ಶನಿವಾರಸಂತೆ, ಮೇ 31: ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ರಸ್ತೆ ನಿರ್ಮಿಸಲು ಜೆಸಿಬಿಯೊಂದಿಗೆ ತೆರಳಿದ ಶನಿವಾರಸಂತೆ ಗ್ರಾಮ ಪಂಚಾಯಿತಿ ಪಿಡಿಓ ಧನಂಜಯ್ ಹಾಗೂ ಕಾರ್ಯದರ್ಶಿ ತಮ್ಮಯ್ಯಾಚಾರ್ ಅವರನ್ನು ತಡೆದು ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳಾವಕಾಶವಿಲ್ಲದೇ ತ್ಯಾಜ್ಯ ವಿಲೇವಾರಿ ಗಂಭೀರ ಸಮಸ್ಯೆಯಾಗಿತ್ತು. ಕಳೆದ ವರ್ಷ ಹಿಂದಿನ ಜಿಲ್ಲಾಧಿಕಾರಿ ಅವರು ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದ ಸರ್ವೆ ನಂ. 42/2 ರಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳ ಗುರುತಿಸಿಕೊಟ್ಟಿದ್ದರು.
ತ್ಯಾಜ್ಯ ವಿಲೇವಾರಿಗೆ ಗುರುತಿಸಿದ್ದ ಆ ಸ್ಥಳದಿಂದ 200 ಮೀಟರ್ ದೂರದಲ್ಲಿ ಗ್ರಾಮಸ್ಥರ ವಾಸದ ಮನೆಗಳಿರುವದೇ ಪ್ರತಿಭಟನೆಗೆ ಕಾರಣ. ಕಾಜೂರು ಸೇತುವೆ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ 11 ಎಕರೆ ಸರಕಾರಿ ಜಮೀನು ಇದ್ದು ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡಬಹುದು. ಮಾದ್ರೆ ಗ್ರಾಮದಲ್ಲಿ ಸ್ಥಳ ನೀಡಿದ್ದು ಸರಿಯಲ್ಲ. ಹಲವಾರು ಕುಟುಂಬಗಳಿದ್ದು ತ್ಯಾಜ್ಯದಿಂದ ರೋಗರುಜಿನ ಹರಡುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಎನ್. ಆನಂದ್ ಪರಿಶೀಲಿಸಿ, ಇಂದಿನ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಡಿ.ಜೆ. ಪ್ರವೀಣ್, ಯೋಗೇಂದ್ರ, ಕೆ.ಟಿ. ಹರೀಶ್, ಅರವಿಂದ್, ಪ್ರವೀಣ್, ನಾಗೇಶ್, ನಾಗರಾಜ್, ಗಾಯತ್ರಿ, ಕಲಾ ವಹಿಸಿದ್ದರು. ದುಂಡಳ್ಳಿ, ಮಾದ್ರೆ ಗ್ರಾಮಸ್ಥರು ಪಾಲ್ಗೊಂಡಿದ್ದರು.