ಮಡಿಕೇರಿ, ಮೇ 31: ತೋಟದ ಕಾವಲುಗಾರರೊಬ್ಬರ ಮೇಲೆ ಕಾಡಾನೆ ಧಾಳಿ ಮಾಡಿರುವ ಘಟನೆ ನಡೆದಿದೆ. ಚೆಟ್ಟಳ್ಳಿ ಸಮೀಪದ ಎಸ್.ಎಲ್.ಎನ್. ತೋಟದ ಕಾವಲುಗಾರರಾಗಿರುವ ಚಂದ್ರಪ್ಪ (55) ಅವರು ಇಂದು ಬೆಳಿಗ್ಗೆ ಕಾರ್ಮಿಕರನ್ನು ಕೆಲಸಕ್ಕೆ ಕರೆಯುವ ನಿಟ್ಟಿನಲ್ಲಿ ಗಂಟೆ ಬಾರಿಸಲು ತೆರಳುತ್ತಿದ್ದ ವೇಳೆ ಸಮೀಪದ ಕೆರೆಗೆ ನೀರು ಕುಡಿಯಲು ಬಂದ ಕಾಡಾನೆಯೊಂದು ಧಾಳಿ ಮಾಡಿದೆ. ಪರಿಣಾಮ ಎದೆಯ ಭಾಗಕ್ಕೆ ಗಾಯಗೊಂಡ ಚಂದ್ರಪ್ಪ ಅವರನ್ನು ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಸಂಕೇತ್ ವೈಯಕ್ತಿಕ ಪರಿಹಾರ : ಕಾಡಾನೆ ಧಾಳಿಗೊಳಗಾದ ಚಂದ್ರಪ್ಪ ಅವರನ್ನು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕವಾಗಿ ರೂ. 10 ಸಾವಿರ ಧನ ಸಹಾಯ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಾನೆಗಳು ಬೀಡು ಬಿಟ್ಟಿರುವ ಕಾಫಿ ತೋಟಗಳಿಂದ (ಮೊದಲ ಪುಟದಿಂದ) ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಒತ್ತಾಯಿಸಿದರು.

ಅಲ್ಲದೆ ತಾನು ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆ.ಡಿ.ಎಸ್. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಜಿಲ್ಲೆಯ ಆನೆ-ಮಾನವ ಸಂಘರ್ಷದ ಬಗ್ಗೆ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಮನವಿ ಮಾಡಿದ್ದೇನೆ. ಈ ಬಗ್ಗೆ ಸದ್ಯದಲ್ಲೇ ಅರಣ್ಯ ಸಚಿವರ ಗಮನಕ್ಕೆ ತಂದು ಯೋಜನೆಗಳನ್ನು ರೂಪಿಸಲಾಗುವದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ವರದಿಯನ್ನು ಕಳುಹಿಸಿಕೊಡುವಂತೆ ಅರಣ್ಯಾಧಿಕಾರಿಗಳನ್ನು ಸಂಕೇತ್ ಒತ್ತಾಯಿಸಿದರು. ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಮಿತಿ ಮೀರಿದ್ದರೂ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಕೆಳ ವರ್ಗದ ಅರಣ್ಯ ಇಲಾಖಾ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ದೂರವಾಣಿ ಮೂಲಕ ಡಿ.ಎಫ್.ಓ. ಮಂಜುನಾಥ್ ಅವರನ್ನು ಸಂಪರ್ಕಿಸಿ ಆಸ್ಪತ್ರೆಗೆ ಕರೆಸಿಕೊಂಡ ಸಂಕೇತ್ ಕಾಡಾನೆ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಎ.ಸಿ.ಎಫ್. ಚಿಣ್ಣಪ್ಪ, ಉಪ ವಲಯ ಅರಣ್ಯ ಅಧಿಕಾರಿ ದೇವಿಪ್ರಸಾದ್, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.