ಮಡಿಕೇರಿ, ಮೇ 29: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಇಂದು ಪರಸ್ಪರ ಅಪನಂಬಿಕೆಯಿಂದ ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುವ ಮನಸ್ಸುಗಳು ಯಾವದೇ ಕಾರಣಕ್ಕೂ ವಿಚಲಿತಗೊಳ್ಳಬಾರದು ಎಂದು ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ಕರ್ನಾಟಕ ಸಂಘಟನೆಯ ಸಲಹಾ ಮಂಡಳಿ ಸದಸ್ಯ ಶೌಕತ್ ಆಲಿ ಸಲಹೆ ನೀಡಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಗರದ ಕಾಲೇಜು ರಸ್ತೆಯ ಸಿಪಿಸಿ ಲೇಔಟ್‍ನ ಕಾರುಣ್ಯ ಸದನದ ಸಭಾಂಗಣದಲ್ಲಿ ನಡೆದ ಇಫ್ತಾರ್ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ, ಸಹಬಾಳ್ವೆಯಿಂದ ಬಾಳಿ ಬದುಕುತ್ತಿದ್ದ ಜನರು ಇಂದು ಪರಸ್ಪರ ಅನುಮಾನ ಹಾಗೂ ಭಯದಿಂದ ಜೀವಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಇದು ವಿಷಾದಕರ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದ ಶೌಕತ್ ಆಲಿ, ಯುವ ಮನಸ್ಸುಗಳಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕಾರ್ಯ ನಿಲ್ಲಬೇಕೆಂದರು.
ಶಾಂತಿ, ಸೌಹಾರ್ದತೆ, ಭಾವೈಕ್ಯತೆಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದ್ದರೂ ಜಾತಿ, ಧರ್ಮಗಳ ಹೆಸರಿನಲ್ಲಿ ಒಡಕು ಮೂಡುತ್ತಿರುವದು ವಿಷಾದನೀಯ. ಯುವ ಸಮೂಹ ಪ್ರಬುದ್ಧರಾಗುವ ಮೂಲಕ ಸಮಾಜದಲ್ಲಿನ ಗೊಂದಲಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.
ಪವಿತ್ರ ಕುರ್‍ಆನ್ ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾದ ಗ್ರಂಥವಲ್ಲ, ಬದಲಾಗಿ ಇಡೀ ಮಾನವ ಕುಲಕ್ಕೆ ಮಾರ್ಗದರ್ಶಕವಾಗಿದೆ. ಇದರ ಸಾರವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ದೇಶಾದ್ಯಂತ ಸೌಹಾರ್ದತೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡ ಬರುತ್ತಿದೆ ಎಂದರು.
ನಗರಸಭಾ ಸದಸ್ಯ ಕೆ.ಜೆ. ಪೀಟರ್, ಉಮ್ಮರ್ ಮೌಲವಿ, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಸಿ.ಹೆಚ್. ಅಪ್ಸರ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.