ಗೋಣಿಕೊಪ್ಪಲು, ಮೇ 31: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕೆಲ ಪೌರಕಾರ್ಮಿಕರು ವೇತನವಿಲ್ಲದೆ ಹಲವು ತಿಂಗಳಿನಿಂದ ಸಂಕಷ್ಟದಲ್ಲಿದ್ದು ನ್ಯಾಯಕೊಡಿಸುವಂತೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯರವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿಡರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 45 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು ಇವುಗಳಲ್ಲಿ 25 ಖಾಯಂ ನೌಕರರು, ಇಬ್ಬರು ದಿನಗೂಲಿ ಕಾರ್ಮಿಕರು ಹಾಗೂ 18 ಮಂದಿ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಪೌರಕಾರ್ಮಿಕರಾಗಿದ್ದರು. ದಿನಗೂಲಿ ನೌಕರರನ್ನು ಕೈಬಿಟ್ಟಿರುವ ಪಟ್ಟಣ ಪಂಚಾಯಿತಿ ಇವರಿಗೆ ಕಳೆದ 5 ತಿಂಗಳಿಂದ ವೇತನ ನೀಡದೆ ದುಡಿಸಿಕೊಂಡಿದೆ ಎನ್ನಲಾಗಿದ್ದು, ವೇತನಕ್ಕಾಗಿ ಅಧಿಕಾರಿಗಳ ಬಳಿ ತೆರಳಿದಾಗ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಸುತ್ತೋಲೆಯಂತೆ ಕೇವಲ 25 ಮಂದಿ ಮಾತ್ರ ಕೆಲಸ ನಿರ್ವಹಿಸಲು ಸಾಧ್ಯ ಎಂದು ಉತ್ತರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೊಂದ ಪೌರ ಕಾರ್ಮಿಕರು ಅನ್ಯಮಾರ್ಗವಿಲ್ಲದೆ ಸಂಕೇತ್ ಪೂವಯ್ಯ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ಸ್ಥಳದಿಂದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಂಕೇತ್ ಪೂವಯ್ಯ ಶುಕ್ರವಾರ ಕೊಡಗು ಜಿಲ್ಲಾಧಿಕಾರಿಗಳ ಬಳಿ ಪೌರಕಾರ್ಮಿಕರ ನಿಯೋಗವನ್ನು ಕರೆದೊಯ್ಯುವದಾಗಿ ಪೌರ ಕಾರ್ಮಿಕರಿಗೆ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರುಗಳಾದ ನವೀನ್‍ಕುಮಾರ್, ಚೆಲುವರಾಜು, ಪೊನ್ನಮ್ಮ, ವಿಜಯಲಕ್ಷ್ಮಿ, ಸರಸ್ವತಿ, ಶಾಂತಿ, ಗೌರಿ, ಕವಿತಾ, ತೇಜಾವತಿ, ನಾಗಮಣಿ, ರಾಜಮ್ಮ ಹಾಜರಿದ್ದರು.