ಮಡಿಕೇರಿ, ಮೇ 30: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಸಂಭವಿಸಬಹುದಾದ ಅಪಾಯಗಳು ಹಾಗೂ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇಂದು ನಗರಸಭಾ ಆಯುಕ್ತೆ ಶುಭಾ ಅವರು ಅಧಿಕಾರಿಗಳೊಂದಿಗೆ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ತಾ. 29 ರಂದು ನಗರದಲ್ಲಿ ದಿನವಿಡೀ ಮಳೆಸುರಿದಿದ್ದು, ಹಲವೆಡೆ ಹಲವಾರು ಅವ್ಯವಸ್ಥೆಗಳು ಉಂಟಾಗಿದ್ದವಲ್ಲದೆ ಈ ಬಗ್ಗೆ ಸಾರ್ವಜನಿಕರು ನಗರಸಭೆಯೊಂದಿಗೆ ಅಲವತ್ತುಕೊಂಡಿದ್ದಾರೆ. ನಿನ್ನೆಯ ಮಳೆಯಿಂದಾಗಿ ಉಕ್ಕುಡ ಹಾಗೂ ಪುಟಾಣಿ ನಗರದಲ್ಲಿ ಮನೆಗೋಡೆ ಕುಸಿತ ಹಾಗೂ ಮನೆಯ ಶೀಟ್ ಹಾನಿಗೊಳಗಾಗಿರುವ ಕುರಿತು ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಸುಬ್ರಹ್ಮಣ್ಯ ನಗರದಲ್ಲಿ ಮನೆಯೊಂದರ ತಡೆಗೋಡೆ ಕುಸಿದು ಬಿದ್ದಿರುವ ಕುರಿತು ಅಲ್ಲಿನ ನಿವಾಸಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದು, ಈ ಬಗ್ಗೆ ನಗರ ಸಭೆಯ ಗಮನಕ್ಕೂ ತಂದಿದ್ದಾರೆ.

ಆಯುಕ್ತೆ ಶುಭಾ ಅವರು ಇಂದು ನಗರದ ಕನ್ನಿಕಾ ಬಡಾವಣೆ, ಇಂದಿರಾನಗರ, ಅಂಬೇಡ್ಕರ್ ನಗರ, ಪುಟಾಣಿ ನಗರ, ಉಕ್ಕುಡ, ತ್ಯಾಗರಾಜನಗರ ವಿಭಾಗಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಶುಭಾ ಅವರು ಮಳೆಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಕನ್ನಿಕಾ ಬಡಾವಣೆ, ವೆಬ್ಸ್ ಸೇರಿದಂತೆ ಹಲವೆಡೆ, ಚರಂಡಿಗಳಲ್ಲಿ ನೀರು ಹರಿಯಲು ಸಮಸ್ಯೆ ಕಂಡು ಬಂದಿದ್ದು, ಇದನ್ನು ಜೆಸಿಬಿ ಮೂಲಕ ಸರಿಪಡಿಸ ಲಾಗುವದು. ಬಹುತೇಕ ಕಡೆಗಳಲ್ಲಿ ಇಂತಹದ್ದೇ ಸಮಸ್ಯೆಗಳ ಬಗ್ಗೆ ದೂರಿದೆ. ಈ ಬಗ್ಗೆ ನಗರಸಭೆಯಿಂದ ಸಾಧ್ಯವಾಗುವ ಕ್ರಮಗಳನ್ನು ತಕ್ಷಣ ನಿರ್ವಹಿಸ ಲಾಗುವದು ಎಂದು ತಿಳಿಸಿದರು. ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ ಕೆಲವು ಕಾಮಗಾರಿಗಳನ್ನು ನಡೆಸುವದು ಅಸಾಧ್ಯವಾಗಿತ್ತು.

ಆದರೆ, ತುರ್ತು ಕೆಲಸ ಹಾಗೂ ಅಗತ್ಯ ಅಭಿವೃದ್ಧಿ ಕೆಲಸ ನಿರ್ವಹಣೆಗೆ ಅವಕಾಶವಿರುವ ಕುರಿತು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ವಹಿಸಲಾಗುವದು ಎಂದು ಅವರು ತಿಳಿಸಿದರು. ನಗರ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಗಳಿಗೆ ಸಹಾಯವಾಣಿ (220111) ದೂರವಾಣಿಯನ್ನು ಸಂಪರ್ಕಿಸಬಹುದೆಂದು ಅವರು ಮಾಹಿತಿ ನೀಡಿದರು. ಕುಡಿಯುವ ನೀರಿನ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಯಾವದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಪರಿಶೀಲನೆ ಸಂದರ್ಭ ಕಿರಿಯ ಅಭಿಯಂತರರಾದ ವನಿತಾ, ಆರೋಗ್ಯ ನಿರೀಕ್ಷಕ ರಮೇಶ್, ನಾಗರಾಜ್, ಹೋಬಳಿ ಪಾಲ್ಗೊಂಡಿದ್ದರು.