ಗೋಣಿಕೊಪ್ಪಲು, ಜೂ.1 : ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕ ರೊಂದಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭೇಟಿ ಮಾಡುವದರ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ನ್ಯಾಯ ಒದಗಿಸಿ ಕೊಡುವಂತೆ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಪೌರಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯ ಮುಂದೆ ಬಿಚ್ಚಿಟ್ಟರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರದ ಸುತ್ತೋಲೆ ಯಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಕಳೆದ ಐದು ತಿಂಗಳಿನಿಂದ ವೇತನವಿಲ್ಲದೆ ಸೇವೆ ನೀಡುತ್ತಿರುವದು ಇದೀಗ ತಿಳಿದುಬಂದಿದೆ. ದುಡಿದ ಕೈಗಳಿಗೆ ವೇತನ ನೀಡುವದು ಕರ್ತವ್ಯವಾಗಿದೆ. ಈ ಬಗ್ಗೆ ರಾಜ್ಯ ಪೌರಾಡಳಿತದ ಆಯುಕ್ತರೊಂದಿಗೆ ವಿಶೇಷವಾಗಿ ಪತ್ರವ್ಯವಹಾರ ಮಾಡುವ ಮೂಲಕ ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವದಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಭರವಸೆ ನೀಡಿದರು.
ಭೇಟಿಯ ವೇಳೆ ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಸ್.ಎಚ್. ಮತೀನ್, ವೀರಾಜಪೇಟೆ ನಗರಾಧ್ಯಕ್ಷ ಮಂಜುನಾಥ್, ಯುವ ಜನತಾದಳ ಅಧ್ಯಕ್ಷ ಅಮ್ಮಂಡ ವಿವೇಕ್, ಮುಖಂಡ ರೆನ್ನಿ, ಪೌರ ಕಾರ್ಮಿಕರಾದ ನವೀನ್‍ಕುಮಾರ್, ಚೆಲುವರಾಜು, ಪೊನ್ನಮ್ಮ, ವಿಜಯಲಕ್ಷ್ಮಿ, ಸರಸ್ವತಿ, ಶಾಂತಿ, ಗೌರಿ, ಕವಿತಾ, ತೇಜಾವತಿ ಹಾಗೂ ರಾಜಮ್ಮ ಮತ್ತಿತ್ತರು ಹಾಜರಿದ್ದರು.