ಸೋಮವಾರಪೇಟೆ,ಜೂ.1: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮನೆಗಳು ಹಾಗೂ ಹೊಟೇಲ್‍ಗಳಿಗೆ ದಿನನಿತ್ಯ ನೀರು ಸರಬರಾಜಾಗುವ ಪ್ರಮುಖ ಪೈಪ್‍ಲೈನ್ ಒಡೆದು ಹಲವಷ್ಟು ದಿನಗಳು ಕಳೆದರೂ ಸಂಬಂಧಿಸಿದ ಪ.ಪಂ. ಇತ್ತ ಗಮನ ಹರಿಸದೇ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದುದ್ದುಗಲ್ಲು ಹೊಳೆಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಪ್ರಮುಖ ಪೈಪ್‍ಲೈನ್ ಇಲ್ಲಿನ ಮೆಟ್ರಿಕ್‍ಪೂರ್ವ ಬಾಲಕರ ವಸತಿ ನಿಲಯದ ಮುಂಭಾಗ ಒಡೆದುಹೋಗಿದ್ದು, ದಿನನಿತ್ಯ ಯಥೇಚ್ಛವಾಗಿ ನೀರು ಪೋಲಾಗುತ್ತಿದೆ.
ದುದ್ದುಗಲ್ಲು ಪಂಪ್‍ಹೌಸ್‍ನಿಂದ ಪಟ್ಟಣದ ನೀರು ಸಂಗ್ರಹಾಗಾರಕ್ಕೆ ಅಳವಡಿಸಿರುವ ಪೈಪ್ ಕಳೆದ 15 ದಿನಗಳ ಹಿಂದೆಯೇ ಒಡೆದುಹೋಗಿದ್ದು, ಹೊಳೆಯಿಂದ ಮೋಟಾರ್ ಮೂಲಕ ಮೇಲಕ್ಕೆತ್ತುವ ನೀರು ಈ ಭಾಗದಲ್ಲಿ ರಸ್ತೆಯ ಮೇಲೆಯೇ ಹರಿಯುತ್ತಿದೆ. ಪೊಲೀಸ್ ವೃತ್ತನಿರೀಕ್ಷಕರ ಕಚೇರಿ, ಸಂತ ಜೋಸೆಫರ ಕಾಲೇಜು, ನಗರೂರು ಅಂಗನವಾಡಿಗಳ ಎದುರು ದಿನಂಪ್ರತಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ತಕ್ಷಣ ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.