ಕೂಡಿಗೆ, ಮೇ 28 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಅರಣ್ಯ ಇಲಾಖೆಯ ಕಛೇರಿಯ ಮೇಲ್ಭಾಗದಲ್ಲಿರುವ ಗಂಧದಹಾಡಿಗೆ ಸೇರಿದ ಉಪಗ್ರಾಮದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಡಿಯುವ ನೀರು ಯೋಜನೆಯಡಿಯಲ್ಲಿ ಕಳೆದ 10 ವರ್ಷದ ಹಿಂದೆ ಬೋರ್‍ವೆಲ್ ಕೊರೆಸದೆ ಪೈಪ್‍ಲೈನ್ ಮಾಡಲಾಗಿದೆ. ಐದು ಕಡೆ ಬೋರ್‍ವೆಲ್‍ಗಳನ್ನು ಕೊರೆಸಿದರೂ, ನೀರು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಹಾಡಿ ವ್ಯಾಪ್ತಿಯಲ್ಲಿರುವ ಕುಟುಂಬಸ್ಥರು ಸಮೀಪದಲ್ಲೇ ಹರಿಯುವ ಹಾರಂಗಿ ನಾಲೆಯನ್ನು ಅವಲಂಬಿಸಿದ್ದಾರೆ. ಮೂರು ತಿಂಗಳಿಂದ ಹಾರಂಗಿ ನಾಲೆಯಲ್ಲಿ ಅರ್ಧ ಅಡಿಯಷ್ಟು ನೀರು ಮುಖ್ಯನಾಲೆಯಲ್ಲಿ ಹರಿಯುತ್ತಿತ್ತು. ಈ ನೀರನ್ನು ಅಡ್ಡಗಟ್ಟಿ ಕುಡಿಯಲು ಮತ್ತು ದಿನೋಪಯೋಗಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ತಿಂಗಳಿಂದ ಹಾರಂಗಿ ಅಣೆಕಟ್ಟೆಯಿಂದ ಮುಂಭಾಗದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವದರಿಂದ ಸ್ವಲ್ಪವೂ ನೀರು ಹರಿಯದೆ ನಾಲೆ ಒಣಗಿದೆ. ಪ್ರತಿಯೊಂದಕ್ಕೂ ನಾಲೆಯನ್ನು ಅವಲಂಭಿಸಿದ್ದ ಈ ವ್ಯಾಪ್ತಿಯ ಕುಟುಂಬಸ್ಥರು ನೀರಿಗಾಗಿ ಒಂದು ಕಿ.ಮೀ. ದೂರ ಕ್ರಮಿಸಿ ಸೈಕಲ್ ಮತ್ತು ಬೈಕ್‍ಗಳಲ್ಲಿ ನೀರು ತರುತ್ತಿರುವದು ಕಂಡುಬರುತ್ತಿದೆ. ಇದೀಗ ನಾಲೆಯಲ್ಲಿ ನೀರು ಹರಿಯದ ಪರಿಣಾಮ ಮಳೆಯ ನೀರನ್ನೇ ಅವಲಂಭಿಸಬೇಕಾಗಿದೆ. ಕಳೆದ ಒಂದು ವಾರದಿಂದ ಈ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯ ನೀರನ್ನು ಮನೆಯ ಹೆಂಚುಗಳಲ್ಲಿ ಸುರಿಯುವ ನೀರನ್ನು ಸಂಗ್ರಹಿಸಿ ಅದೇ ನೀರನ್ನು ಕುಡಿಯಲು ಮತ್ತು ದಿನ ಬಳಕೆಗೆ ಬಳಸುತ್ತಿದ್ದಾರೆ. ಈ ನೀರು ಖಾಲಿಯಾದ್ದರಿಂದ ಪಕ್ಕದಲ್ಲೇ ಇರುವ ನಾಲೆಯಲ್ಲಿ ಸಂಗ್ರಹವಾಗಿರುವ ಮಳೆಯ ಕೊಳಚೆ ನೀರನ್ನು ಬಳಸುವಂತಹ ಪರಿಸ್ಥಿತಿ ಈ ಹಾಡಿಯವರಿಗೆ ಎದುರಾಗಿದೆ.

ಈ ಹಾಡಿಯ ಪಕ್ಕ ಸೋಮವಾರಪೇಟೆ ಮೀಸಲು ಅರಣ್ಯವಿದ್ದು, ಕಾಡಾನೆಯ ಕಾಟ ಜೊತೆಗೆ ಈ ವ್ಯಾಪ್ತಿಯ ಕುಟುಂಬದವರು ಕುಡಿಯುವ ನೀರಿಗಾಗಿ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಗೆ ತಿಳಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಬರುವ ಅಧಿಕಾರಿಗಳು 200 ಮೀ ಪೈಪ್‍ಲೈನ್ ಅಳವಡಿಸಲಾಗಿದೆ, ಬೋರ್‍ವೆಲ್ ಕೊರೆಸುತ್ತೇವೆ. ಇನ್ನುಳಿದ 800 ಮೀ ಪೈಪ್‍ಲೈನ್‍ಗೆ ಕ್ರಮಕೈಗೊಳ್ಳುವ ಭರವಸೆ ನೀಡಿ ತೆರಳಿ ವರ್ಷಗಳೇ ಕಳೆದಿದೆ ಎಂದು ಹಾಡಿಯ ನಿವಾಸಿಗಳಾದ ಲೀಲಾವತಿ, ಗಿರೀಶ್, ಭೋಜ, ಮಂಜಣ್ಣ, ಶಿವ, ಕರಿಯ ದೂರಿದ್ದಾರೆ.

ಕೊಳಚೆ ನೀರನ್ನು ಬಿಸಿ ಮಾಡಿ ಕುಡಿದರೂ ರೋಗ ರುಜಿನಗಳು ಹರಡುತ್ತಿವೆ ಎಂದು ಹಾಡಿಯ ಲೀಲಾವತಿ ತಮ್ಮ ಅಳಲನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

ಅಧಿಕಾರಿಗಳು ನಮ್ಮ ಕಷ್ಟವನ್ನು ಅರಿತು ಕುಡಿಯುವ ನೀರನ್ನು ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಈ ವ್ಯಾಪ್ತಿಯ ಗ್ರಾ.ಪಂ ಸದಸ್ಯ ಹೆಚ್.ಎಸ್.ರವಿ ಮಾತನಾಡಿ, ಗ್ರಾಮ ಪಂಚಾಯ್ತಿ ಮಾಸಿಕ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ, ಕಳೆದ ಮೂರು ವರ್ಷಗಳಿಂದಲೂ ಗ್ರಾಮೀಣ ಕುಡಿಯುವ ನೀರು ಯೋಜನೆಯ ಇಲಾಖೆಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಅರ್ಜಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಈ ಪ್ರದೇಶಕ್ಕೆ 15 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಪ್ರಾರಂಭಿಸಿದಲ್ಲಿ ಗಂಧದಹಾಡಿಗೆ ಸೇರಿದ ಉಪಗ್ರಾಮಕ್ಕೆ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.

-ಕೆ.ಕೆ.ನಾಗರಾಜಶೆಟ್ಟಿ.