ಮಡಿಕೇರಿ, ಮೇ 31: ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ವಲಯ ಹಾಗೂ ಕೊಡಗಿನ ಪುಷ್ಪಗಿರಿ ಅರಣ್ಯ ವಲಯದ ಗಡಿಯಲ್ಲಿರುವ ಕೂಜಿಮಲೆ ಮತ್ತು ಸುಟ್ಟತ್‍ಮಲೆ ವ್ಯಾಪ್ತಿಯಲ್ಲಿ ಮರಳಿ ಅಕ್ರಮ ಹರಳು ಕಲ್ಲು ದಂಧೆ ನಡೆಯುತ್ತಿದ್ದು, ಮಡಿಕೇರಿಯ ಕೆಲವರು ಈ ವನಸಂಪತ್ತು ಲೂಟಿಯಲ್ಲಿ ತೊಡಗಿರುವ ಸುಳಿವು ಲಭಿಸಿದೆ. ಒಂದೊಮ್ಮೆ ರೂ. 500 ರಿಂದ 700 ಮೊತ್ತಕ್ಕೆ ಹರಳು ಕಲ್ಲು ಕೆ.ಜಿ. ಯೊಂದಕ್ಕೆ ಮಾರಾಟವಾಗುತ್ತಿದ್ದರೆ, ಪ್ರಸಕ್ತ ಸುಮಾರುರೂ. 25 ಸಾವಿರ ದೊರಕಲಿದೆ ಎನ್ನಲಾಗುತ್ತಿದೆ.1990ರ ಬಳಿಕ ಸುಬ್ರಹ್ಮಣ್ಯ ವ್ಯಾಪ್ತಿಯ ಕೂಜಿಮಲೆಯಲ್ಲಿ ಈ ದಂಧೆ ಕಾಣಿಸಿಕೊಂಡು ಬಳಿಕ ನಿಧಾನವಾಗಿ ಮಡಿಕೇರಿ ಬಳಿಯ ಬಿಳಿಗೇರಿ, ಸಕಲೇಶಪುರ ವಲಯ, ಭಾಗಮಂಡಲ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯತೊಡಗಿತ್ತು. ಒಂದು ದಶಕದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹರಳು ಕಲ್ಲು ದಂಧೆಗೆ ಕಡಿವಾಣ ಹಾಕಿದ್ದರು.ದಂಧೆಯ ಮೂಲ : 1992ರಲ್ಲಿ ಬಹಿರಂಗಗೊಂಡ ಅಕ್ರಮ ಹರಳು ಕಲ್ಲು ದಂಧೆಯನ್ನು ಮೊದಲಿಗೆ ಕಡಮಕಲ್ ರಬ್ಬರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬ (ಲಂಕಾ ಪುನರ್ವಸತಿಗೆ) ಕಂಡುಗೊಂಡು ದಿನೇ ದಿನೇ ಮಡಿಕೇರಿಯತ್ತ ಬರುವದರೊಂದಿಗೆ ಆರ್ಥಿಕವಾಗಿ ಸ್ಥಿತಿವಂತನಾಗ ತೊಡಗಿದನಂತೆ. ಈತನ ಚಲನವಲನ ಕಂಡು ಹಿಡಿದ ಆ ಭಾಗದ ಗ್ರಾಮಸ್ಥರು ಹರಳು ಕಲ್ಲುವಿನ ಸುಳಿವು ಪಡೆದು ನಾಲ್ಕೈದು ವರ್ಷ ಸಾವಿರಾರು ಸಂಖ್ಯೆಯಲ್ಲಿ ಅದೇ ಕಸುಬಿನಲ್ಲಿ ತೊಡಗಿದ್ದರು.

ಪರಿಣಾಮ ಕೆಲವರು ಮಣ್ಣಿನಡಿ ಸಿಲುಕಿದ್ದರೆ, ಮತ್ತೆ ಕೆಲವರು ಈ ದಂಧೆಯಿಂದ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಅಂತಹ ಸನ್ನಿವೇಶದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಜಿಲ್ಲೆಯ ಗಡಿಗಳಲ್ಲಿ ಹರಳು ಕಲ್ಲು ದೊರಕುವ ಸ್ಥಳಗಳಲ್ಲಿ ಪ್ರತ್ಯೇಕ ಟೆಂಟ್‍ಗಳನ್ನು ನಿರ್ಮಿಸಿ ಕಾವಲು ಸಿಬ್ಬಂದಿ ನಿಯೋಜಿಸಿದ್ದಾರೆ.

ಬೇಲಿ ಹೊಲ ಮೇಯ್ದಂತೆ : ಪರಿಣಾಮ ಮೇಲ್ನೋಟಕ್ಕೆ ಹರಳು ಕಲ್ಲು ದಂಧೆ ನಿಯಂತ್ರಿಸಲ್ಪಟ್ಟಂತೆ ಭಾಸವಾದರೂ, ಅರಣ್ಯ ಸಿಬ್ಬಂದಿ ಹಾಗೂ ದಂಧೆಕೋರರು ಒಳ ಒಪ್ಪಂದ ಮಾಡಿಕೊಂಡು ಕಳ್ಳ ಮಾರ್ಗದಿಂದ ಕೃತ್ಯ ಮುಂದುವರೆಸಿದ್ದಾರೆ. ಮಾತ್ರವಲ್ಲದೆ ಆಮಿಷಗಳಿಗೆ ಒಳಗಾಗಿರುವ ಗ್ರಾಮೀಣ ಮುಗ್ಧ ಜನರು ದಿನಗಟ್ಟಲೆ ಮಣ್ಣಿನೊಳಗೆ ಸುರಂಗ ಕೊರೆದು, ಕಷ್ಟಪಟ್ಟು ಖನಿಜ ಸಂಪತ್ತು (ಹರಳು) ಸಂಗ್ರಹಿಸಿ ಕನಿಷ್ಟ ಬೆಲೆಗೆ ದಂಧೆಕೋರರಿಗೆ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಅನಂತರದ ವರ್ಷಗಳಲ್ಲಿ ಈ ದಂಧೆ ಹತೋಟಿಗೆ ಬಂದಿರುವದಾಗಿ ಹೇಳಲಾಗಿತ್ತು.

ಆದರೆ, ಪ್ರಸಕ್ತವೂ ಕೂಡ ಒಂದೊಮ್ಮೆ ಕೂಜಿಮಲೆಗೆ

ಪೆರಾಜೆಯಲ್ಲಿ ಪ್ರಕರಣ ಪತ್ತೆ

ಕೊಡಗು ಜಿಲ್ಲೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ರೇಷ್ಮಾ ಅವರ ಪ್ರಕಾರ ಇತ್ತೀಚೆಗೆ ಕೊಡಗಿನ ಗಡಿ ಪ್ರದೇಶ ಪೆರಾಜೆಯಲ್ಲಿ ಹರಳು ಸಾಗಾಟ ಪ್ರಕರಣವೊಂದು ಪತ್ತೆಯಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೂಜಿಮಲೆಯಲ್ಲಿ ಹರಳು ದಂಧೆ ನಡೆಯುತ್ತಿದೆ ಎಂಬದರ ಕುರಿತು ಅರಣ್ಯ ಇಲಾಖಾಧಿಕಾರಿಗಳಿಂದ ತನಗೆ ಮಾಹಿತಿ ಲಭ್ಯವಾಗಿ ತಾನು ಸ್ಥಳಕ್ಕೆ ಹೋಗಿ ಪರಿಶೀಲಿಸಿದುದಾಗಿ ಅವರು ತಿಳಿಸಿದರು.

ಆದರೆ, ಸ್ಥಳಕ್ಕೆ ತೆರಳಿದಾಗ, ಆ ಪ್ರಕರಣ ದಕ್ಷಿಣ ಕನ್ನಡ ಪರಿವ್ಯಾಪ್ತಿಯೊಳಗೆ ನಡೆದುದು ಎಂದು ಪತ್ತೆಯಾಗಿದ್ದು, ಆ ಜಿಲ್ಲೆಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ರೇಷ್ಮಾ ತಿಳಿಸಿದರು.(ಮೊದಲ ಪುಟದಿಂದ) ಸೀಮಿತವಾಗಿದ್ದ ಹರಳು ಕಲ್ಲು ನಿಕ್ಷೇಪ ಅಗೆಯುವ ಕೆಲಸ ಬಾಳುಗೋಡುವಿನ ಸುಟ್ಟತ್‍ಮಲೆ, ಉಪ್ಪುಕಳ ಮುಂತಾದೆಡೆಗಳಲ್ಲಿ ವಿಸ್ತಾರಗೊಂಡಿರುವದಾಗಿ ಗೊತ್ತಾಗಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಕಡಮಕಲ್ ಕಂಪನಿಗೆ ಸೇರಿದ ರಬ್ಬರ್ ತೋಟ ಕಾರ್ಮಿಕನನ್ನೇ ಬಳಸಿಕೊಂಡು ಮಡಿಕೇರಿಯ ಮಂದಿ ದಂಧೆ ಮುಂದುವರೆಸಿರುವ ಆರೋಪವಿದೆ.

ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ: ಪ್ರಸಕ್ತ ದಂಧೆ ನಡೆಯುತ್ತಿದೆ ಎನ್ನಲಾದ ಅರಣ್ಯ ಪ್ರದೇಶ ಸೇರಿದಂತೆ ಸುಬ್ರಹ್ಮಣ್ಯ ವ್ಯಾಪ್ತಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಿರಂಜನ್ ಬಳಿ ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ, ಅರಣ್ಯ ಇಲಾಖೆಗೆ ಸಂಬಂಧಪಟ್ಟಂತಹ ವನ್ಯಜೀವಿ ಸಂರಕ್ಷಿತ ಮೀಸಲು ಅರಣ್ಯದೊಳಗೆ ಈ ಕೃತ್ಯ ನಡೆಯುತ್ತಿರುವ ಕಾರಣ ಆ ಇಲಾಖಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸಂರಕ್ಷಿತ ಅರಣ್ಯವಾದ್ದರಿಂದ ಅದು ಗಣಿ ವಿಜ್ಞಾನ ಇಲಾಖೆಗೆ ಸಂಬಂಧ ಪಡುವದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ಸುಬ್ರಹ್ಮಣ್ಯದಿಂದ : ಇನ್ನು ಸುಬ್ರಹ್ಮಣ್ಯ ಅರಣ್ಯ ವಲಯಾಧಿಕಾರಿ ವರದರಾಜ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಈ ಹಿಂದೆ ನಡೆದಿರುವ ದಂಧೆ ಕಳೆದ ಒಂದು ವರ್ಷದಿಂದ ಹತೋಟಿಗೆ ಬಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಿಷಯ ತಮ್ಮ ಗಮನಕ್ಕೆ ಬಂದಿರುವ ಮೇರೆಗೆ ಗಸ್ತು ಹೆಚ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಲಯಾಧಿಕಾರಿ ಸ್ಪಷ್ಟನೆ: ಪುಷ್ಪಗಿರಿ ಅರಣ್ಯ ವನ್ಯಧಾಮ ವಿಭಾಗದ ಮೀಸಲು ಸಂರಕ್ಷಿತ ಪ್ರದೇಶ ಅಧಿಕಾರಿ ಶ್ರೀನಿವಾಸ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಈಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಅರಣ್ಯ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಹರಳು ಕಲ್ಲು ದಂಧೆಗೆ ಕಡಿವಾಣ ಹಾಕಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ರೂಬಿ ಅಲ್ಲ : ಮಡಿಕೇರಿಯಿಂದ ರಾಜಸ್ತಾನ ಹಾಗೂ ಉತ್ತರಭಾರತದ ಇತರೆಡೆಗಳಿಗೆ ಸಾಗಾಟವಾಗುತ್ತಿರುವ ಈ ಹರಳು ಕಲ್ಲನ್ನು ‘ರೂಬಿ’ ಹೆಸರಿನಲ್ಲಿ ಬಣ್ಣ ಬೆರೆಸಿ ಶುಭ್ರಗೊಳಿಸಿ ಮಾರಾಟ ದಂಧೆಯಲ್ಲಿ ತೊಡಗಿದ್ದು, ಅದು ‘ರೂಬಿ’ ಹರಳು ಅಲ್ಲವೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬದಲಾಗಿ ‘ಕೊರೆಂಡಂ’ ಜಾತಿಗೆ ಸೇರಿದ ಹರಳು ಆಗಿದ್ದು, ರೂಬಿಯಷ್ಟು ಮೌಲ್ಯದ್ದಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ಸಕಲೇಶಪುರ ತಾಲೂಕಿನ ವ್ಯಾಪ್ತಿಯಿಂದ ಸುಟ್ಟತ್‍ಮಲೆ, ಕೂಜಿಮಲೆ, ಕಡಮಕಲ್ ಶ್ರೇಣಿಯಿಂದ ಭಾಗಮಂಡಲ ಬೆಟ್ಟ ಸಾಲುಗಳ ತನಕ ಈ ಕೊರೆಂಡಂ ಖನಿಜ ಸಂಪತ್ತು ಇದೆಯಾದರೂ, ಬೆಳೆಬಾಳುವಂಥದ್ದಲ್ಲ ಎಂದು ಇಲಾಖಾಧಿಕಾರಿ ಪ್ರತಿಕ್ರಿಯಿಸಿದ್ದಾರೆ. ಆದರೆ ಕಳೆದ ಸುಮಾರು 25 ವರ್ಷಗಳಿಂದ ಸಂರಕ್ಷಿತ ಮೀಸಲು ಅರಣ್ಯದ ಪಶ್ಚಿಮಘಟ್ಟ ಸಾಲಿನ ಈ ದಂಧೆ ಬಗ್ಗೆ ಸರಕಾರ ಯಾವದೇ ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕುಳಿತಿರುವದು ದುರಂತವಷ್ಟೇ.

ಕೊಡಗು ವನ್ಯಜೀವಿ ಸಂರಕ್ಷಣಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಯ ಅವರ ಪ್ರಕಾರ ಕೊಡಗಿನ ಕೂಜಿಮಲೆಯಲ್ಲಿ ಅರಣ್ಯ ಇಲಾಖೆಯ ನಿರ್ದಾಕ್ಷಿಣ್ಯ ಕ್ರಮದಿಂದ ಹರಳು ಕಲ್ಲು ಅಕ್ರಮ ಸಾಗಾಟ ಸ್ಥಗಿತಗೊಂಡಿದೆ. ಈ ವಿಭಾಗದಲ್ಲಿ ಅರಣ್ಯ ಇಲಾಖಾ ಪ್ರಾಣಿ ಬೇಟೆ ತಡೆ ಕ್ಷಿಪ್ರ ದಳ ನಿರಂತರ ಕಾರ್ಯಾಚರಣೆ ನಡೆಸಿದೆ. ಅಲ್ಲದೆ, ಮೀಸಲು ಅರಣ್ಯ ಪ್ರದೇಶದ ಬಹುತೇಕ ಕಡೆ ಕ್ಯಾಮರಾಗಳನ್ನು ಅಳವಡಿಸಿದ್ದು, ಹದ್ದುಗಣ್ಣಿನಿಂದ ಗಮನ ಹರಿಸಲಾಗಿದೆ ಎಂದು ಜಯ ಸ್ಪಷ್ಟಪಡಿಸಿದರು.

ಹರಳು ಕಲ್ಲು ಅಕ್ರಮದ ವಿರುದ್ಧ ಹೋರಾಟ ನಡೆಸಿದ್ದ ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ ಅವರ ಅನಿಸಿಕೆಯಂತೆ ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಹರಳು ಕಲ್ಲು ದಂಧೆ ಅನಿಯಂತ್ರಿತವಾಗಿ ಎಗ್ಗಿಲ್ಲದೆ ಸಾಗಿತ್ತು. ಸೋಮವಾರಪೇಟೆ ತಾಲೂಕು ತಣ್ಣಿಮಾನಿಯಲ್ಲಿ ಈ ದಂಧೆ 15 ವರ್ಷಗಳಿಂದ ನಡೆದು ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯಲಾಗಿತ್ತು. ಆಗ ಕಾವೇರಿ ಸೇನೆಯಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ದಂಧೆಯನ್ನು ಕಾನೂನಾತ್ಮಕವಾಗಿ ಸಂಪೂರ್ಣ ತಡೆಗಟ್ಟಲಾಗಿತ್ತು.

ಮಡಿಕೇರಿ ವಿಭಾಗ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಂಜುನಾಥ್ ಅವರ ಪ್ರಕಾರ ಕೂಜಿಮಲೆಯಲ್ಲಿ ಹರಳು ದಂಧೆ ನಡೆದ ಬಗ್ಗೆ ಇಲಾಖೆಗೆ ದೂರು ದೊರಕಿತ್ತು. ಬಳಿಕ ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಲಾಗಿತ್ತು. ಆದರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಅದು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ನಡೆದುದು ಎಂದು ಪತ್ತೆಯಾಗಿದೆ.

-ಶ್ರೀಸುತ