ಮಡಿಕೇರಿ, ಜೂ.1 : ನಗರದಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಪೈಪ್‍ಗಳನ್ನು ಅಳವಡಿಸಲಾಗಿದ್ದು, ಅಗೆದು ಹಾಕಿರುವ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಡಾಮರೀಕರಣ ಮಾಡದೆ ಇರುವದರಿಂದ ವಾಹನಗಳ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವೀರನಾಡು ರಕ್ಷಣಾ ವೇದಿಕೆ ಶೀಘ್ರ ಡಾಮರೀಕರಣ ಕಾರ್ಯವನ್ನು ಪೂರ್ಣಗೊಳಿಸದಿದ್ದಲ್ಲಿ ನಗರಸಭೆ ಎದುರು ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಹಾಗೂ ಪ್ರಮುಖರು ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಗೌಳಿಬೀದಿ ಸೇರಿದಂತೆ ಇತರ ಪ್ರದೇಶಗಳಲ್ಲಿ ವಾಹನಗಳನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಡಾಮರೀಕರಣ ಹಾಗೂ ತೇಪೆ ಕಾರ್ಯ ನಡೆದಿರುವ ರಸ್ತೆಗಳು ಇತ್ತೀಚೆಗೆ ಸುರಿದ ಒಂದೆರಡು ಮಳೆಗೆ ಕೊಚ್ಚಿ ಹೋಗಿವೆ. ಸಧ್ಯದಲ್ಲಿಯೇ ಮಳೆಗಾಲ ಆರಂಭವಾಗಲಿದ್ದು, ನಿರಂತರ ಮಳೆಯಾದಲ್ಲಿ ರಸ್ತೆ ಗುಂಡಿಗಳು ಮತ್ತಷ್ಟು ಹದಗೆಟ್ಟು ನೀರು ನಿಲ್ಲುವದರಿಂದ ನಗರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಸಾಕಷ್ಟು ಅಡೆತಡೆಗಳ ನಡುವೆ ಶಾಲೆಗಳಿಗೆ ತೆರಳುತ್ತಿದ್ದಾರೆ ಎಂದು ವಿವರಿಸಿದರು.

ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮುಸ್ತಫ, ನಗರಾಧ್ಯಕ್ಷ ಪ್ರವೀಣ್ ಕರ್ಕೆರ, ಕಾರ್ಯದರ್ಶಿ ಪ್ರವೀಣ್, ಮಹಿಳಾ ಘಟಕದ ನಗರಾಧ್ಯಕ್ಷೆ ಹರಿಣಿ, ಪ್ರಮುಖರಾದ ಮಮತ, ಎಂ.ಟಿ.ನಾಣಯ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.