ಕುಶಾಲನಗರ, ಮೇ 28: ಹಾರಂಗಿ ಅಣೆಕಟ್ಟೆಯಿಂದ ನದಿ ಮೂಲಕ ಹರಿಸಲಾಗುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಇದನ್ನು ನೇರವಾಗಿ ಬಳಕೆ ಮಾಡಿದಲ್ಲಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಜಲಾಶಯದಿಂದ ನದಿ ತಟದ ಜನರಿಗೆ ಕುಡಿಯಲು ನೀರು ಹರಿಸಲಾಗುತ್ತಿದ್ದು ನೀರಿನ ಬಣ್ಣ ಸಂಪೂರ್ಣ ಕಂದು ವರ್ಣಕ್ಕೆ ತಿರುಗಿದೆ. ಇದರೊಂದಿಗೆ ನೀರು ವಾಸನಾಯುಕ್ತವಾಗಿ ಹರಿಯುತ್ತಿದೆ ಎಂದು ಕೂಡುಮಂಗಳೂರು ಗ್ರಾಪಂ ಸದಸ್ಯ ಭಾಸ್ಕರ ನಾಯಕ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಜಲಾಶಯದ ತಳಭಾಗದಲ್ಲಿ ಕೇವಲ 0.75 ಟಿಎಂಸಿ ಪ್ರಮಾಣದ ನೀರು ಸಂಗ್ರಹವಾಗಿದ್ದು ಇದರಲ್ಲಿ ಮೇಲ್ಭಾಗದಿಂದ ಹರಿದು ಬಂದ ಕಾಫಿ ಪಲ್ಪರ್ ಮತ್ತಿತರ ತ್ಯಾಜ್ಯಗಳೇ ಅಧಿಕವಾಗಿರುವ ಹಿನೆÀ್ನಲೆಯಲ್ಲಿ ನೀರಿನ ಗುಣಮಟ್ಟ ಕುಸಿಯಲು ಕಾರಣವಾಗಿದೆ. ಈ ನೀರಿನಲ್ಲಿ ಸ್ನಾನ ಮಾಡಿದ ಹಲವು ಮಂದಿಗೆ ಚರ್ಮ ರೋಗ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನದಿಯಲ್ಲಿ ಸ್ನಾನ ಮಾಡಿದ ಜನರ ಮೈಗೆ ಜಿಡ್ಡಿನ ಅಂಶ ಅಂಟಿಕೊಂಡು ತುರಿಕೆ ಪ್ರಾರಂಭಗೊಳ್ಳುತ್ತಿದೆ ಎಂದು ನಾಗರಿಕರು ತಮ್ಮ ಅನುಭವ ತೋಡಿಕೊಂಡಿದ್ದಾರೆ.
ನೀರು ಹರಿದ ಕಲ್ಲು, ಪೊದೆಗಳ ಮೇಲೆ ಕಂದುಬಣ್ಣ ಅಂಟಿಕೊಂಡಿರುವ ದೃಶ್ಯ ಗೋಚರಿಸಿದೆ. ಈ ಜಲಾಶಯದಿಂದ ಹರಿಸಲಾಗುವ ನೀರನ್ನು ಸೋಮವಾರಪೇಟೆ ಪಟ್ಟಣ, ಅತ್ತೂರು ಗ್ರಾಮ, ಹಾರಂಗಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದ್ದು ಇದನ್ನು ಬಳಸಿದರೆ ಭಾರೀ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಭಾಸ್ಕರ್ ತಿಳಿಸಿದ್ದು ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಕೋರಿದ್ದಾರೆ.