ಬೆಂಗಳೂರು, ಮೇ 30: ವಿಧಾನಸೌಧದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲ ಬೆಳೆ ಸಾಲಮನ್ನಾಕ್ಕೆ ಆಸಕ್ತಿ ವ್ಯಕ್ತಪಡಿಸಿದರು. ಸಾಲಮನ್ನಾ ಮಾಡಲು 15 ದಿನದ ಕಾಲಾವಕಾಶ ನೀಡಬೇಕು’ ಎಂದು ರೈತರಲ್ಲಿ ಮನವಿ ಮಾಡಿದರು. 2 ಹಂತಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆಯಲ್ಲಿ ಮಾತನಾಡಿದ ಸಿಎಂ, ರಾಜ್ಯದ ಜನರು ಗೊಂದಲಕ್ಕೆ ಒಳಗಾಗಬಾರದೆಂದು ತರಾತುರಿಯಲ್ಲಿ ಸಭೆ ಕರೆದಿದ್ದೇನೆ ಎಂದು ಮಾತು ಮುಂದುವರಿಸಿದರು.ಬೆಳೆ ಸಾಲ ಹೊರತು ಇತರ ಸಾಲಗಳಿಗೆ ಮನ್ನಾ ಅನ್ವಯ ಆಗುವದಿಲ್ಲ. ಅಲ್ಲದೆ ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳಿಗೂ ಸಾಲ ಮನ್ನಾ ಅನ್ವಯವಾಗಲಿದೆ ಎಂಬ ಕುರಿತು ನಿರೀಕ್ಷೆಯಿದ್ದು ಕೊಡಗು ಜಿಲ್ಲೆಯ ಮಟ್ಟಿಗೆ ಸಮಾಧಾನಕರ. ಆದರೆ, ನಗರ ಪ್ರದೇಶಗಳಲ್ಲಿ ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆದ ಸಾ¯ವನ್ನು ಮನ್ನಾ ಮಾಡಲಾಗುವದಿಲ್ಲ ಎಂದು ಇಂದಿನ ಪೂರ್ವ ಭಾವಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು. ರೈತರ ಕೃಷಿ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಇಂದು ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ನಂತರ ಈ ವಿಷಯ ಪ್ರಕಟಿಸಿದರು. 2009, ಏಪ್ರಿಲ್ 1ರಿಂದ 2017ರ ಡಿಸೆಂಬರ್ 31 ರವರೆಗೆ ರೈತರು ಮಾಡಿರುವ ಎಲ್ಲಾ ಬೆಳೆ ಸಾಲ ಮನ್ನಾ ಮಾಡುವದಾಗಿ ಘೋಷಿಸಿದರು. ಸಾಲ ಮನ್ನಾ ಸೂತ್ರ ಶ್ರೀಮಂತ ರೈತರು, 3 ವರ್ಷದ ಆದಾಯ ತೆರಿಗೆ ಪಾವತಿಸಿರುವ ರೈತರು, ವ್ಯಾಪಾರದ ಜತೆಗೆ ಕೃಷಿ ಮಾಡುತ್ತಿರುವ ರೈತರ ಸಾಲ ಮನ್ನಾ ಮಾಡಬೇಕೆ, ಕೃಷಿಯೇತರ ಉದ್ದೇಶಕ್ಕೆ ಮಾಡಿರುವ ಸಾಲ ಮನ್ನಾ ಮಾಡಬೇಕೆ ಎಂಬ ಬಗ್ಗೆ ಚರ್ಚಿಸಲಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಯನ್ನೂ ಪಡೆಯಬೇಕಿದ್ದು, ಇನ್ನು 15 ದಿನದೊಳಗೆ ಸೂಕ್ತ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಹೇಳಿದರು.
ಮೊದಲ ಅವಧಿಯಲ್ಲಿ 1-04-2009 ರಿಂದ 31-12-2017 ರ ವರೆಗಿನ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವದಾಗಿ ಘೋಷಿಸಿದರು. ಉಳಿದ ಸಾಲವನ್ನು ಆದ್ಯತೆಯ ಮೇರೆಗೆ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಕ್ಕೆ ಬರುವದಾಗಿ ಹೇಳಿದರು.
ಮೊದಲ ಹಂತದಲ್ಲಿ ಕೆಲವು ಸಾಲಗಳನ್ನು ಮನ್ನಾ ಮಾಡ ಲಾಗುವದಿಲ್ಲ ಎಂದು ಮುಖ್ಯಮಂತ್ರಿ ಪ್ರಕಟಿಸಿದರು. ಅವುಗಳೆಂದರೆ: 1 ಚುನಾಯಿತ ಸದಸ್ಯರ ಸಾಲ ಮನ್ನಾ ಇಲ್ಲ 2.ಕೃಷಿ ಸಾಲ ಪಡೆದು ಉದ್ಯಮಕ್ಕೆ ಬಳಸಿದವರ ಸಾಲ ಮನ್ನಾ ಇಲ್ಲ 3.ಸತತ 3 ವರ್ಷ 4 ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಿದ ರೈತರ ಸಾಲ ಮನ್ನಾ ಇಲ್ಲ 4.ಸಹಕಾರ ಬ್ಯಾಂಕ್‍ಗಳ ಪದಾಧಿಕಾರಿಗಳಾಗಿ ರೂ.3 ಲಕ್ಷ ರೂಪಾಯಿ ಆದಾಯ ಇರುವವರ ಸಾಲ ಮನ್ನಾ ಇಲ್ಲ.
5.ನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದವರ ಸಾಲ ಮನ್ನಾ ಇಲ್ಲ. 6. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸಹ ಬೆಳೆಸಾಲವನ್ನು ಪಡೆದಿರುತ್ತಾರೆ. ಅವರ ಸಾಲವನ್ನು ಮನ್ನಾ ಮಾಡಬೇಕೆ? ಎಂದು ಚರ್ಚೆ ನಡೆಸಲಾಗುತ್ತದೆ.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಗಳನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಲಾಗುತ್ತದೆ. ಅವರಿಗೆ ರೈತರು ಸಾಲ ಪಡೆದಿದ್ದು ಏಕೆ, ಎಷ್ಟು, ಖರ್ಚಾಗಿದ್ದು ಹೇಗೆ? ಎಂಬುದರ ವಿವರ ನೀಡಬೇಕು. ಅದನ್ನು ಪರೀಶೀಲನೆ ಮಾಡಿ ಋಣಮುಕ್ತ ಪತ್ರವನ್ನು ಮನೆಗೆ ತಲಪಿಸಲಾಗುತ್ತದೆ. ರೈತರು ಅಲ್ಲದವರೂ ಸಾಲ ಮಾಡಿಕೊಂಡಿದ್ದಾರೆ. ಗೊಬ್ಬರದ ಅಂಗಡಿ ಇಟ್ಟುಕೊಂಡು ಕೃಷಿ ಹೆಸರಲ್ಲಿ ಐದಾರು ಕೋಟಿ ಸಾಲ ಪಡೆದಿರುತ್ತಾರೆ. ಕಾಫಿ ಪ್ಲಾಂಟರ್ ಸಾಲ ತೆಗೆದುಕೊಂಡಿರುತ್ತಾರೆ. ಅದನ್ನೆಲ್ಲ ಹೇಗೆ ಮನ್ನಾ ಮಾಡುವದು ಎಂಬ ಬಗ್ಗೆ ಚರ್ಚೆ ನಡೆಸಬೇಕು ಎಂದು ತಿಳಿಸಿದರು.
2ನೇ ಹಂತದಲ್ಲಿ ಕೃಷಿಯಂತ್ರ ಪಡೆದುಕೊಳ್ಳಲು ಮಾಡಿದ ಸಾಲ, ಕೊಳವೆಬಾವಿ ಕೊರೆಸಲು, ಎತ್ತಿನಗಾಡಿ ಖರೀದಿ ಮುಂತಾದವುಗಳಿಗೆ ಪಡೆದಿರುವ ಸಾಲÀ ಮನ್ನಾ ಕುರಿತು ಚರ್ಚಿಸಲಾಗುವದು. ಮೊದಲ ಹಂತದಲ್ಲಿ ಈ ಸಾಲಗಳನ್ನು ಮನ್ನಾ ಮಾಡಲಾಗುವದಿಲ್ಲ.
ಸಮ್ಮಿಶ್ರ ಸರಕಾರದ ರಚನೆಯಾದಾಗ, ಸಾಲಮನ್ನಾ ಆಗುತ್ತೋ ಇಲ್ಲವೋ ಎಂಬ ಆತಂಕ ಮೂಡಿತ್ತು. ಆದರೆ ನಾನು ರೈತರನ್ನೂ ಉಳಿಸುತ್ತೇನೆ ಹಾಗೂ ರಾಜ್ಯದ ಖಜಾನೆಯನ್ನೂ ಭದ್ರವಾಗಿರಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ನನ್ನ ಸರ್ಕಾರ ಆರ್ಥಿಕ ಶಿಸ್ತು ಮೀರಿ ಹೋಗೋದಿಲ್ಲ. ನಿಮ್ಮನ್ನೂ ಉಳಿಸಿ, ನಮ್ಮ ಸರ್ಕಾರವನ್ನೂ ಐದು ವರ್ಷ ಉಳಿಸುವ ಜವಾಬ್ದಾರಿ ನನ್ನದು ಎಂದರು. ಸಾಲಮನ್ನಾ ಮಾಡಲು ಕಾಂಗ್ರೆಸ್‍ನಿಂದ ಯಾವದೇ ವಿರೋಧ ಇಲ್ಲ, ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಮಿತಿಗಳಿರುತ್ತವೆ, ಎಲ್ಲವನ್ನೂ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ರಾಜ್ಯಕ್ಕೆ ಉತ್ತಮ ಆಡಳಿತ
(ಮೊದಲ ಪುಟದಿಂದ) ಕೊಡಲೆಂದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.
ರೈತರನ್ನು ಸಂಪೂರ್ಣ ಋಣ ಮುಕ್ತರನ್ನಾಗಿ ಮಾಡಿ ಪತ್ರವನ್ನು ಮನೆ ಬಾಗಿಲಿಗೆ ಕಳುಹಿಸುತ್ತೇನೆ; ಇದು ನನ್ನ ಬದ್ಧತೆಯಾಗಿದೆ ಎಂದು ಸಿಎಂ ಸಭೆಯಲ್ಲಿ ಘೋಷಿಸಿದರು. ‘ಮೊದಲ ಸ್ಕೀಂನಲ್ಲಿ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ಭರವಸೆ ನೀಡು ತ್ತೇನೆ. ಆರ್ಥಿಕ ಶಿಸ್ತಿನ ವ್ಯಾಪ್ತಿಯಲ್ಲೇ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ತಿಳಿಸಿದರು.
ಬ್ಯಾಂಕ್‍ಗಳೊಂದಿಗೆ ಚರ್ಚೆ
ವಾಣಿಜ್ಯ ಬ್ಯಾಂಕ್ ಅಧಿಕಾರಿಗಳು, ಸಹಕಾರಿ ಬ್ಯಾಂಕ್‍ನ ಅಧಿಕಾರಿಗಳು, ಆರ್ಥಿಕ ಇಲಾಖೆಯ ಅಧಿಕಾರಿಗ ಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವದಾಗಿ ಸಿಎಂ ತಿಳಿಸಿದರು. ಈಗಾಗಲೇ ಕೆಲವು ರಾಜ್ಯಗಳು ಸಾಲ ಮನ್ನಾ ಮಾಡಿದ್ದು, ಆ ಬಗ್ಗೆಯೂ ಮಾಹಿತಿ ತೆಗೆದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ರೈತರು ಸಲಹೆ ನೀಡಬೇಕು, ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವದಾಗಿ ಸಿಎಂ ತಿಳಿಸಿದರು.
‘ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ನಡೆಯುತ್ತೇವೆ, ಹಿಂದೆ ಸರಿಯುವ ಮಾತಿಲ್ಲ. ಡಿಸಿಎಂ ಪರಮೇಶ್ವರ ಮತ್ತು ನಾನು ಇಬ್ಬರೂ ಈ ಕುರಿತು ಚರ್ಚಿಸಿದ್ದೇವೆ’ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
‘ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲ ಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬದು ಸರಿಯಲ್ಲ. ಖಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಯಶಸ್ವಿನಿ ಯೋಜನೆ ಮುಂದು ವರಿಸಲು ಸರಕಾರ ನಿರ್ಧರಿಸಿದೆ. ಮೇ.31ರಂದು ಅಂತ್ಯವಾಗಲಿದ್ದ ಯೋಜನೆಯನ್ನು ಮುಂದು ವರಿಸಲಾ ಗುವದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಸಂಪುಟ ಸಭೆ
“ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಪಡೆದು ಸಾಲಮನ್ನಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತೇನೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇನೆ. ನಂತರ ಅಂತಿಮ ಆದೇಶ ಪ್ರಕಟಿಸಲಾಗುತ್ತದೆ’ ಎಂದು ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ, ವಿಪಕ್ಷ ನಾಯಕ ಯಡಿಯೂರಪ್ಪರ ಬದಲಾಗಿ ಗೋವಿಂದ ಕಾರಜೋಳ ಹಾಗೂ ರೈತ ಮುಖಂಡರು, ವಿಪಕ್ಷ ನಾಯಕರು ಮತ್ತು ರಾಜ್ಯ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಭಾಗಿಯಾಗಿದ್ದರು.
ಕಾಂಗ್ರೆಸ್‍ವಿರೋಧವಿಲ್ಲ: ಪರಮೇಶ್ವರ್
ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಪಕ್ಷದ ವಿರೋಧವಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಲಮನ್ನಾ ಕುರಿತ ಪ್ರಮುಖ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್‍ಗೆ ಬಹುಮತ ಬಂದಿದ್ದರೆ ಕುಮಾರಸ್ವಾಮಿ ಈ ಹೊತ್ತಿಗೆ ಸಾಲಮನ್ನಾ ಮಾಡಿರುತ್ತಿ ದ್ದರು, ಆದರೆ ಸಮ್ಮಿಶ್ರ ಸರ್ಕಾರವಾದ್ದರಿಂದ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ನುಡಿದರು.
ರೈತರೊಂದಿಗಿನ ಸಭೆಯಲ್ಲೂ ಈ ವಿಷಯ ಮಾತನಾಡಿದ ಪರಮೇಶ್ವರ್ ಅವರು, ಮನೆ, ವಾಹನಕ್ಕೆ ಮಾಡಿದ ಸಾಲಗಳನ್ನು ಮನ್ನಾ ಮಾಡುವದು ಹೇಗೆ. 500 ಎಕರೆ ಜಮೀನು ಹೊಂದಿರುವ ರೈತನದ್ದೂ ಸಾಲ ಮನ್ನಾ ಮಾಡು ಅಂದ್ರೆ ಹೇಗೆ? ಎಂದು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಅವರು ಮಾಡಿದರು. ರೈತರ ಸಾಲಮನ್ನಾ ಅಧ್ಯಯನಕ್ಕೆ ಸಮಿತಿ ರಚನೆ ಮಾಡುವ ಅವಶ್ಯಕತೆ ಇದೆ. ಒಂದೇ ಬಾರಿ ಮಾಡುವದೋ, ಹಂತಹಂತವಾಗಿ ಮಾಡುವದೋ ಎಂದು ಅಧ್ಯಯನ ಮಾಡಬೇಕು. ಯಾರಿಗೂ ಈ ಬಗ್ಗೆ ಅನುಮಾನ ಬೇಡ. ಖಂಡಿತ ಮನ್ನಾ ಆಗುತ್ತದೆ ಎಂದು ಭರವಸೆ ನೀಡಿದರು.
ರೈತರ ಬೆಳೆ ಸಾಲ ಮನ್ನಾ ಮಾಡೋದು ಸರಿ. ಆದರೆ ಮದುವೆಗೆ, ವಾಹನಕ್ಕೆ ಸಾಲ ಮಾಡಿದ್ದರೆ ಏನು ಮಾಡುವದು? 500 ಎಕರೆ ಭೂಮಿ ಇರುವ ರೈತರ ಸಾಲ ಮನ್ನಾ ಮಾಡುವದು ಹೇಗೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಗೊಂದಲ
ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೆಲವು ರೈತರು ಕಿಡಿ ಕಾರಿದರು. ‘ಸಾಲಮನ್ನಾ ಮಾಡುವದಾಗಿ ಹೇಳಿ ನಮ್ಮಿಂದ ಚಂದಾವಸೂಲಿ ಮಾಡಿದ್ದಾರೆ ಎಂದು ಕೆಲವು ರೈತರು ಆರೋಪಿಸಿದರು. ‘ನಮ್ಮ ಹಣವನ್ನು ವಾಪಸ್ ಕೊಡಿಸಿ’ ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
“ನಿಮಗೆ ಸಂಪೂರ್ಣ ಬಹುಮತ ಬಾರದೆ ಇರಬಹುದು. ಆದರೆ, ನೀವು ಮುಖ್ಯಮಂತ್ರಿ ಗಳಾಗಿದ್ದೀರಿ. ಕಾರಣವನ್ನು ಹೇಳದೆ ರೈತರ ಸಾಲವನ್ನು ಮನ್ನಾ ಮಾಡಿ ರೈತರ ನೆರವಿಗೆ ಬನ್ನಿ’ ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್ ಮುಖ್ಯ ಮಂತ್ರಿಯವರನ್ನು ಒತ್ತಾಯಿಸಿದರು. ಸಾಲಮನ್ನಾ ಬಗ್ಗೆ ಚರ್ಚೆ ನಡೆಸುವಾಗ ಗದ್ದಲ ಉಂಟಾಯಿತು. ಇದರಿಂದ ಅಸಮಾಧಾನಗೊಂಡ ಹೆಚ್.ಡಿ. ಕುಮಾರಸ್ವಾಮಿ, ‘ಗದ್ದಲ ಮಾಡುವದಾದರೆ ಕಬ್ಬನ್ ಪಾರ್ಕ್‍ಗೆ ಹೋಗಿ. ಇಲ್ಲಿ ಶಾಂತಿಯುತವಾಗಿ ಚರ್ಚೆ ನಡೆಸಿ, ನಿಮ್ಮ ಸಲಹೆ ಕೊಡಿ’ ಎಂದು ಹೇಳಿದರು.
ಗೋವಿಂದ ಕಾರಜೋಳ ಆಗ್ರಹ
ಬಿ.ಎಸ್.ಯಡಿಯೂರಪ್ಪ ಅವರು ಮಂಗಳೂರಿಗೆ ಭೇಟಿ ನೀಡಿದ್ದರಿಂದ ನಾನು ಸಭೆಗೆ ಬಂದಿದ್ದೇನೆ. ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು’ ಎಂದು ಬಿಜೆಪಿ ಪ್ರಮುಖ ಶಾಸಕ ಗೋವಿಂದ ಕಾರಜೋಳ ಅವರು ಹೇಳಿದರು. ಕೆಲವು ರೈತರು ನೀರಾವರಿ ಯೋಜನೆಗಳ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು ನೀರಾವರಿ ಯೋಜನೆ ಕುರಿತು ಚರ್ಚೆ ನಡೆಸಲು ಮತ್ತೊಂದು ಸಭೆ ನಡೆಸಲಾಗುತ್ತದೆ. ಸಾಲಮನ್ನಾ ಬಗ್ಗೆ ಮಾತನಾಡಿ ತಿಂಗಳಿನಲ್ಲಿ ಒಂದು ದಿನ ರೈತರ ಜೊತೆ ಇನ್ನು ಮುಂದೆ ಸಭೆ ನಡೆಸುತ್ತೇನೆ ಎಂದು ರೈತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಿದರು.
ಸಭೆಯಲ್ಲಿ ರೈತ ಮುಖಂಡರಿಂದ ಕೇಳಿ ಬಂದ ಸಲಹೆಗಳಿವು: ರೈತರ ಆತ್ಮಹತ್ಯೆಯನ್ನು ತಡೆಯಬೇಕು. ಬೆಳೆಗಳಿಗೆ ಬೆಲೆ ಕುಸಿದಾಗ ರೈತರ ನೆರವಿಗೆ ಸರ್ಕಾರ ಬರಬೇಕು ಅಂತಹ ನೀತಿ ಜಾರಿಗೆ ತರಬೇಕು . ರೈತರು ಬೆಳೆದ ಬೆಳೆಗಳನ್ನು ಸರ್ಕಾರ ಖರೀದಿ ಮಾಡಬೇಕು. ಸಾಲ ಆಗದಂತೆ ತಡೆಯಲು ಹೊಸ ನೀತಿಯನ್ನು ರೂಪಿಸಬೇಕು. ಸಂಪೂರ್ಣವಾಗಿ ರೈತರ ಸಾಲವನ್ನು ಒಂದು ಹಂತದಲ್ಲಿಯೇ ಮನ್ನಾ ಮಾಡಿ. ಹಂತ-ಹಂತವಾಗಿ ಸಾಲ ಮನ್ನಾ ಮಾಡುವ ಪ್ರಸ್ತಾವನೆ ಬೇಡ. ಸಾಲಮನ್ನಾ ಕುರಿತು ಸಂಸತ್‍ನಲ್ಲಿ ಖಾಸಗಿ ಬಿಲ್ ಮಂಡನೆ ಮಾಡಲಿ. ಕೇಂದ್ರಕ್ಕೆ ರೈತರ ನಿಯೋಗ ತೆಗೆದುಕೊಂಡು ಹೋಗಿ ಈ ಬಗ್ಗೆ ಒತ್ತಡ ಹಾಕೋಣ .ಚಿನ್ನವನ್ನು ಅಡವಿಟ್ಟು ಸಾಲ ಮಾಡಿದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಿ. ಒಂದೇ ಬಾರಿಗೆ ರೈತರನ್ನು ಋಣ ಮುಕ್ತರನ್ನಾಗಿ ಮಾಡಿ ಎಂಬದು ವಿವಿಧ ಮುಖಂಡರಿಂದ ಕೇಳಿ ಬಂದ ಸಲಹೆಗಳು.
ಬಿಎಸ್‍ವೈ ಕಿಡಿ
ಕುಮಾರಸ್ವಾಮಿ ಅವರು ಬಜೆಟ್ ನಲ್ಲ್ಲಿ ಘೋಷಿಸಿರುವಂತೆ 53 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಬೇಕು. ಕೊಟ್ಟ ಮಾತು ತಪ್ಪಿದಲ್ಲಿ ಹೋರಾಟ ನಡೆಸಲು ರೂಪು ರೇಷೆ ಸಿದ್ದಪಡಿಸುವದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸುದ್ದಿಗಾರರ ರೊಂದಿಗೆ ಗುಡುಗಿದರು.