ಮಡಿಕೇರಿ, ಮೇ 30: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009ರ ಅನ್ವಯ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಯಾವದೇ ತಾರತಮ್ಯವಿಲ್ಲದೆ ಕಡ್ಡಾಯ, ಉಚಿತ ಹಾಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವದು ಎಲ್ಲರ ಕರ್ತವ್ಯವಾಗಿದೆ. ಪ್ರತಿ ವರ್ಷದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಂದ 5 ವರ್ಷ 5 ತಿಂಗಳು ಪೂರ್ಣಗೊಂಡ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಲು ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಿಂದಲೇ ಶಾಲೆಗೆ ಹಾಜರಾಗುವಂತೆ ಮಾಡಲು ಹಾಗೂ ವಿವಿಧ ಕಾರಣಗಳಿಂದ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದೇ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆ ತರುವ ಉದ್ದೇಶದಿಂದ ತಾ. 31 ರವರೆಗೆ ವಿಶೇಷ ದಾಖಲಾತಿ ಆಂದೋಲನವನ್ನು, ಜೂನ್ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುವಲ್ಲಿ ಸಹಕಾರ ನೀಡುವಂತೆ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08274-257249, 260808 ನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.