ಮಡಿಕೇರಿ, ಜೂ. 1: ಮೈಸೂರು ಶಿವರಾಮಪೇಟೆಯಲ್ಲಿರುವ ಸದಾನಂದ ಹಿಟ್ಟಿನ ಗಿರಣಿ ಮಾಲೀಕ ಹೆಚ್.ಎಸಿ.ಎನ್. ಒಡೆಯರ್, ಮಡಿಕೇರಿ ಕೋಟೆಯು (ಅರಮನೆ) ತನ್ನದೆಂದು ಅನೇಕ ವರ್ಷಗಳಿಂದ ವ್ಯಾಜ್ಯ ಹೂಡಿದ್ದು, ಇಂದು ಇಲ್ಲಿಗೆ ಬಂದು ಕೋಟೆ ಆವರಣದಲ್ಲಿ ಸಂಜೆಗತ್ತಲೆ ನಡುವೆ ವಾಸ್ತವ್ಯ ಹೂಡಿದ್ದಾರೆ.

ಮಡಿಕೇರಿ ಕೋಟೆಯು ತನ್ನ ಮುತ್ತಜ್ಜನಿಗೆ ಸೇರಿದ್ದೆಂದು ಹೇಳಿಕೊಂಡ ಈ ವ್ಯಕ್ತಿ ತನ್ನ ಮುತ್ತಜ್ಜ ಪದ್ಮಗೌಡರೆಂದು, ಇವರ ಮಗ ಮಲ್ಲಪ್ಪ ಎಂದು, ಮಲ್ಲಪ್ಪ ಮಗ ಮಲ್ಲಣ್ಣ ಹಾಗೂ ಅವರ ಮಗ ಚಿನ್ನಣ್ಣ ಎಂಬದಾಗಿ ವಿವರಿಸಿದರು. ಅದೇ ಚಿನ್ನಣ್ಣ ಹಾಗೂ ತಿಪಟೂರು ಮೂಲದ ಗೌರಮ್ಮ ದಂಪತಿ ಮಗ ತಾನೆಂದು ವಿವರಿಸಿದರು.

ಹಾಲೇರಿ ಸಂತಾನದ ತನ್ನ ಹಿರಿಯರಿಗೆ ಈ ಕೋಟೆ ಸೇರಿದ್ದೆನ್ನುವ ನಾಗರಾಜ್ (76) ತನ್ನ ಪತ್ನಿ ಹಾಗೂ ಮೂವರು ಪುತ್ರರೊಂದಿಗೆ ಮೈಸೂರಿನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಾ, ಕೋಟೆ ಹಕ್ಕಿಗಾಗಿ ಹೋರಾಡುವದಾಗಿ ಸಮರ್ಥಿಸಿಕೊಂಡರು. ಹಿಂದೊಮ್ಮೆ ಈ ವ್ಯಕ್ತಿ ಕೋಟೆ ದ್ವಾರಕ್ಕೆ ಬೀಗ ಜಡಿದು ಸುದ್ದಿ ಮಾಡಿದ್ದರು.