ಸಿಎಂ ವಿರುದ್ಧ ಯಡಿಯೂರಪ್ಪ ಅಸಮಾಧಾನ

ಬೆಂಗಳೂರು, ಮೇ 28: ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ ಅವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದ ರಾಜ್ಯ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಕರ್ನಾಟಕದ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಅವರ ಹೇಳಿಕೆ ನಾಡಿನ ಜನತೆಗೆ ಮಾಡಿದ ಅಪಚಾರ. ಹೀಗಾಗಿ ಅವರು ಯಾವ ಮುಲಾಜು ಇಲ್ಲದೆ ಜನರ ಕ್ಷಮೆಯಾಚಿಸಲಿ ಎಂದರು. ರೈತರ ಸಾಲ ಮನ್ನಾ ಸಂಬಂಧ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಅವರು ಸಾಲ ಮನ್ನಾಗೆ ಒಂದು ವಾರದ ಕಾಲಾವಧಿ ಕೇಳಿದ್ದಾರೆ. ಒಂದು ವಾರ ಕಾಯುತ್ತೇವೆ, ಬಳಿಕ ಮತ್ತೆ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಬೆಂಗಳೂರು ಹೊರತು ರಾಜ್ಯದೆಲ್ಲೆಡೆ ಬಂದ್ ಯಶಸ್ವಿಯಾಗಿದೆ. ಬಂದ್‍ಗಾಗಿ ಯಾವ ಸಂಘಟನೆಗಳ ಬೆಂಬಲ ಕೋರಿರಲಿಲ್ಲ. ಸರ್ಕಾರ ಬಂದ್ ಮಾಡದೆ ಇರಲು ಪೆÇಲೀಸರನ್ನು ಬಳಸಿದೆ, ಬಿಜೆಪಿಯ ಸಂಸದರು, ಶಾಸಕರನ್ನು ಬಂಧಿಸಲಾಗಿದೆ. ಹಾಗಾದರೆ ಈ ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೂ ಅವಕಾಶವಿಲ್ಲದೆ ಹೋಗಿದೆಯೆ? ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಸಿಂಹ ಬಂಧನ-ಬಿಡುಗಡೆ

ಮೈಸೂರು, ಮೇ 28: ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆ ಬಸ್‍ಗಳನ್ನು ತಡೆಯಲು ಮುಂದಾಗಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡರು. ಕರ್ನಾಟಕ ಬಂದ್ ಹಿನ್ನೆಲೆ ಮೈಸೂರು ಬನ್ನಿಮಂಟಪ ಡಿಪೆÇೀ ಬಳಿ ಪ್ರತಿಭಟನೆ ನಡೆಸಲಾಗುತಿತ್ತು. ಆಗ ಸಂಸದ ಪ್ರತಾಪ್ ಸಿಂಹ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ತಕ್ಷಣ ಪೆÇಲೀಸರು ಬಂದು ಪ್ರತಾಪ್ ಸಿಂಹ ಹಾಗೂ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು. ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ಜನರ ಮುಲಾಜಿನಲ್ಲಿ ಇಲ್ಲ ಎಂದರೆ ಏನರ್ಥ? ಜನರ ಮುಲಾಜಿನಲ್ಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ. ಕುಮಾರಸ್ವಾಮಿಯವರು ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಭರವಸೆ ನೀಡಿದ್ದರು. ಅವರು ಭರವಸೆಯಂತೆ ಸಾಲಮನ್ನ ಮಾಡಲಿ. ಯಡಿಯೂರಪ್ಪ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಲು ಮುಂದಾಗಿದ್ದರು.

ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ವಿಧಿವಶ

ಬಾಗಲಕೋಟೆ, ಮೇ 28: ಗೋವಾದಿಂದ ವಾಪಸ್ ಬರುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ವಿಧಿವಶರಾಗಿದ್ದಾರೆ. 70 ವರ್ಷದ ಸಿದ್ದು ನ್ಯಾಮಗೌಡ ಅವರು ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ಬಾಗಲಕೋಟೆಯ ತುಳುಸಿಗೇರಿ ಬಳಿ ಎದುರಿಗೆ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸಿದ್ದು ನ್ಯಾಮಗೌಡ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರ ಎದೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಆದರೆ ಬದುಕಿಸಿಕೊಳ್ಳುವ ಆಸೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ವೈದ್ಯರು ಸಿದ್ದು ಅವರು ಮೃತಪಟ್ಟಿರುವದಾಗಿ ದೃಢಪಡಿಸಿದ್ದಾರೆ. ಕಲಾದಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಪೆÇಲೀಸರು ದಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇಂದು ಸಿಬಿಎಸ್‍ಇ 10 ನೇ ತರಗತಿ ಫಲಿತಾಂಶ

ನವದೆಹಲಿ, ಮೇ 28: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‍ಇ) 10 ನೇ ತರಗತಿಯ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. 2017-18ನೇ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಸಂಜೆ 4 ಗಂಟೆಗೆ ಪ್ರಕಟಗೊಳ್ಳಲಿದೆ ಎಂದು ಸಿಬಿಐಎಸ್‍ಇ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಪರೀಕ್ಷೆಗೂ ಮುನ್ನವೇ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಭಾರತಕ್ಕೆ ಬರಲಿದೆ ಟ್ರಯಂಫ್ ರಕ್ಷಣಾ ಕ್ಷಿಪಣಿ

ನವದೆಹಲಿ, ಮೇ 28: ರಕ್ಷಣಾ ಕ್ಷಿಪಣಿಗಳಿಗೆ ಸಂಬಂಧಿಸಿದಂತೆ ರಷ್ಯಾದೊಂದಿಗೆ ಭಾರತದ ಮಾತುಕತೆ ಬಹುತೇಕ ಯಶಸ್ವಿಯಾಗಿದ್ದು, ಶೀಘ್ರವೇ ಸಿಗಲಿದೆ S-400 ಟ್ರಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆ ಕೈ ಸೇರಲಿದೆ. ರಷ್ಯಾದೊಂದಿಗೆ ಯಾವದೇ ರೀತಿಯ ರಕ್ಷಣಾ ಹಾಗೂ ಗುಪ್ತಚರ ಸಂಸ್ಥೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು ಅಥವಾ ದೇಶಗಳ ವಿರುದ್ಧ ಕ್ರಮ ಜರುಗಿಸುವ ಅಮೇರಿಕಾದ ಕಾನೂನನ್ನು ಎದುರಿಸುವದಕ್ಕೆ ಇರುವ ಮಾರ್ಗಗಳ ಬಗ್ಗೆ ಎರಡೂ ರಾಷ್ಟ್ರಗಳು ಚರ್ಚೆ ನಡೆಸುತ್ತಿವೆ ಎಂದು ಭಾರತೀಯ ವಾಯುಪಡೆ ಅಧಿಕಾರಿ ತಿಳಿಸಿದ್ದಾರೆ. ಸುಮಾರು 40,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದು 2018 ರ ಅಕ್ಟೋಬರ್‍ನಲ್ಲಿ ಪ್ರಧಾನಿ ಮೋದಿ-ಪುಟಿನ್ ಭೇಟಿಯಾಗುವದಕ್ಕೂ ಮುನ್ನ ಈ ಒಪ್ಪಂದವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭಾರತಕ್ಕೆ ದೂರಗಾಮಿ ಕ್ಷಿಪಣಿ ವ್ಯವಸ್ಥೆಗಳ ಅಗತ್ಯವಿದ್ದು ಚೀನಾ-ಭಾರತದ ಗಡಿಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಲು ಈ ಕ್ಷಿಪಣಿಗಳನ್ನು ಬಳಕೆ ಮಾಡಲಾಗುತ್ತದೆ. S-400 ಟ್ರಯಂಫ್ 400 ಕಿ.ಮೀ.ವರೆಗೆ ಒಳಬರುವ ಕ್ಷಿಪಣಿಗಳು ಹಾಗೂ ಪ್ರತಿಕೂಲ ವಿಮಾನಗಳು, ಡ್ರೋನ್‍ಗಳನ್ನು ನಾಶ ಮಾಡುವ ಸಾಮಥ್ರ್ಯ ಹೊಂದಿದೆ.

ಪವಿತ್ರ ಸ್ನಾನಕ್ಕೆ ಚೀನಾ ಅಡ್ಡಿ

ನವದೆಹಲಿ, ಮೇ 28: ಕೈಲಾಸ ಮಾನಸ ಸರೋವರದಲ್ಲಿ ಪವಿತ್ರ ಸ್ನಾನಕ್ಕೆ ಚೀನಾ ಅಡ್ಡಿ ಪಡಿಸುತ್ತಿದೆ ಎಂದು ಭಾರತೀಯ ಯಾತ್ರಿಕರು ಆರೋಪ ಮಾಡಿದ್ದಾರೆ. ಮಾನಸ ಸರೋವರ ಯಾತ್ರೆಗೆ ನಾತು-ಲಾ ಪಾಸ್ ಪ್ರದೇಶವನ್ನು ಮುಕ್ತಗೊಳಿಸುವದಕ್ಕೆ ಸಂಬಂಧಿಸಿದಂತೆ ಚೀನಾ-ಭಾರತದ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಭಾರತದ ಯಾತ್ರಾರ್ಥಿಗಳಿಂದ ಆರೋಪ ಕೇಳಿಬಂದಿದೆ. ತಾ. 8 ರಂದು ಚೀನಾ ಅಧಿಕಾರಿಗಳೊಂದಿಗೆ ಮಾತುಕತೆ ಬಳಿಕ ಯಾತ್ರೆಗೆ ನಾತು-ಲಾ ಪಾಸ್ ಪ್ರದೇಶ ಮುಕ್ತವಾಗಿದೆ ಎಂದು ಸುಷ್ಮಾ ಸ್ವರಾಜ್ ಘೋಷಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾನಸ ಸರೋವರದಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಚೀನಾ ಅಡ್ಡಿಪಡಿಸುತ್ತಿದೆ ಎಂದು ಭಾರತೀಯ ಯಾತ್ರಿಕರಿಂದ ಆರೋಪ ಕೇಳಿಬಂದಿದೆ. ಪ್ರತಿ ವರ್ಷ ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಮಾನಸ ಸರೋವರ ಯಾತ್ರೆಯನ್ನು ಆಯೋಜಿಸುತ್ತದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಹಕಾರದಲ್ಲಿ ಆಯೋಜನೆಯಾಗುವ ಈ ಯಾತ್ರೆಯನ್ನು ಲಿಪುಲೇಖ್ ಪಾಸ್ ಹಾಗೂ ನಾತುಲಾ ಪಾಸ್ (ಸಿಕ್ಕಿಂ) ಮೂಲಕ ತಲಪಬಹುದಾಗಿದೆ.

ಯುಪಿ ವಿ.ವಿ.ಯಿಂದ ವಿದ್ಯಾರ್ಥಿ ವೇತನ

ಜಮ್ಮು, ಮೇ 28: ಉತ್ತರ ಪ್ರದೇಶ ಮೂಲದ ಸಂಸ್ಕೃತಿ ವಿಶ್ವವಿದ್ಯಾಲಯವೊಂದು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿ ವಿದ್ಯಾರ್ಥಿ ವೇತನ ನೀಡುವದಾಗಿ ಸೋಮವಾರ ಘೋಷಿಸಿದೆ. ಸಂಸ್ಕೃತಿ ವಿಶ್ವವಿದ್ಯಾಲಯ ನೇಮಕಾತಿ ಭರವಸೆಯೊಂದಿಗೆ ಹಲವು ಹೊಸ ಹೊಸ ಕೋರ್ಸ್‍ಗಳನ್ನು ಆರಂಭಿಸಿದ್ದು, ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ನಮ್ಮ ಮಥುರಾ ಕ್ಯಾಂಪಸ್‍ನಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಅವಕಾಶ ಕಲ್ಪಿಸುತ್ತಿದೆ. ನಮ್ಮ ವಿವಿ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿದೆ ಎಂದು ವಿವಿಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಸಿ. ಚಾಬ್ರ ಅವರು ವರದಿಗಾರರಿಗೆ ತಿಳಿಸಿದ್ದಾರೆ. ನಮ್ಮ ವಿವಿ ಉತ್ತರ ಭಾರತದ ಪ್ರೀಮಿಯಂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಗುಣಮಟ್ಟದ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ ಎಂದು ಚಾಬ್ರ ಹೇಳಿದ್ದಾರೆ. ಸಮಾಜದ ವಿವಿಧ ಹಂತಗಳಲ್ಲಿ ಸಮಾನ ಬೆಳವಣಿಗೆಗೆ ಕೊಡುಗೆ ನೀಡುವ ಪ್ರಯತ್ನದ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರದಿಂದ ಬರುವ ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ವಿವಿ ಜನರಲ್ ಮ್ಯಾನೇಜರ್ ಅಭಿಶೇಕ್ ಶುಕ್ಲಾ ಅವರು ತಿಳಿಸಿದ್ದಾರೆ.