ಮಡಿಕೇರಿ, ಮೇ 29: ಮುಂಗಾರು ಮಳೆ ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದ್ದಾರೆ.
ಪ್ರಸಕ್ತ ಮುಂಗಾರು ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆ ಯಾಗುತ್ತಿದೆ. ಆ ನಿಟ್ಟಿನಲ್ಲಿ ಜೂನ್ ಮೊದಲ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಹಂತದ ಅಧಿಕಾರಿಗಳು ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಕಾರ್ಯ ಪ್ರವೃತ್ತರಾಗಬೇಕಿದೆ ಎಂದರು.
ವರ್ಷಧಾರೆ ಹೆಚ್ಚಾದ ಸಂದರ್ಭದಲ್ಲಿ ಪ್ರವಾಹ, ಬರೆ ಕುಸಿತ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾಗುವ ಸಾಧ್ಯತೆಗಳಿದ್ದು, ಅಂತಹ ಸಂದರ್ಭ ತಕ್ಷಣವೇ ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದರು.
ಮಡಿಕೇರಿ ತಾಲೂಕಿನ ಭಾಗಮಂಡಲ, ಅಯ್ಯಂಗೇರಿ, ನಾಪೋಕ್ಲು, ಬಲಮುರಿ, ವೀರಾಜಪೇಟೆ ತಾಲೂಕಿನ ಕರಡಿ ಗೋಡು, ದುಬಾರೆ ಮತ್ತು ಲಕ್ಷ್ಮಣ ತೀರ್ಥ ಹಾಗೂ ಸೋಮವಾರಪೇಟೆ ತಾಲೂಕಿನ ಗುಹ್ಯ, ಕಣಿವೆ, ನೆಲ್ಲಿಹುದಿಕೇರಿ ಇನ್ನು ಹಲವು ಕಡೆ ರಸ್ತೆ, ಭೂ ಪ್ರದೇಶ ಪ್ರವಾಹ ಸಂದರ್ಭದಲ್ಲಿ ಜಲಾವೃತವಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಅನಾಹುತಗಳಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರವಾಹ ಸಂದರ್ಭ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಶಾಲೆ ಹಾಗೂ ಸಮುದಾಯ ಭವನಗಳಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆಯುವ ಬಗ್ಗೆ ತಹಶೀಲ್ದಾರರು ಮತ್ತು ಸ್ಥಳೀಯ ಗ್ರಾ.ಪಂ. ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಭೂ ಕುಸಿತ ಹಾಗೂ ರಸ್ತೆಯ ಮೇಲೆ ಮರ ಬಿದ್ದು, ಸಾರಿಗೆ ಸಂಪರ್ಕ ಕಡಿದು ಹೋಗುವ ಸಂದರ್ಭ ಲೋಕೋಪಯೋಗಿ, ಅರಣ್ಯ, ಗ್ರಾಮೀಣ ಅಭಿವೃದ್ಧಿ ಇಂಜಿನಿಯ ರಿಂಗ್ ವಿಭಾಗ, ಸೆಸ್ಕ್ ಇಲಾಖೆಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾವೇರಿ ನದಿ ಪಾತ್ರದ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವದರ ಜೊತೆಗೆ ಗಂಜಿ ಕೇಂದ್ರ ತೆರೆಯುವದು, ನಿರಾಶ್ರಿತ ರನ್ನು ಸ್ಥಳಾಂತರ ಮಾಡುವದು ಮತ್ತಿತರ ಕಾರ್ಯಗಳನ್ನು ಚುರುಕಿ ನಿಂದ ನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಮುಂಗಾರು ಮಳೆ ಸಂದರ್ಭದಲ್ಲಿ ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಬಿದ್ದು, ಓಡಾಟಕ್ಕೆ ತೊಂದರೆ ಯಾಗಲಿದೆ. ಆದ್ದರಿಂದ ಜನ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವದು. ಅಗ್ನಿಶಾಮಕ ಇಲಾಖಾ ಅಧಿಕಾರಿಗಳು ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಯಾವದೇ ರೀತಿಯ ಹಾನಿಯಾಗ ದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವದು. ಹೋಂ ಗಾರ್ಡ್ಗಳನ್ನು ನಿಯೋಜಿಸುವದು, ನುರಿತ ತಜ್ಞ ಈಜುಗಾರರನ್ನು ಕಾಯ್ದಿರಿಸಿ ಕೊಳ್ಳುವದು ಮತ್ತಿತರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಅವರು ಸಲಹೆ ಮಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬರೆ ಕೆಳಗೆ ವಾಸಮಾಡುತ್ತಿರುವ ಜನರಿಗೆ ಮುನ್ನೆಚ್ಚರಿಕೆ ನೀಡಿ ತಾತ್ಕಾಲಿಕ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಮಳೆಗಾಲದಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವದು ಹಾಗೂ ಆ ಸಂದರ್ಭದಲ್ಲಿ ಹರಡುವ ಕಾಯಿಲೆಗಳಿಗೆ ಔಷಧಿಗಳನ್ನು ಮೊದಲೇ ದಾಸ್ತಾನು ಇರಿಸಿ ಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ನಗರ, ಪಟ್ಟಣ ಹಾಗೂ ಗ್ರಾ.ಪಂ. ಮಟ್ಟದಲ್ಲಿ ಶುಚಿತ್ವ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಮಳೆ ಮಾಪನ ಕೇಂದ್ರಗಳನ್ನು ಸುಸ್ಥಿಯಲ್ಲಿಟ್ಟುಕೊಳ್ಳಬೇಕು. ಅಪಾಯ ಸಂಭವಿಸಬಹುದಾದ ಮೂನ್ಸೂಚನೆ ಯನ್ನು ಪ್ರತಿ ದಿನ ದೂರವಾಣಿ ಮುಖಾಂತರ ಮಾಹಿತಿ ನೀಡಬೇಕು. ಜಲಾವೃತ ಸ್ಥಳವಾದ ಭಾಗಮಂಡಲ ಹಾಗೂ ದುಬಾರೆಯಲ್ಲಿ ಯಂತ್ರ ಚಾಲಿತ ದೋಣಿಗಳನ್ನು ನುರಿತ ಚಾಲಕರ ನೇಮಕಾತಿಯೊಂದಿಗೆ ಬಳಸಲು ವ್ಯವಸ್ಥೆ ಮಾಡಲಾಗುವದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅಗತ್ಯ ಬೋಟ್ ವ್ಯವಸ್ಥೆ, ಮುಳುಗು ತಜ್ಞರ ಪಟ್ಟಿ ಮತ್ತಿತರವನ್ನು ಗೃಹ ರಕ್ಷಕದಳ ಇಲಾಖೆಯವರು ಸಿದ್ಧತೆ ಮಾಡಿಕೊಳ್ಳುವಂತೆ ಗೃಹ ರಕ್ಷಕ ದಳದ ಅಧಿಕಾರಿಗೆ ತಿಳಿಸಲಾಯಿತು. ತುರ್ತು ಸಂದರ್ಭ ಬೇಕಾಗಬಹುದಾದಂತಹ ಸಾಧನ ಸಲಕರಣೆಗಳು ತಾಲೂಕು ಕೇಂದ್ರಗಳಲ್ಲಿ ಹಾಗೂ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಹಂತದಲ್ಲೂ ಇರಬೇಕಾಗುತ್ತದೆ ಎಂದರು.
ಮಳೆಗಾಲದಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಾಗ ಮಾಹಿತಿಯು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವದು ಕಷ್ಟವಾಗುವದರಿಂದ ನಗರಸಭೆ ಕಚೇರಿ ಹಾಗೂ ಪ್ರತಿ ತಾಲೂಕು ಕಚೇರಿಗಳಿಗೆ ಒಂದರಂತೆ ಮತ್ತು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಮ್ಗಳಲ್ಲಿ ವಯರ್ಲೆಸ್ ಬೇಸ್ಸೆಟ್ ನೀಡಿದ್ದು ಅದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮಳೆಗಾಲದ ಅವಧಿಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ರಜೆ ಬೇಕಿದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಕೇಂದ್ರ ಕಚೇರಿಯ ಸಭೆ-ಸಮಾರಂಭಗಳು ಇದ್ದಲ್ಲಿ ಗಮನಕ್ಕೆ ತಂದು ತೆರಳಬೇಕು ಎಂದು ಅವರು ಸೂಚಿಸಿದರು.
ಅತಿವೃಷ್ಟಿಯಿಂದ ಉಂಟಾಗುವ ಹಾನಿ ಸಂಬಂಧ ತಕ್ಷಣವೇ ವರದಿ ಕಳುಹಿಸಬೇಕು, ಜೊತೆಗೆ ಒಂದು ವಾರದೊಳಗೆ ಪರಿಹಾರ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರವಾಹ ಉಂಟಾಗುವ ಪ್ರದೇಶ ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ತಹಶೀಲ್ದಾರರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಿಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಭಾಗಮಂಡಲದಲ್ಲಿ ಹೆಚ್ಚಿನ ಮಳೆಯಾದ ಸಂದರ್ಭ ಪ್ರವಾಹ ಉಂಟಾಗುತ್ತದೆ.
ಇಂತಹ ಸಂದರ್ಭ ಅಧಿಕಾರಿಗಳು ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಅನಾಹುತಗಳನ್ನು ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್ ಅವರು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬರೆ ಕುಸಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ಪ್ರದೇಶಗಳಲ್ಲಿ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಮೈಕಲ್ ಅವರು ನಿಯಂತ್ರಣ ಕೊಠಡಿಗೆ ನಿಯೋಜಿಸಿರುವ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಸಹಕರಿಸುವಂತೆ ಸಭೆಯ ಗಮನಕ್ಕೆ ತಂದರು.
ಡಿವೈಎಸ್ಪಿ ಸುಂದರರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಗೃಹ ರಕ್ಷಕದಳದ ಅಧಿಕಾರಿ ಚಂದನ್, ಸೆಸ್ಕ್ ಇಇ ಸೋಮಶೇಖರ, ಲೋಕೋಪ ಯೋಗಿ ಇಲಾಖೆ ಇಇ ವಿನಯ ಕುಮಾರ್, ಪೌರಾಯುಕ್ತೆ ಬಿ. ಶುಭಾ, ತಹಶೀಲ್ದಾರರಾದ ಶಾರದಾಂಭ, ಗೋವಿಂದರಾಜು, ಬಾಡ್ಕರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಸುರೇಶ್, ಎಇಇಗಳಾದ ಇಬ್ರಾಹಿಂ, ಸ್ವಾಮಿ, ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್, ತಾ.ಪಂ. ಇಒಗಳಾದ ಜೀವನ್ ಕುಮಾರ್, ಮತ್ತಿತರರು ಪ್ರವಾಹ ಮುನ್ನೆಚ್ಚರಿಕೆ ನಿಭಾಯಿಸುವ ಸಂಬಂಧ ಹಲವು ಮಾಹಿತಿ ನೀಡಿದರು.