ಗೋಣಿಕೊಪ್ಪ ವರದಿ, ಮೇ 31: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ವಿಸ್ತರಣಾ ಶಿಕ್ಷಣ ಘಟಕ ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜೇನು ನೊಣ ದಿನಾಚರಣೆಯನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆವರಣದಲ್ಲಿ ಆಚರಿಸಲಾಯಿತು.
ಜೇನು ಕುಟುಂಬ ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಭೋಧಸ್ವರೂಪನಂದಾಜಿ ಉದ್ಘಾಟಿಸಿ ಮಾತನಾಡಿ, ಜೇನು ಕೃಷಿ ಪರಿಸರಕ್ಕೆ ಪೂರಕವಾಗಿದ್ದು, ಉತ್ತಮ ಆದಾಯ ಪಡೆಯಲು ಒಂದು ಮಾರ್ಗವಾಗಿದೆ. ಕೊಡಗಿನಲ್ಲಿರುವ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಜೇನು ಕೃಷಿಯನ್ನು ಕೈಗೊಳ್ಳುವಂತಾ ಗಬೇಕು ಎಂದರು.
ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ವಿವಿಧ ಪರಿಸರ ಸೇವೆಗಳಲ್ಲಿ ಜೇನು ನೊಣದ ಪರಾಗಸ್ಪರ್ಶ ಸೇವೆ ಅತಿ ಪ್ರಮುಖವಾಗಿದೆ. ಅರಣ್ಯ ಮಹಾವಿದ್ಯಾಲಯದಲ್ಲಿ ಜೇನು ಕೃಷಿ ಕುರಿತು ಹೆಚ್ಚಿನ ಅಧ್ಯಯನ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕ ಕ್ರಮ ಹಾಗೂ ರೂಪುರೇಶೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾತ್ಯಕ್ಷಿಕೆಯಲ್ಲಿ ಜೇನು ಕುಟುಂಬದ ನಿರ್ವಹಣೆಯ ಬಗ್ಗೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರಡ್ಡಿ ನೀಡಿದರು. ಜೇನು ಕುಟುಂಬದ ವಿಭಜನೆ ಒಟ್ಟುಗೂಡಿಸುವದು, ಕೃತಕವಾಗಿ ಆಹಾರ ಒದಗಿಸುವದು, ಮಳೆಗಾಲದ ನಿರ್ವಹಣೆ, ಕೀಟ-ರೋಗ ಭಾದೆ ನಿಯಂತ್ರಣ ಮಾಹಿತಿ ನೀಡಲಾಯಿತು.
ಈ ಸಂದರ್ಭ ಅರಣ್ಯ ಮಹಾವಿದ್ಯಾಲಂiÀiದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಜಡೆಯಗೌಡ, ಡಾ. ಟಿ.ಎಸ್ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.