ಸೋಮವಾರಪೇಟೆ, ಮೇ. 28: ವಿಧಾನ ಸಭಾ ಚುನಾವಣೆ ಪೂರ್ವ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡುವದಾಗಿ ಭರವಸೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ತಮ್ಮ ಮಾತು ತಪ್ಪಿದ್ದಾರೆ ಎಂದು ಆರೋಪಿಸಿ, ತಕ್ಷಣ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಬಂದ್ ಸೋಮವಾರಪೇಟೆಯಲ್ಲಿ ಯಶಸ್ವಿಯಾಯಿತು.ಬೆಳಗ್ಗಿನಿಂದಲೇ ಪಟ್ಟಣದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂಪ್ರೇರಣೆಯಿಂದ ಬಂದ್ ಮಾಡಿದ್ದರು. ಬೆಳಗ್ಗೆ 6 ಗಂಟೆಗೆ ಪಟ್ಟಣದಲ್ಲಿ 2 ಅಂಗಡಿಗಳು ಮಾತ್ರ ತೆರೆದಿದ್ದವು. 7.30ರ ವೇಳೆಗೆ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಯಲ್ಲಿರುವ ಎಲ್ಲಾ ಅಂಗಡಿಗಳು ಬಂದ್ ಆದವು.ಬೆಳಗ್ಗೆ 8 ಗಂಟೆ ವೇಳೆಗೆ ಬಿಜೆಪಿ ಕಾರ್ಯಕರ್ತರು ಇಲ್ಲಿನ ವಿವೇಕಾನಂದ ವೃತ್ತದಲ್ಲಿ 10 ನಿಮಿಷಗಳ ಕಾಲ ರಸ್ತೆಯಲ್ಲಿ ಕುಳಿತು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಮಾಲೀಕರೊಂದಿಗೆ ವಾಗ್ವಾದ: ಇನ್ನು ಕ್ಲಬ್ ರಸ್ತೆ, ಮಾರ್ಕೆಟ್ ದಾರಿ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಒಂದೊಂದು ಅಂಗಡಿಗಳು ತೆರೆದಿದ್ದವು. ಬಿಜೆಪಿ ಕಾರ್ಯಕರ್ತರು ಅಂಗಡಿಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲು

(ಮೊದಲ ಪುಟದಿಂದ) ಮುಂದಾದ ಸಂದರ್ಭ ಮಾಲೀಕರಿಂದ ಪ್ರತಿರೋಧ ವ್ಯಕ್ತಗೊಂಡಿತು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಹಾಗೂ ಮಾಲೀಕರೊಂದಿಗೆ ವಾಗ್ವಾದ ನಡೆಯಿತು.

ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಅಂಗಡಿ ಮಾಲೀಕರು ಬಂದ್‍ಗೆ ಸಹಕರಿಸದ ಹಿನ್ನೆಲೆ, ಅಂಗಡಿಯ ಹೊರಭಾಗದಲ್ಲಿ ಇಡಲಾಗಿದ್ದ ಸಾಮಾಗ್ರಿಗಳನ್ನು ಅಂಗಡಿಯ ಒಳಗೆ ಇಡುವಂತೆ ಸಂಚಾರ ನಿಯಂತ್ರಕರಿಗೆ ತಾಕೀತು ಮಾಡಿದರು.

ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ತೆರೆದಿದ್ದ ಅಂಗಡಿಯನ್ನು ಮುಚ್ಚಿಸಲು ಮಾಲೀಕರ ಮನವೊಲಿಸುವ ಸಂದರ್ಭ ಜೆಡಿಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಬಲವಂತವಾಗಿ ಬಂದ್ ಮಾಡಬೇಡಿ. ನೀವು ಅಂಗಡಿ ತೆರೆಯಿರಿ ಎಂದು ಮಾಲೀಕರ ಪರ ನಿಂತರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದ ನಂತರ ಮಾಲೀಕರು ಅಂಗಡಿ ಬಾಗಿಲು ಮುಚ್ಚಿದರು.

ಉದ್ವಿಗ್ನ ವಾತಾವರಣ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಜೆಡಿಎಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಎದುರಾಗುತ್ತಿದ್ದಂತೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಮುಖಂಡರಿಗೆ ಜೈಕಾರ ಹಾಕುತ್ತಾ, ವಿರೋಧಿ ಪಕ್ಷದ ಪರ ಧಿಕ್ಕಾರದ ಘೋಷಣೆ ಮೊಳಗಿಸಿದರು. ಪರಿಸ್ಥಿತಿ ಕೈಮೀರುವದನ್ನು ಅರಿತ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಬ್ಯಾಂಕ್ ತೆರೆಸಿದರು: ಇಲ್ಲಿನ ವಿಎಸ್‍ಎಸ್‍ಎನ್ ಬ್ಯಾಂಕ್, ಎಸ್‍ಬಿಐ, ಎಸ್‍ಬಿಎಂ ಬ್ಯಾಂಕ್‍ಗಳು 10 ಗಂಟೆಯ ನಂತರವೂ ತೆರೆಯದೇ ಇದ್ದಾಗ ಬ್ಯಾಂಕ್‍ಗಳಿಗೆ ತೆರಳಿದ ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾಂಕ್ ತೆರೆಯುವಂತೆ ಒತ್ತಡ ಹಾಕಿದರು. ನಂತರ ಬ್ಯಾಂಕ್‍ಗಳು ತೆರೆದವಾದರೂ ಗ್ರಾಹಕರ ಕೊರತೆಯಿಂದ ಮಾಮೂಲಿ ಸೋಮವಾರದಂದು ನಡೆಯುವ ವಹಿವಾಟು ನಡೆಯಲಿಲ್ಲ.

ಮೋದಿ ಪರ ಜೈಕಾರ: ಜೆಡಿಎಸ್ ಕಾರ್ಯಕರ್ತರು ವಿಎಸ್‍ಎಸ್‍ಎನ್ ಬ್ಯಾಂಕ್ ತೆರೆಸಿ ಮುಂದೆ ಸಾಗುತ್ತಿದ್ದಂತೆ ಜೇಸೀ ವೇದಿಕೆಯಲ್ಲಿ ಕುಳಿತಿದ್ದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು. ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.

ಶಾಲಾ ಕಾಲೇಜು ಬಂದ್: ಕರ್ನಾಟಕ ರಾಜ್ಯ ಬಂದ್ ಕರೆಯಿಂದಾಗಿ ಸೋಮವಾರಪೇಟೆಯಲ್ಲಿ ಬಂದ್ ನಡೆಯುತ್ತೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿಯೇ ಬೆಳಗ್ಗೆ ಶಾಲಾ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದರು. ಖಾಸಗಿ ಬಸ್‍ಗಳು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಬಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರು. ಪಟ್ಟಣದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮುಚ್ಚಿದ್ದರಿಂದ ತರಗತಿಗಳು ನಡೆಯಲಿಲ್ಲ.

ಸಂತೆಗೆ ಬಂದ್ ಬಿಸಿ: ಸೋಮವಾರಪೇಟೆ ಸಂತೆಗೆ ಬಂದ್ ಬಿಸಿ ತಟ್ಟಿತು. ಬೆಳಗ್ಗೆಯೇ ವ್ಯಾಪಾರಸ್ಥರು ಸಂತೆಯಲ್ಲಿ ಅಂಗಡಿಗಳನ್ನು ತೆರೆದಿಟ್ಟರೂ ಗ್ರಾಹಕರ ಕೊರತೆ ಎದುರಾಯಿತು. ಗ್ರಾಮೀಣ ಭಾಗದಿಂದ ಸಂತೆಗೆ ಆಗಮಿಸುವ ಮಂದಿಯಲ್ಲೂ ಗಣನೀಯ ಇಳಿಕೆ ಹಿನ್ನೆಲೆ ವ್ಯಾಪಾರಸ್ಥರು ಗ್ರಾಹಕರಿಗಾಗಿ ಕಾದು ಕುಳಿತರು. ಕೆಲವರು ವಾಹನದಲ್ಲಿ ವ್ಯಾಪಾರಕ್ಕೆಂದು ತಂದಿದ್ದ ಸಾಮಾಗ್ರಿಗಳನ್ನು ವಾಪಸ್ ಕೊಂಡೊಯ್ದರು.

ಮೆಡಿಕಲ್‍ನಲ್ಲಿ ಜನಸಂದಣಿ: ಬಂದ್ ನಡುವೆಯೂ ಪಟ್ಟಣದ ಮೆಡಿಕಲ್ ಅಂಗಡಿಗಳಲ್ಲಿ ಜನಸಂದಣಿ ಕಂಡುಬಂತು. ರೋಗಿಗಳಿಗೆ ಬೇಕಾದ ಅವಶ್ಯಕ ಔಷಧಿಗಳನ್ನು ಸಂಬಂಧಿಕರು ಖರೀದಿಸಿದರು. ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಕ್ಲಿನಿಕ್‍ಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದರು. ಇದರೊಂದಿಗೆ ಪತ್ರಿಕೆ ಮಾರಾಟ ಅಂಗಡಿ, ಹಾಲಿನ ಕೇಂದ್ರ, ಹೂ ಮಾರಾಟ ಅಂಗಡಿ, ಕೆಲ ಮಾಂಸ-ಮೀನು ಮಾರಾಟ ಕೇಂದ್ರಗಳು ಎಂದಿನಂತೆ ತೆರೆದಿದ್ದವು. ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್‍ಗಳು ಮುಚ್ಚಿದ್ದರಿಂದ ಮಧ್ಯಾಹ್ನದ ಊಟಕ್ಕೆ ಹಲವರು ಪರದಾಡಿದರು.

ಸರ್ಕಾರಿ ಬಸ್‍ಗಾಗಿ ಕಾದ ಪ್ರಯಾಣಿಕರು: ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದ ಹಿನ್ನೆಲೆ ಪ್ರಯಾಣಿಕರು ಸರ್ಕಾರಿ ಬಸ್‍ಗಳಿಗಾಗಿ ಕಾದು ಕುಳಿತರು. ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಬೆಳಗ್ಗೆ ಬೆರಳೆಣಿಕೆಯಷ್ಟಿದ್ದ ಆಟೋಗಳು ಮಧ್ಯಾಹ್ನ ನಂತರ ರಸ್ತೆಗಿಳಿದವು.

ಸಿದ್ಧಗೊಂಡಿದ್ದ ಪೊಲೀಸ್ ಪಡೆ: ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಬಂದ್ ಪರ- ವಿರೋಧ ನಿಲುವು ಹೊಂದಿದ್ದರಿಂದ ಪೊಲೀಸರು ಸರ್ವ ಸನ್ನದ್ಧರಾಗಿದ್ದರು. ಹಳೆ ಪೊಲೀಸ್ ಠಾಣೆ ಮುಂಭಾಗ ಎರಡೂ ಪಕ್ಷಗಳ ಕಾರ್ಯಕರ್ತರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರನ್ನು ದೂರ ಕಳುಹಿಸಿದ ಪೊಲೀಸರು ಎಂತಹ ಸನ್ನಿವೇಶವನ್ನಾದರೂ ನಿಭಾಯಿಸಲು ಸಿದ್ಧರಾಗುತ್ತಿದ್ದಂತೆ ಪರಿಸ್ಥಿತಿ ತಿಳಿಯಾಯಿತು.

ನಂತರ ಬಿಜೆಪಿ ಕಾರ್ಯಕರ್ತರು ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅವರ ಸಮ್ಮುಖ ತಾಲೂಕು ಕಚೇರಿಗೆ ತೆರಳಿ ರೈತರ ಸಾಲಮನ್ನಾ ಮಾಡದ ವಚನಭ್ರಷ್ಟ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪರಿಸ್ಥಿತಿ ನಿಭಾಯಿಸಿದ ಸಿ.ಐ.: ಬಂದ್‍ಗೆ ಕರೆ ನೀಡಿದ್ದರಿಂದ ಸಾರ್ವಜನಿಕ ಜೀವನಕ್ಕೆ ಯಾವದೇ ಭಂಗ ಉಂಟಾಗದಂತೆ ನಿಗಾ ವಹಿಸಲು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಶ್ರಮಿಸಿದರು. ಬಿಜೆಪಿ ಕಾರ್ಯಕರ್ತರು ತೆರಳಿದ ಕಡೆಯೆಲ್ಲಾ ಕಣ್ಗಾವಲಿದ್ದ ವೃತ್ತನಿರೀಕ್ಷಕರು ಎಲ್ಲರನ್ನೂ ಸಮಾಧಾನ ಪಡಿಸುತ್ತಿದ್ದರು. ಬಲವಂತದ ಬಂದ್ ಮಾಡಿಸಬೇಡಿ ಎಂದು ಬಿಜೆಪಿಯವರಿಗೆ ಖಡಕ್ ಸೂಚನೆ ನೀಡುತ್ತಲೇ ಜೆಡಿಎಸ್ ಕಾರ್ಯಕರ್ತರ ಮೇಲೂ ನಿಗಾವಹಿಸಿದ್ದರು.

ಪ್ರತಿಭಟನೆಯಲ್ಲಿದ್ದ ಬಿಜೆಪಿ ಪ್ರಮುಖರು: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಅವರೊಂದಿಗೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಮಸಗೋಡು ಸತೀಶ್, ಬಿಜೆಪಿ ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಯುವ ಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ಪ್ರಮುಖರಾದ ಶುಂಠಿ ಭರತ್‍ಕುಮಾರ್, ಎನ್.ಆರ್. ಅಜೀಶ್‍ಕುಮಾರ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯ ಧರ್ಮಪ್ಪ, ಮುಖಂಡರಾದ ಭುವನ್, ಪಿ.ಡಿ. ಪ್ರಕಾಶ್, ಸಂತೋಷ್ ರೈ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತಿರೋಧ ವ್ಯಕ್ತಪಡಿಸಿದ ಜೆಡಿಎಸ್ ಮುಖಂಡರು: ಬಿಜೆಪಿಯವರು ಪ್ರತಿಭಟನಾತ್ಮಕವಾಗಿ ಬಂದ್ ಆಚರಿಸಿದರೆ ಜೆಡಿಎಸ್ ಪ್ರಮುಖರು ಬಂದ್ ವಿಫಲಗೊಳಿಸಲು ಯತ್ನಿಸಿದರು. ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಕಾರ್ಯದರ್ಶಿ ಕೆ.ಟಿ. ಪರಮೇಶ್, ಪ್ರಮುಖರಾದ ನಾಗರಾಜು, ಬಗ್ಗನ ಅನಿಲ್‍ಕುಮಾರ್, ಕೃಷ್ಣಪ್ಪ, ಚಂಗಪ್ಪ, ಅಶ್ವಥ್, ಯುವ ಘಟಕದ ಅಧ್ಯಕ್ಷ ಪ್ರವೀಣ್, ಬಸಪ್ಪ ಸೇರಿದಂತೆ ಇತರರು ಬಂದ್ ಮಾಡದಂತೆ ಮನವಿ ಮಾಡುತ್ತಿದ್ದರು.

ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಸೋಮವಾರಪೇಟೆಯ ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಲವೊಂದು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರೆ, ಉಳಿದೆಡೆಗಳಲ್ಲಿ ಎಂದಿನಂತೆ ಜನಜೀವನ ಸಾಗಿತು. ಶಾಂತಳ್ಳಿಯಲ್ಲಿ ಬೆಳಗ್ಗೆ ಅಂಗಡಿಗಳು ಮುಚ್ಚಿದ್ದವು. ಐಗೂರಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸೇರಿದ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ನೀಡಿದ್ದರೆ, ಅನ್ಯ ಪಕ್ಷಗಳ ಕಾರ್ಯಕರ್ತರಿಗೆ ಸೇರಿದ ಅಂಗಡಿಗಳು ತೆರೆದಿದ್ದವು.

ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕೊಡ್ಲಿಪೇಟೆಯಲ್ಲಿ ಸರ್ಕಾರಿ ಬಸ್‍ಗಳು ಎಂದಿನಂತೆ ಸಂಚರಿಸಿದವು. ಕೊಡ್ಲಿಪೇಟೆಯಲ್ಲಿ ಬೆಳಗ್ಗೆ ಮುಚ್ಚಲ್ಪಟ್ಟಿದ್ದ ಅಂಗಡಿಗಳು 11 ಗಂಟೆ ನಂತರ ತೆರೆದವು. ಆಲೇಕಟ್ಟೆ ರಸ್ತೆ, ತಣ್ಣೀರುಹಳ್ಳ, ಅಬ್ಬೂರುಕಟ್ಟೆ, ಗೋಣಿಮರೂರು, ಆಲೂರು ಸಿದ್ದಾಪುರ, ಗೌಡಳ್ಳಿ, ಬಜೆಗುಂಡಿ ಸೇರಿದಂತೆ ಇನ್ನಿತರ ಗ್ರಾಮೀಣ ಭಾಗದಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಾದಾಪುರದಲ್ಲಿ ಬೆಳಗ್ಗೆ ಮುಚ್ಚಲ್ಪಟ್ಟಿದ್ದ ಅಂಗಡಿಗಳು ಮಧ್ಯಾಹ್ನದ ನಂತರ ತೆರೆದವು. ಗ್ರಾಮ ಪಂಚಾಯಿತಿ ವಾಣಿಜ್ಯ ಮಳಿಗೆ, ಮಾದಾಪುರ ಪಟ್ಟಣದ ಜಂಕ್ಷನ್‍ನಲ್ಲಿರುವ ಅಂಗಡಿಗಳನ್ನು ಬೆಳಗ್ಗೆ ಬಂದ್ ಮಾಡಿ, ಬೆಂಬಲ ವ್ಯಕ್ತಪಡಿಸಲಾಗಿತ್ತು.

3 ಗಂಟೆ ನಂತರ ತೆರೆಯಲ್ಪಟ್ಟ ಅಂಗಡಿಗಳು

ಬೆಳಗ್ಗೆಯಿಂದ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 3 ಗಂಟೆಯ ನಂತರ ಒಂದೊಂದಾಗಿ ತೆರೆಯಲ್ಪಟ್ಟವು. ಹೊಟೇಲ್‍ಗಳನ್ನು ಹೊರತುಪಡಿಸಿದರೆ ಸಣ್ಣಪುಟ್ಟ ದಿನಸಿ ಅಂಗಡಿಗಳು 3 ಗಂಟೆ ನಂತರ ತೆರೆದವು. ಕೆಲ ಅಂಗಡಿಗಳು ಸಂಜೆಯಾದರೂ ತೆರೆಯದೇ ಮಾಲೀಕರುಗಳು ವಿಶ್ರಾಂತಿಗೆ ಸರಿದರು. ಸಂತೆ ಮಾರುಕಟ್ಟೆಯಲ್ಲಿ ಸಂಜೆ ವೇಳೆಗೆ ಗ್ರಾಹಕರು ಆಗಮಿಸಿ ತರಕಾರಿ, ದಿನಸಿ ಸಾಮಗ್ರಿಗಳನ್ನು ಖರೀದಿಸಿದರು.

ಶನಿವಾರಸಂತೆ: ರೈತರ ಸಾಲ ಮನ್ನಾ ಬಗ್ಗೆ ಸರಕಾರದ ವಿರುದ್ಧ ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಪಟ್ಟಣ ಮತ್ತು ಹೋಬಳಿಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಜನಜೀವನ ಎಂದಿನಂತೆ ಇತ್ತು. ಅಂಗಡಿಮುಂಗಟ್ಟು, ಹೊಟೇಲ್ ತೆರೆದಿದ್ದವು. ಬಿಜೆಪಿಯ ಕೆಲ ಕಾರ್ಯಕರ್ತರು ಒತ್ತಾಯದಿಂದ ಅಂಗಡಿ ಮುಚ್ಚಿಸಲು ಯತ್ನಿಸುತ್ತಾ ಕೈ ಮುಗಿದು ಬೇಡುತ್ತಿದ್ದ ದೃಶ್ಯ ಕಂಡುಬಂದಿತು. ಸರಕಾರಿ ಬಸ್‍ಗಳು, ಖಾಸಗಿ ವ್ಯಾನುಗಳು, ಆಟೋಗಳು ಎಂದಿನಂತೆ ಓಡಾಡುತ್ತಿದ್ದವು. ಪ್ರಯಾಣಿಕರಿಗೆ ಯಾವದೇ ತೊಂದರೆಯಾಗಲಿಲ್ಲ. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದವು. ಬ್ಯಾಂಕುಗಳು ಕರ್ತವ್ಯ ನಿರ್ವಹಿಸಿದವು. ಭಾರತಿ ವಿದ್ಯಾಸಂಸ್ಥೆ, ವಿಘ್ನೇಶ್ವರ ವಿದ್ಯಾಸಂಸ್ಥೆ, ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆ ಮತ್ತಿತರ ಸರಕಾರಿ ಪ್ರಾಥಮಿಕ ಶಾಲೆಗಳು ತೆರೆದಿದ್ದವು. ಕಾವೇರಿ ಕಾಲೇಜು ಮಾತ್ರ ಮುಚ್ಚಲ್ಪಟ್ಟಿತ್ತು. ಮಧ್ಯಾಹ್ನದ ಬಳಿಕ ಖಾಸಗಿ ಬಸ್‍ಗಳು ಸಂಚರಿಸಿದವು.

ಬಂದ್ ಮಾಡಿಸಲು ಯತ್ನಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಒತ್ತಾಯವನ್ನು ವಿರೋಧಿಸಿ ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಆದಿಲ್ ಪಾಶ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ 3 ದಿನದ ಕೂಸಾಗಿದ್ದು, ಸಂಪುಟ ರಚನೆಯಾಗದೇ ಸಾಲಮನ್ನಾ ಸಾಧ್ಯವಾಗುವದಿಲ್ಲ. ಬಂದ್ ಹೇಳಿಕೆ ನೀಡಿದ ಯಡಿಯೂರಪ್ಪ ಅಸಹಾಯಕತೆಯಿಂದ ಆಡಿದ ಮಾತು, ಸ್ವಯಂ ಪ್ರೇರಿತ ಬಂದ್ ಎಂದು ಹೇಳಿ ಬಿಜೆಪಿ ಕಾರ್ಯಕರ್ತರು ಒತ್ತಾಯಪೂರಕ ಬಂದ್ ಮಾಡಿಸುವದು ಸರಿಯಿಲ್ಲ ಎಂದು ವಿರೋಧಿಸಿದರು.

ಚೆಟ್ಟಳ್ಳಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತಿಗೆ ತಪ್ಪಿದ್ದಾರೆ ಎಂದು ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಚೆಟ್ಟಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್‍ಗೆ ಬೆಂಬಲ ವ್ಯಕ್ತ ಪಡಿಸಿದ ಸ್ಥಳೀಯ ಅಂಗಡಿಗಳ ಮಾಲೀಕರು ಮುಂಜಾನೆಯಿಂದ ಸಂಜೆ 4.30 ಗಂಟೆವರೆಗೆ ಅಂಗಡಿ ಬಂದ್ ಮಾಡಿ, ಬಂದ್‍ಗೆ ಬೆಂಬಲ ವ್ಯಕ್ತ ಪಡಿಸಿದರು.

ಸಂಜೆ ಚೆಟ್ಟಳ್ಳಿಯಲ್ಲಿ ಈ ಕುರಿತು ಮಾತನಾಡಿದ ಜನಪರ ಹೋರಾಟ ಸಮಿತಿಯ ಸಂಚಾಲಕ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ, ರೈತರು ಸಾಲ ಮನ್ನಾ ಮಾಡಿ ಎಂದು ಕೇಳಲಿಲ್ಲ ಆದರೆ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆಂದು ಹೇಳಿದ್ದರು. ಆದರೆ ಅಧಿಕಾರ ದೊರೆಯುತ್ತಲೆ ರೈತರಿಗೆ ಅನ್ಯಾಯ ಮಾಡಿದ್ದು, ಸಾಲ ಮನ್ನಾ ಮಾಡಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಸಹಕಾರ ಸಂಘದಲ್ಲಿ ಸಾಲ ಪಡೆದು ಸಾಲಮನ್ನಾವನ್ನು ಅನುಭವಿಸಿದರು ಕೆಲವೆಡೆ ಅಂಗಡಿಮುಂಗಟ್ಟನ್ನು ಮುಚ್ಚದಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಈ ಮೈತ್ರಿ ಸರಕಾರ ಹೆಚ್ಚುದಿನ ಇರುವುದಿಲ್ಲ ಎಂದು ಭವಿಷ್ಯ ನುಡಿದ ಮಣಿ ಉತ್ತಪ್ಪ, ಬಂದ್‍ಗೆ ಸಹಕಾರ ನೀಡಿದ ಜನತೆಗೆ ಇದೇ ಸಂದರ್ಭ ಧನ್ಯವಾದ ಅರ್ಪಿಸಿದರು.

ಈ ಸಂದರ್ಭ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಂಠಿ ಕಾರ್ಯಪ್ಪ ಹಾಗೂ ಸಮಿತಿ ಸದಸ್ಯರುಸಹಕಾರ ಸಂಘದ ನಿರ್ದೇಶಕ ನೂಜಿಬೈಲು ನಾಣಯ್ಯ, ಬೊಪ್ಪಟೀರ ಅಪ್ಪುಟ್ಟ ನಾಣಯ್ಯ, ಚೆಟ್ಟಳ್ಳಿ ಗ್ರಾಮಪಂಚಾಯಿತಿಯ ಸದಸ್ಯರು ಸೇರಿದಂತೆ ಬಿಜೆಪಿಯ ಪ್ರಮುಖರು ಇದ್ದರು.

ಆಲೂರುಸಿದ್ದಾಪುರ: ಸಾಲಮನ್ನಾ ಒತ್ತಾಯಿಸಿ ಸೋಮವಾರ ಬಿಜೆಪಿ ಕರೆನೀಡಿದ ಕರ್ನಾಟಕ ಬಂದ್ ಹಿನ್ನಲೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತು. ಶನಿವಾರಸಂತೆ ಪಟ್ಟಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಂದ್‍ಗೆ ವರ್ತಕರು ಹಾಗೂ ಸಂಘ-ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ನೀಡಿದ್ದರು. ಪಟ್ಟಣದಲ್ಲಿ ಕೆಲವು ಅಂಗಡಿ, ಹೊಟೇಲು, ಕ್ಯಾಂಟೀನ್ ಮುಂತಾದ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿ ಬಂದ್‍ಗೆ ಸಹಕಾರ ನೀಡಿದರೆ ಮತ್ತೆ ಕೆಲವು ವರ್ತಕರು ಎಂದಿನಂತೆ ಬಾಗಿಲು ತೆರೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅಂಗಡಿಯನ್ನು ಬಲವಂತದಿಂದ ಮುಚ್ಚಿಸುತ್ತಿದ್ದರು. ಗುಡುಗಳಲೆ ಜಂಕ್ಸನ್‍ನಲ್ಲಿ ಆಟೋ ಮೊಬೈಲ್ ಅಂಗಡಿಗಳು, ವರ್ಕ್‍ಶಾಪ್‍ಗಳು ಕೈಗಾರಿಕಾ ಉದ್ದಿಮೆಗಳು ಬಂದ್ ಹಿನ್ನಲೆ ಇವುಗಳ ವರ್ತಕರು ಮುಚ್ಚಿದರು. ಪಟ್ಟಣದಲ್ಲಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳು ಮುಚ್ಚಲಾಗಿತ್ತು. ಕೃಷಿಪತ್ತಿನ ಸಹಕಾರ ಸಂಘ ಮತ್ತು ಕೊಡಗು ಡಿಸಿಸಿ ಬ್ಯಾಂಕ್ ಸಿಬ್ಬಂದಿ ಎಂದಿನಂತೆ ಬ್ಯಾಂಕ್ ಬಾಗಿಲು ತೆರೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮುಚ್ಚಿಸಿದರು. ಪಟ್ಟಣದಲ್ಲಿರುವ ಗ್ರಾ.ಪಂ.ಕಾರ್ಯಾಲಯ, ಕಂದಾಯ ಇಲಾಖೆ ಕಚೇರಿ, ಸರಕಾರಿ ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರು. ಪಟ್ಟಣದಲ್ಲಿ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು ಹೊರತು ಪಡಿಸಿದಂತೆ ಆಟೋ ರಿಕ್ಷಾ, ಬಾಡಿಗೆ ಕಾರು, ಜೀಪು, ವ್ಯಾನ್ ಮುಂತಾದ ಟ್ಯಾಕ್ಷಿಗಳ ಓಡಾಟ ಎಂದಿನಂತಿತ್ತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ಹೊಟೇಲು, ಕ್ಯಾಂಟೀನು ಮುಂತಾದವುಗಳನ್ನು ಮುಚ್ಚಲಾಗಿದ್ದರೂ ಸಹ ಜನಜಂಗುಳಿ ಎಂದಿಗಿಂತ ಹೆಚ್ಚಾಗಿದ್ದದ್ದು ವಿಶೇಷವಾಗಿತ್ತು. ಕಾರು, ಜೀಪು, ದ್ವಿಚಕ್ರ ವಾಹನಗಳ ಓಡಾಟ ಎಂದಿಗಿಂತ ಹೆಚ್ಚಾಗಿತ್ತು.

ಆಲೂರುಸಿದ್ದಾಪುರ: ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಬಂದ್ ನಡೆಸಲಾಯಿತು. ಆಲೂರುಸಿದ್ದಾಪುರ ಬಿಜೆಪಿ ಕಾರ್ಯಕರ್ತರು ಅಂಗಡಿ, ಹೊಟೇಲು, ಕ್ಯಾಂಟೀನು, ಬೇಕರಿ, ವರ್ಕ್‍ಶಾಪ್ ಮುಂತಾದ ಮುಂಗಟ್ಟುಗಳನ್ನು ಮಧ್ಯಾಹ್ನ 1 ಗಂಟೆಯ ತನಕ ಮುಚ್ಚುವಂತೆ ವರ್ತಕರಲ್ಲಿ ಮನವಿ ಮಾಡಿದ ಹಿನ್ನಲೆಯಲ್ಲಿ ವರ್ತಕರು ಬಂದ್‍ಗೆ ಸಹಕಾರ ನೀಡಿದರು. ಆಲೂರುಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ತನಕ ಕಾರ್ಯನಿರ್ವಹಿಸದೆ ಸಂಘದ ಕಚೇರಿಯನ್ನು ಮುಚ್ಚಿದ್ದರು.

ಕೊಡ್ಲಿಪೇಟೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ವರ್ತಕರಿಗೆ ಬಂದ್‍ಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿದ್ದರು. ಗ್ರಾ.ಪಂ.ಕಾರ್ಯಾಲಯ, ನಾಡ ಕಚೇರಿ, ಸರಕಾರಿ ಶಾಲಾ ಕಾಲೇಜುಗಳನ್ನು ಎಂದಿನಂತೆ ತೆರೆಯಲಾಗಿತ್ತು. ಸರಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿತ್ತು. ರಿಕ್ಷಾ , ಟ್ಯಾಕ್ಷಿಗಳ ಓಡಾಟ ಎಂದಿನಂತಿತ್ತು.

ಗುಡ್ಡೆಹೊಸೂರು: ಗುಡ್ಡೆಹೊಸೂರುವಿನಲ್ಲಿ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಗುಡ್ಡೆಹೊಸೂರು ಅರ್ಧದಿನ ಬಂದ್ ಆಗಿತ್ತು. ಬೆಳಗ್ಗಿನಿಂದ ಅಂಗಡಿ ಮುಂಗಟ್ಟು ತೆರೆದಿದ್ದರೂ 9 ಗಂಟೆಯ ನಂತರ ಎಲ್ಲಾ ರೀತಿಯ ವ್ಯಾಪಾರ ಬಂದ್ ಆದವು ಮುಖ್ಯವಾಗಿ ಮಾಲೀಕರು ಹೋಟೆಲ್‍ಗಳನ್ನು ಬಂದ್ ಮಾಡಿ ಸ್ವಯಂಘೋಶಿತ ಬಂದ್‍ಗೆ ಸಹಕರಿಸಿದರು. ಈ ಸಂದರ್ಭ ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್,ಮತ್ತು ಎಂ.ಆರ್.ಉತ್ತಪ್ಪ, ಕುಡೆಕ್ಕಲ್ ನಿತ್ಯ, ಜಿ.ಎಂ.ಸಲಿ, ಕೆ.ಡಿ.ಗಿರೀಶ್ ಮತ್ತು ಹಲವಾರು ಕಾರ್ಯಕರ್ತರು ಹಾಜರಿದ್ದರು.