ಗೋಣಿಕೊಪ್ಪಲು, ಮೇ. 29: ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರನ್ನು ಕೊಡಗು ಜೆಡಿಎಸ್ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ತೆರಳಿದ ಸಂಕೇತ್ ಪೂವಯ್ಯ ಜಿಲ್ಲೆಯಲ್ಲಿ ಜೆಡಿಎಸ್ನ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕೊಡಗಿನಲ್ಲಿ ಮಿತಿಮೀರಿದ ಆನೆ ಮಾನವ ಸಂಘರ್ಷ, ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ಪ್ರಾಣ ಹಾನಿ, ಬೆಳೆಹಾನಿ, ಕೃಷಿ ಚಟುವಟಿಕೆಗೆ ಹಿನ್ನೆಡೆ ಬಗ್ಗೆ ಪ್ರಸ್ತಾಪಿಸಿದರು. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ನಿಷ್ಕ್ರೀಯತೆಯಿಂದಾಗಿ 49 ಜೀವಗಳು ಬಲಿಯಾಗಿವೆ. 150ಕ್ಕೂ ಅಧಿಕ ಮಂದಿ ಶಾಶ್ವತ ಅಂಗವೈಫಲ್ಯಕ್ಕೊಳಗಾಗಿದ್ದಾರೆ. ತನ್ನ ಜೀವನಧಾರಕ್ಕೆ ಹಸುವನ್ನು ನಂಬಿಕೊಂಡಿದ್ದ ರೈತ ಸಂಕಷ್ಟದ ಸ್ಥಿತಿಗೆ ತಲುಪಿದ್ದಾನೆ. ರೈತರು, ಕಾರ್ಮಿಕರು ಕಾಫಿ ತೋಟಕ್ಕೆ ತೆರಳುವದು ದುಸ್ತರವಾಗಿದೆ ಎಂಬ ವಿಷಯ ಸೇರಿದಂತೆ ಕೊಡಗಿನ ಕಾಫಿ ಬೆಳೆಗಾರರು, ಕಾರ್ಮಿಕರು, ಶ್ರಮಿಕರ ಸಮಸ್ಯೆಗಳ ಬಗ್ಗೆ ಸಂಕೇತ್ ಜೆಡಿಎಸ್ ವರಿಷ್ಠ ದೇವೇಗೌಡ ಅವರಿಗೆ ಮನವರಿಕೆ ಮಾಡಿಕೊಟ್ಟರು.