ಕುಶಾಲನಗರ, ಮೇ 29: ರಾಜ್ಯದ ಕೆಲವು ಅಣೆಕಟ್ಟೆಗಳ ಪುನಶ್ಚೇತನ ಯೋಜನೆಗೆ ವಿಶ್ವ ಬ್ಯಾಂಕ್ ಅನುದಾನದ ಮೂಲಕ ಕಾಮಗಾರಿ ನಡೆಯುತ್ತಿದ್ದು ಜಿಲ್ಲೆಯ ಹಾರಂಗಿ ಅಣೆಕಟ್ಟು ವಿಭಾಗದಲ್ಲಿ ಅಂದಾಜು ರೂ. 9 ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭಗೊಂಡಿದೆ. ಅಣೆಕಟ್ಟೆಯ ಒಳಭಾಗದಲ್ಲಿ ಲೈನಿಂಗ್, ಕಾಮಗಾರಿ ಸೇರಿದಂತೆ ಜಲಾಶಯದ ಕ್ರೆಸ್ಟ್‍ಗೇಟ್‍ಗಳ ದುರಸ್ತಿ, ಕಾಲುವೆಗಳ ಗೇಟ್ ರಿಪೇರಿ, ಸುರಂಗ ಮಾರ್ಗದ ದುರಸ್ತಿ ಮತ್ತಿತರ ಪುನರ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಹಾರಂಗಿ ಸೇರಿದಂತೆ ರಾಜ್ಯದ ಕೆಆರ್‍ಎಸ್, ಹೇಮಾವತಿ, ಕಬಿನಿ ಜಲಾಶಯಗಳಲ್ಲಿಯೂ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು ಮಾಹಿತಿ ನೀಡಿದ್ದಾರೆ.
ಅಣೆಕಟ್ಟೆಯಿಂದ ಕೆಲವೆಡೆ ನೀರು ಸೋರಿಕೆ ಕಂಡುಬಂದಿದೆ. ಅಲ್ಲದೆ ಕ್ರೆಸ್ಟ್ ಗೇಟ್‍ಗಳಲ್ಲಿ ನೀರು ಪೋಲಾಗುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು. ಅಣೆಕಟ್ಟೆಯ ಕೆಲವು ಭಾಗಗಳು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದ್ದವು. ಈ ಹಿನ್ನೆಲೆಯಲ್ಲಿ ಮಳೆಗಾಲಕ್ಕಿಂತ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಭರದಿಂದ ಕೆಲಸ ಸಾಗಿದೆ. ಅಣೆಕಟ್ಟೆ ಮೇಲ್ಭಾಗದ ಶಿಥಿಲಗೊಂಡ ತಡೆಗೋಡೆಗಳನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಹೈದರಾಬಾದ್ ಮೂಲದ ತಂತ್ರಜ್ಞರು ಹಾಗೂ ನುರಿತ ಕೆಲಸಗಾರರಿಂದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜಲಾಶಯದ ಒಳಭಾಗದಲ್ಲಿ ತಜ್ಞರ ಸೂಚನೆ ಮೇರೆಗೆ ಸಿಮೆಂಟ್ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಸಂಪೂರ್ಣ ಕುಸಿತ ಕಂಡುಬಂದಿದ್ದು ಪ್ರಸಕ್ತ ಅಣೆಕಟ್ಟೆಯಲ್ಲಿ ಕೇವಲ 0.323 ಟಿಎಂಸಿ ಪ್ರಮಾಣದ ನೀರು ಕಾಣಬಹುದು. ಜಲಾಶಯದ ಗರಿಷ್ಠ ನೀರಿನ ಸಂಗ್ರಹಮಟ್ಟ 2859 ಅಡಿಗಳಾಗಿದ್ದು ಇದೀಗ 2774.74 ಅಡಿಗಳಷ್ಟಕ್ಕೆ ಕುಸಿದಿದೆ. ಕಳೆದ ಸಾಲಿನಲ್ಲಿ ಒಟ್ಟು 33 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ನದಿಗೆ 28.79 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ. ಕಾಲುವೆ ಮೂಲಕ 6.5 ಟಿಎಂಸಿ ನೀರು ಹರಿದಿದೆ ಎಂದು ಅಣೆಕಟ್ಟೆ ವಿಭಾಗದ ಮೂಲಗಳು ತಿಳಿಸಿವೆ.
ಹಾರಂಗಿ ಅಣೆಕಟ್ಟೆಯ ನೀರು ಬಳಸಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರ ಕಳೆದ ಸಾಲಿನಲ್ಲಿ 21 ದಶಲಕ್ಷ ಯೂನಿಟ್ ಪ್ರಮಾಣದ ವಿದ್ಯುತ್ ಉತ್ಪಾದಿಸಿದೆ ಎಂದು ಎನರ್ಜಿ ಡೆವಲೆಪ್‍ಮೆಂಟ್ ಕಾರ್ಪೋರೇಷನ್ ಸಂಸ್ಥೆ ಮಾಹಿತಿ ಒದಗಿಸಿದೆ. 24 ದಶಲಕ್ಷ ಯುನಿಟ್ ಪ್ರಮಾಣದ ವಿದ್ಯುತ್ ಉತ್ಪಾದನಾ ಉದ್ದೇಶ ಹೊಂದಲಾಗಿದ್ದು ಇದನ್ನು ಗುರಿಮುಟ್ಟಲು ಸಾಧ್ಯವಾಗಿಲ್ಲ ಎಂದು ಇಡಿಸಿಎಲ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶಿವಸುಬ್ರಮಣ್ಯಂ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ಪ್ರಥಮ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸಲಿದ್ದು, ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಇಡಿಸಿಎಲ್ ಖಾಸಗಿ ಉತ್ಪಾದನಾ ಕೇಂದ್ರದಲ್ಲಿ ಎರಡು ವಿದ್ಯುತ್ ಉತ್ಪಾದನಾ ಘಟಕಗಳಿದ್ದು ಪ್ರಥಮ ಘಟಕದಲ್ಲಿ 9 ಮೆಗಾವ್ಯಾಟ್, ಎರಡನೇ ಘಟಕದಲ್ಲಿ 6 ಮೆವ್ಯಾ ಪ್ರಮಾಣದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
- ಚಂದ್ರಮೋಹನ್