ಮಡಿಕೇರಿ, ಮೇ 29: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ರಾಜಾಸೀಟಿನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ಸಂಗೀತ ಕಾರಂಜಿ ಕಳೆದ ಹಲವು ದಿನಗಳಿಂದ ಸ್ತಬ್ಧಗೊಂಡಿದೆ.
ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆ, ಸಿಡಿಲು ಮಿಂಚಿನ ಆರ್ಭಟ ಕೇವಲ ಗೃಹೋಪಯೋಗಿ ವಸ್ತುಗಳು, ಮನೆಗಳು, ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳಿಗೆ ಮಾತ್ರ ಹಾನಿ ಮಾಡುತ್ತಿಲ್ಲ. ಸಿಡಿಲಿನ ಆರ್ಭಟಕ್ಕೆ ಸಂಗೀತ ಕಾರಂಜಿ ಕೂಡ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದಾಗಿ ಭೇಟಿ ನೀಡುವ ಪ್ರವಾಸಿಗರಿಗೆ ನಿರಾಸೆ ಎದುರಾಗುತ್ತಿದೆ. ಒಂದು ವಾರದ ಹಿಂದೆ ಸಿಡಿಲಿನ ಹೊಡೆತಕ್ಕೆ ಸಿಲುಕಿ ರಾಜಾಸೀಟಿನ ಸಂಗೀತ ಕಾರಂಜಿಯ ‘ಸಾಫ್ಟ್‍ವೇರ್’ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ‘ಸಾಫ್ಟ್‍ವೇರ್’ ಅನ್ನು ದುರಸ್ತಿ ಪಡಿಸುವದಕ್ಕಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಚಂದ್ರಶೇಖರ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಸಂಗೀತ ಕಾರಂಜಿಯ ಸಾಫ್ಟ್‍ವೇರನ್ನು ಬೆಂಗಳೂರಿನ ಅಶೋಕ್ ಎಂಬ ಗುತ್ತಿಗೆದಾರರಿಗೆ ದುರಸ್ತಿ ಕಾರ್ಯಕ್ಕಾಗಿ ನೀಡಿದ್ದು, ‘ಶಕ್ತಿ’ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಸಂಗೀತ ಕಾರಂಜಿಯ ಸಾಫ್ಟ್‍ವೇರ್‍ಗೆ ಹಾನಿಯಾಗಿದ್ದು, ಅದನ್ನು ಸರಿಪಡಿಸಲು ಇನ್ನೂ ಒಂದು ವಾರಗಳ ಕಾಲಾವಕಾಶ ಅಗತ್ಯವಿದೆ. ಮುಂದಿನ ವಾರದಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ನಂತರ ಸಂಗೀತ ಕಾರಂಜಿಗೆ ಅಳವಡಿಸಲು ಒದಗಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಸಂಗೀತ ಕಾರಂಜಿಯಿಲ್ಲದೆ ರಾಜಾಸೀಟು ಕಳೆಗುಂದಿದ್ದು, ರಾತ್ರಿ ವೇಳೆ ಸಂಗೀತದೊಂದಿಗೆ ಚಿಮ್ಮುತ್ತಿದ್ದ ಕಾರಂಜಿಯನ್ನು ಕಣ್ತುಂಬಿಕೊಳ್ಳುವ ಆನಂದ ಸದ್ಯದ ಮಟ್ಟಿಗೆ ಇಲ್ಲವಾಗಿದೆ. ಪ್ರವಾಸಿಗರು ನಿರಾಸೆಗೊಂಡಿದ್ದಾರೆ.
-ಉಜ್ವಲ್ ರಂಜಿತ್