ಅರೆಕಾಡು (ಹೊಸ್ಕೇರಿ), ಮೇ 30: ಪರೀಕ್ಷೆಗಳು ಮುಗಿದು ಫಲಿತಾಂಶ ಹೊರಬಿದ್ದ ಬಳಿಕ ಮಕ್ಕಳು ಸಾಮಾನ್ಯವಾಗಿ ತಮ್ಮಷ್ಟಕ್ಕೆ ಆಟವಾಡಿಕೊಳ್ಳುವದು, ಮನೆಯಲ್ಲಿ ಸೇರಿದಂತೆ ಹೊರಗೆ ವಿವಿಧ ಕೀಟಲೆಗಳಲ್ಲಿ ತೊಡಗುವದು ಸಹಜ. ಇಂತಹ ಮಕ್ಕಳನ್ನು ಒಂದೆಡೆ ಕಲೆಹಾಕಿ ಅವರಿಗೆ ವಿವಿಧ ರೀತಿಯಲ್ಲಿ ಉಪಯುಕ್ತವಾಗುವ ತರಬೇತಿಗಳನ್ನು ಒದಗಿಸುವದು... ಇದರೊಂದಿಗೆ ವಿವಿಧ ಮಾರ್ಗದರ್ಶನ ನೀಡುವದು. ಎಲ್ಲರನ್ನೂ ಒಟ್ಟಿಗೆ ಪ್ರವಾಸದ ರೀತಿಯಲ್ಲಿ ಹೊರ ಸಂಚಾರಕ್ಕೆ ಶಿಸ್ತುಬದ್ಧವಾಗಿ ಕರೆದೊಯ್ಯುವದು... ಇಂತಹ ಕಾಯಕ ತುಸು ತ್ರಾಸದಾಯಕವೇ ಸರಿ...!
ಆದರೂ ಇತ್ತೀಚಿನ ವರ್ಷಗಳಲ್ಲಿ ಸಂಬಂಧಿಸಿದ ಇಲಾಖೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಇಂತಹ ಪ್ರಯತ್ನ ನಡೆಸಿ ಯಶಸ್ಸು ಕಾಣುತ್ತಿರುವದು ಗಮನಾರ್ಹ. ಕೆಲವು ಕ್ರಿಯಾಶೀಲ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡು ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ರೀತಿಯ ಪ್ರಯತ್ನದ ಬೇಸಿಗೆ ಶಿಬಿರವೊಂದು ತಾ. 17 ರಿಂದ 27 ರವರೆಗೆ ಹೊಸ್ಕೇರಿ ಗ್ರಾಮ ಪಂಚಾಯಿತಿಯ ಅರೆಕಾಡು ಗ್ರಾಮದಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಬಾಲಭವನ ಸಮಿತಿಯಿಂದ ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ನೇತೃತ್ವದ ತಂಡ ಇದನ್ನು ಯಶಸ್ಸುಗೊಳಿಸಿದೆ. 115 ಮಕ್ಕಳು ಪಾಲ್ಗೊಂಡಿದ್ದ ಮಡಿಕೇರಿ ತಾಲೂಕು ಮಟ್ಟದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸಂಗೀತ, ನೃತ್ಯ, ಕ್ರಾಫ್ಟ್ (ಕಲೆ), ಕಸದಿಂದ ರಸ, ಚಿತ್ರಕಲೆ, ಕ್ರೀಡೆ ಇತ್ಯಾದಿಗಳನ್ನು ಪರಿಚಯಿಸಲಾಯಿತು.
ಜ್ಯೋತಿ ಅವರು ಸಂಗೀತ ವರ್ಷಿಣಿ ಹಾಗೂ ಪುನೀತ್ ನೃತ್ಯದ ಬಗ್ಗೆ ಕ್ರಾಫ್ಟ್ ಮತ್ತು ಕಸದಿಂದ ರಸದ ಕುರಿತು ಯಶ್ ಕಾರ್ಯಪ್ಪ, ಚಿತ್ರಕಲೆ, ಕ್ರೀಡೆಯ ಕುರಿತು ಕುಮಾರಸ್ವಾಮಿ ಅವರುಗಳು ಮಕ್ಕಳಿಗೆ 10 ದಿನಗಳ ಕಾಲ ತರಬೇತಿ ನೀಡಿದರು. ಇವರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರುಗಳಾದ ಸವಿತ, ಮೇನಕಿ, ಪಾರ್ವತಿ ಅವರುಗಳು ಶ್ರಮಿಸಿದ್ದು ಗ್ರಾಮಸ್ಥರಾದ ತಿಮ್ಮಯ್ಯ, ಸಂಜಯ್ ತಮ್ಮಯ್ಯ, ಹಂಸ, ಅಶೋಕ್, ವಿಲಿನ್ ಗಣಪತಿ, ಅನಿತ ಕಾರ್ಯಪ್ಪ, ಕುಟ್ಟಣ್ಣ, ಆನಂದ, ರಘು, ನಂದ ಬಿದ್ದಯ್ಯ, ಪ್ರಕಾಶ್ ಕುಶಾಲಪ್ಪ, ಕುಂಞಪ್ಪ, ದೇವಕಿ, ಶಿಲ್ಪ ಬೋಪಯ್ಯ, ನೂರ್‍ಜಹಾನ್ ಹಾಗೂ ಸ್ತ್ರೀ ಶಕ್ತಿ ಗುಂಪಿನವರು ಸಹಕರಿಸಿದರು.
ಹೊರ ಸಂಚಾರ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಬಾಲಭವನ ಸಮಿತಿಯು ಈ ಬಾರಿ ವಿಶೇಷವಾಗಿ ಶಿಬಿರಾರ್ಥಿಗಳಿಗೆ ಹೊರ ಸಂಚಾರ (ಪುಟ್ಟ ಪ್ರವಾಸ)ವನ್ನು ಹಮ್ಮಿಕೊಳ್ಳಲು ಸೂಚಿಸಿತ್ತು. ಇದರಂತೆ ಮದುರೆಕೊಪ್ಪದ ಕುಕ್ಕೆರ ಕುಂಞಪ್ಪ ಮತ್ತು ಮಣಿ ದಂಪತಿಗಳ ಸಹಕಾರದಿಂದ ಸುಂದರ ಪ್ರಕೃತಿಯ ನಡುವೆ ಹೊರ ಸಂಚಾರವನ್ನೂ ಹಮ್ಮಿಕೊಳ್ಳಲಾಗಿತ್ತು.
ಸಮಾರೋಪ
ಈ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ತಾ. 26 ರಂದು ಹೊಸ್ಕೇರಿ ಮರಗೋಡುವಿನ ಭಾರತೀಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಹಾಡು, ನೃತ್ಯ, ಮಕ್ಕಳು ತಯಾರಿಸಿದ ವಸ್ತುಗಳು ಕಣ್ಮನಸೆಳೆದವು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ, ಉಪನ್ಯಾಸಕರಾದ ಭಾಗ್ಯ, ಶಾಜಿಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್, ಬಾಲಭವನ ಸಮಿತಿ ವತಿಯಿಂದ ಹರೀಶ್, ಸಜಿತ್ ಸೇರಿದಂತೆ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕೊಡಗಂತೆ... ಬೆಡಗಂತೆ... ಹಾಡಿನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಶಿಬಿರಾರ್ಥಿಗಳು ಮತ್ತು ನೆರೆದಿದ್ದವರೆಲ್ಲರೂ ಸಾಮೂಹಿಕವಾಗಿ ವಾಲಗಕ್ಕೆ ಹೆಜ್ಜೆ ಹಾಕುವದರೊಂದಿಗೆ ಮುಕ್ತಾಯಗೊಂಡಿತು. ಹೊರ ಸಂಚಾರಕ್ಕೆ ನಿವೃತ್ತ ಶಿಕ್ಷಕರೂ ಆಗಿರುವ ಕುಂಞಪ್ಪ ಹಾಗೂ ಮಣಿ ದಂಪತಿಗಳು ವಿಶೇಷ ಸಹಕಾರ ನೀಡಿದ್ದಾಗಿ ಸವಿತ ಕೀರ್ತನ್ ತಿಳಿಸಿದ್ದಾರೆ.