ಕುಶಾಲನಗರ, ಜೂ. 1: ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಮೋಟಾರ್ ಬೋಟ್ಗಳ ಸಂಚಾರಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದ ಹಿನ್ನೆಲೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಶುಕ್ರವಾರ ಗೊಂದಲದ ವಾತಾವರಣ ಸೃಷ್ಠಿಯಾಯಿತು. ದುಬಾರೆ ಸಾಕಾನೆ ಶಿಬಿರಕ್ಕೆ ನದಿ ಮೂಲಕ ತೆರಳಲು ಬೋಟ್ಗಳನ್ನು ಬಳಸಲಾಗುತ್ತಿದ್ದು ಕಳೆದ ಹಲವು ವರ್ಷಗಳಿಂದ ಒಟ್ಟು 5 ಬೋಟ್ಗಳು ಕಾರ್ಯಾಚರಣೆ ನಡೆಸುತ್ತಿದ್ದವು.
ಇವುಗಳಲ್ಲಿ ದುಬಾರೆ ಗ್ರಾಮ ಅರಣ್ಯ ಸಮಿತಿ ವತಿಯಿಂದ ಎರಡು ಮೋಟಾರ್ ಬೋಟ್ಗಳು ಸಂಚರಿಸುತ್ತಿದ್ದು, ಉಳಿದಂತೆ ಖಾಸಗಿ ಸಂಸ್ಥೆಗಳು ಪ್ರವಾಸಿಗರನ್ನು ಕೊಂಡೊಯ್ಯುವ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಈ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳು ದಾಖಲೆ ರಹಿತವಾಗಿ ಬೋಟ್ಗಳನ್ನು ಓಡಿಸುತ್ತಿದ್ದ ಕಾರಣ ಅರಣ್ಯ ಇಲಾಖೆ ಬೋಟ್ಗಳನ್ನು ವಶಪಡಿಸಿಕೊಳ್ಳಲು ಸೂಚನೆ ನೀಡಿದ ಮೇರೆಗೆ ಕೇವಲ ಎರಡು ಬೋಟ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ನಿಯಮಾನುಸಾರ ನದಿ ಪ್ರದೇಶ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತಿದ್ದು, ಬೋಟ್ಗಳ ಸಂಚಾರಕ್ಕೆ ನಿಯಮಾನುಸಾರ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪತ್ರಪಡೆಯಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ತಿಳಿಸಿದ್ದಾರೆ.
ಪ್ರವಾಸಿಗರಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಗ್ರಾಮ ಅರಣ್ಯ ಸಮಿತಿಗೆ ಸೇರಿದ ಮೋಟಾರ್ ಬೋಟ್ಗಳು ಕೆಲಸ ನಿರ್ವಹಿಸುತ್ತಿವೆ ಎಂದಿದ್ದಾರೆ. ತಾವುಗಳು ಕಳೆದ ಹಲವು ವರ್ಷಗಳಿಂದ ಸಾಕಾನೆ ಶಿಬಿರಕ್ಕೆ ಬೋಟ್ಗಳ ಮೂಲಕ ಪ್ರವಾಸಿಗರನ್ನು ಒಯ್ಯುತ್ತಿದ್ದು ಈ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯೊಡ್ಡಿರುವದು ಸರಿಯಲ್ಲ ಎಂದು ಮೋಟಾರ್ ಬೋಟ್ ಮಾಲೀಕ ಕೆ.ಎಸ್.ರತೀಶ್ ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಅಳಲು ತೋಡಿಕೊಂಡಿದ್ದಾರೆ.