ಕೂಡಿಗೆ, ಮೇ 30: ಸೈನಿಕ ಶಾಲೆಯಲ್ಲಿ ರಾಷ್ಟ್ರೀಯ ಮಟ್ಟದ ಸೈನಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಈ ಕಾರ್ಯಾ ಗಾರದಲ್ಲಿ 26 ಸೈನಿಕ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದಾರೆ.ಕಾರ್ಯಕ್ರಮದ ಉದ್ಘಾಟನೆ ಯನ್ನು ನಿರ್ಗಮಿತ ಬ್ರಿಗೇಡಿಯರ್ ಎಂ.ಎ. ದೇವಯ್ಯ (ವಿ.ಎಸ್.ಎಂ) ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ, ಸುಭದ್ರ ದೇಶ ಕಟ್ಟುವಲ್ಲಿ ಶಿಕ್ಷಕರ ಕೊಡುಗೆಗಳು, ಶಿಕ್ಷಕರ ಜವಾಬ್ದಾರಿಗಳ ಬಗ್ಗೆ ಕೂಲಂಕಷವಾಗಿ ತಿಳಿಸಿದರು. ತಮ್ಮ ಬಾಲ್ಯ ಜೀವನದನಲ್ಲಿ ಪಾಠ ಕಲಿಸಿದ ಶಿಕ್ಷಕರನ್ನು ಸ್ಮರಿಸಿಕೊಂಡರು. ಶಿಕ್ಷಕರು ಮಕ್ಕಳ ಅಭಿರುಚಿಗಳನ್ನು ಅರ್ಥಮಾಡಿ ಕೊಂಡು ಪಾಠ ಮಾಡಬೇಕು, ದೇಶ-ವಿದೇಶಗಳ ಕೆಲವೊಂದು ಮಹಾನ್ ನಾಯಕರ ಉದಾಹರಣೆಗಳನ್ನು ನೀಡುವದರ ಮೂಲಕ ತಿಳಿಸಿದರು.ರಾಷ್ಟ್ರೀಯ ರಕ್ಷಣಾ ಇಲಾಖೆಗೆ, ದೇಶ ಕಟ್ಟುವಂತಹ ಸಮರ್ಥ ಅಧಿಕಾರಿಗಳನ್ನು ಸೃಷ್ಟಿಸುವಲ್ಲಿ ಸೈನಿಕ ಶಾಲೆಗಳ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವದಕ್ಕೆ ಹಲವಾರು ಅವಕಾಶಗಳಿರುವದರಿಂದ ರಕ್ಷಣಾ ಇಲಾಖೆಗೆ ಸೇರುವ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಶಿಕ್ಷಕರಾದ ತಾವು ಅವರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ನೌಕಾದಳದ ಕ್ಯಾಪ್ಟನ್ ಯೋಗೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾತುಗಾರಿಕೆಯ ಕೌಶಲ್ಯವನ್ನು ಹೆಚ್ಚಿಸಬೇಕೆಂದು ತಿಳಿಸಿದರು. ನಂತರ ಕೊರಕೊಂಡ (ಆಂದ್ರಪ್ರದೇಶ) ಸೈನಿಕ ಶಾಲೆ ಮಾಜಿ ಇಂಗ್ಲೀಷ್ ಶಿಕ್ಷಕ ಜೇಸುದಾಸ್ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ತಿಳಿಸಿದರು. ಮಧ್ಯಾಹ್ನ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗುಂಪು ಚರ್ಚೆಗಳನ್ನು ಹೆಚ್ಚಾಗಿ ಏರ್ಪಡಿಸಬೇಕು. ಇದು ಸರ್ವೀಸ್ ಸೆಲೆಕ್ಷನ್ ಬೋರ್ಡ್‍ನಲ್ಲಿ ಹೆಚ್ಚು ಸಹಾಯಕವಾಗುತ್ತದೆ ಎಂದು ತಿಳಿಸಿದರು. ಶಾಲೆಯ ನೂತನ ಉಪಪ್ರಾಂಶುಪಾಲೆ ಲೆ. ಕರ್ನಲ್ ಶೀಮಾ ತ್ರಿಪಾಠಿ, ಶಾಲೆಯ ಶಿಕ್ಷಕ ಮತ್ತು ಆಡಳಿತ ವರ್ಗ ಮತ್ತು ಎಲ್ಲಾ ಸೈನಿಕ ಶಾಲೆಗಳಿಂದ ಆಗಮಿಸಿದ ಶಿಕ್ಷಕರೆಲ್ಲರೂ ಪಾಲ್ಗೊಂಡಿದ್ದರು. ತರಬೇತಿಯು ಜೂ. 2ರ ವರೆಗೆ ನಡೆಯಲಿದೆ.