ಕೆ.ಟಿ. ಪರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ರೈತಪರ ಕಾಳಜಿ ತೋರದ ಹಿನ್ನೆಲೆ ಬಿಜೆಪಿಯವರು ಮೋದಿ ಸರ್ಕಾರದ ವಿರುದ್ಧ ಬಂದ್ ಮಾಡಬೇಕಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಬಗ್ಗೆ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಿಂದ ತಲಾ 50 ಸಾವಿರ ಸಾಲಮನ್ನಾ ಆಗಿದ್ದು, ವಿಎಸ್ಎಸ್ಎನ್ಗಳಿಗೆ ಹಣ ಬಂದಿದೆ. ಕುಮಾರಸ್ವಾಮಿ ಅವರು ಈ ಬಾರಿ ರೈತರನ್ನು ಋಣಮುಕ್ತರನ್ನಾಗಿ ಮಾಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ವರ್ತಕರ ಸಂಘದವರು ಬಿಜೆಪಿಯ ಏಜೆಂಟ್ನಂತೆ ವರ್ತಿಸಿರುವದು ಖಂಡನೀಯ ಎಂದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ ಮಾತನಾಡಿ, ಜೆಡಿಎಸ್ ಪ್ರತಿಭಟನೆಗೆ ಬಿಜೆಪಿಯವರು ತಡೆಯೊಡ್ಡಿದ್ದಾರೆ. ಪೊಲೀಸರು ನಮಗೆ ಸರಿಯಾದ ಸಹಕಾರ ನೀಡಿಲ್ಲ ಎಂದು ಆರೋಪಿಸಿದರಲ್ಲದೇ, ಮುಂದಿನ ದಿನಗಳಲ್ಲಿ ಸೋಮವಾರದಂದು ಬಂದ್ ನಡೆಸಲು ಜೆಡಿಎಸ್ ಅವಕಾಶ ನೀಡುವದಿಲ್ಲ ಎಂದರು.
ಎಪಿಎಂಸಿ ಸದಸ್ಯ ನಾಗರಾಜ್ ಮಾತನಾಡಿ, ಬಿಜೆಪಿಯ ಬಂದ್ನಿಂದಾಗಿ ರೈತರು ಮತ್ತು ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಬ್ಯಾಂಕ್ಗಳನ್ನು ಬಂದ್ ಮಾಡಿಸಿರುವ ಬಿಜೆಪಿ ಕ್ರಮ ಖಂಡನೀಯ. ಯಡಿಯೂರಪ್ಪ ಅವರು ತಕ್ಷಣಕ್ಕೆ ಸಾಲ ಮನ್ನಾ ಘೋಷಣೆ ಮಾಡಿ ಇದೀಗ ಬಂದ್ಗೆ ಕರೆ ನೀಡಿದ್ದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.
ರಾಜಕೀಯ ಪ್ರತಿಷ್ಠೆಗಾಗಿ ಬಂದ್ ಮಾಡಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಾಗರಾಜ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಪಕ್ಷದ ಕ್ಷೇತ್ರ ಸಮಿತಿ ಕಾರ್ಯದರ್ಶಿ ಚಂಗಪ್ಪ, ಗೌಡಳ್ಳಿ ವಲಯ ವಕ್ತಾರ ಸಿ.ಎನ್. ಅಶ್ವಥ್ ಅವರುಗಳು ಉಪಸ್ಥಿತರಿದ್ದರು.