ಮಡಿಕೇರಿ, ಮೇ 28: ಇತ್ತೀಚೆಗೆ ಜನರನ್ನು ಕಾಡುತ್ತಿರುವ ರೋಗ ಬಾವಲಿ ಜ್ವರ ಕುರಿತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ನಿಫಾ ವೈರಸ್‍ನಿಂದ ಈ ರೋಗ ಹರಡುತ್ತಿದ್ದು, ಈ ಬಗ್ಗೆ ಜಾಗ್ರತೆ ವಹಿಸಬೇಕು. ಹಂದಿಗಳನ್ನು ಸಾಕುವವರು ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಕ್ಕಿಗಳು, ಬಾವಲಿಗಳು ಕಚ್ಚಿದಂತಹ ಹಣ್ಣುಗಳನ್ನು ಮಕ್ಕಳು ತಿನ್ನದಂತೆ ಹಿರಿಯರು ಎಚ್ಚರದಿಂದ ನೋಡಿಕೊಳ್ಳಬೇಕು ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆಗಳನ್ನು ಪಡೆದು ಬೇಕಾದಂತಹ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಕೊಡಗು ಜಿಲ್ಲೆಯು ಪ್ರವಾಸಿ ತಾಣವಾಗಿರುವದರಿಂದ ಪ್ರವಾಸಿಗರು ಹೊರ ರಾಜ್ಯದಿಂದ ಆಗಮಿಸುತ್ತಿರುವದು ಸಹಜ. ಇದರಿಂದ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಹೊರ ರಾಜ್ಯಗಳಿಗೆ ಹೋಗಿ ಬಂದರೆ ಆರೋಗ್ಯದಲ್ಲಿ ಏರು-ಪೇರು ಕಂಡು ಬಂದರೆ ಆರೋಗ್ಯ ಇಲಾಖೆಯವರಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ತಿಳಿಸಿದ್ದಾರೆ.