ವೀರಾಜಪೇಟೆ, ಜೂ. 1: ರಾಜ್ಯಪಾಲರ ಆದೇಶದ ಮೇರೆಗೆ ಸರಕಾರ ರಚನೆಗೆ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನ ನೀಡಿದ ಸಂದರ್ಭ ಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿ ಕರಾಳ ದಿನವನ್ನು ಆಚರಿಸಿದ್ದು, ಈ ಪಕ್ಷಕ್ಕೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎನ್ನುವದು ಗೊತ್ತಾಗುತ್ತದೆ ಎಂದು ವೀರಾಜಪೇಟೆ ಕಾಂಗ್ರೆಸ್ ವಕ್ತಾರ ಡಿ.ಪಿ. ರಾಜೇಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇರುವದರಿಂದ ಕಾಂಗ್ರೆಸ್ ಪಕ್ಷ ಉತ್ತಮ ಆಡಳಿತ ನೀಡುವ ಪಕ್ಷದೊಡನೆ ಮೈತ್ರಿ ಮಾಡಿಕೊಂಡಿದೆ. ವಾಮಮಾರ್ಗದಲ್ಲಿ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸಿದ ಬಿಜೆಪಿ ಪಕ್ಷಕ್ಕೆ ಸುಪ್ರೀಂ ಕೋರ್ಟ್‍ನ ಚಾಟಿ ಹೊಡೆತ ಬಿದ್ದಿದ್ದರಿಂದ ಮೈತ್ರಿ ಸರಕಾರದ ಜನಪ್ರತಿನಿಧಿಗಳಿಗೆ ನ್ಯಾಯ ದೊರೆಯಿತು. ಸುಪ್ರೀಂ ಕೋರ್ಟ್‍ನ ಆದೇಶ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ ಸಂವಿಧಾನವನ್ನು ಗೌರವಿಸಲು ಕಾರಣವಾಯಿತು. ಬಿ.ಜೆ.ಪಿ ಪಕ್ಷ ಜಮ್ಮು-ಕಾಶ್ಮೀರ, ಮಣಿಪುರ, ಗೋವಾ, ಮಿಜೋರಾಂಗಳಲ್ಲಿ ವಾಮಮಾರ್ಗವನ್ನು ಅನುಸರಿಸಿ ಮಾಡಿಕೊಂಡಿರುವ ಮೈತ್ರಿ ಪವಿತ್ರವಾಗಿದೆಯೇ? ದಿನದಿಂದ ದಿನಕ್ಕೆ ರಾಷ್ಟ್ರದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ತೈಲೋತ್ಪನ್ನಗಳ ಬೆಲೆ ಗಗನಕ್ಕೇರುವದರ ಬಗ್ಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಗೋಷ್ಠಿಯಲ್ಲಿ ಮಹಮದ್ ರಾಫಿ, ಸಿ.ಕೆ. ಪ್ರಥ್ವಿನಾಥ್ ಇದ್ದರು.