ನಾಪೋಕ್ಲು, ಜೂ. 1: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಇವರು ತೀರ್ಥ ಸ್ನಾನ ಮಾಡಿದರು. ಕೇಶಮುಂಡನ ಮಾಡಿಸಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದರಲ್ಲೇನು ವಿಶೇಷ ಅಂದುಕೊಂಡಿರಾ? ಶಾಸಕ ಕೆ.ಜಿ.ಬೋಪಯ್ಯ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಗೆದ್ದಿರುವದಕ್ಕಾಗಿ ಹರಕೆ ಸಲ್ಲಿಸಿದ ಪರಿ ಇದು.

ಪಾರಾಣೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಕಂಡ ಬಾಣೆ ನಿವಾಸಿ, ಕೂಲಿ ಕಾರ್ಮಿಕ ಮಣಿಕಂಠ ಕೆ.ಎಂ. ಶಾಸಕ ಕೆ.ಜಿ.ಬೋಪಯ್ಯ, ಮತ್ತು ಬಿಜೆಪಿಯ ಪಕ್ಕಾ ಅಭಿಮಾನಿ. ಈಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಅವರ ಗೆಲುವಿಗಾಗಿ ಹರಕೆ ಸಲ್ಲಿಸಿದ್ದ ಇವರು ಶುಕ್ರವಾರ ಭಾಗಮಂಡಲಕ್ಕೆ ತೆರಳಿ ತಮ್ಮ ಹರಕೆಯನ್ನು ಸಲ್ಲಿಸಿಬಿಟ್ಟರು. ಭಾಗಮಂಡಲದ ಭಗಂಡೇಶ್ವರ ಕ್ಷೇತ್ರದಲ್ಲಿ ಕೇಶಮುಂಡನ ಮಾಡಿಸಿಕೊಂಡ ಮಣಿಕಂಠ ಪೂಜೆ ಸಲ್ಲಿಸಿದ ಬಳಿಕ ತಲಕಾವೇರಿಗೆ ತೆರಳಿ ಅಲ್ಲಿಯೂ ವಿಶೇಷ ಪೂಜೆ ನೆರವೇರಿಸಿ ಬೋಪಯ್ಯ ಅವರ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸಿದರು. ಐದು ವರ್ಷಗಳ ಹಿಂದೆಯೂ ಇದೇ ರೀತಿ ಹರಕೆ ಸಲ್ಲಿಸಿದ್ದ ಮಣಿಕಂಠ ಈ ವರ್ಷವೂ ಪಕ್ಷ ನಿಷ್ಠೆ ಪ್ರದರ್ಶಿಸಿದರು. ಮಣಿಕಂಠ ಅವರ ಜೊತೆಯಲ್ಲಿ ಬಿಜೆಪಿ ಅಭಿಮಾನಿಗಳಾದ ಪುಟ್ಟಣಿ, ಆನಂದ, ದೊರೆ, ಲೀಲಾಧರ, ಮಣಿ, ಮುತ್ತಪ್ಪ, ರಾಮಣ್ಣ ಇದ್ದರು.

-ದುಗ್ಗಳ ಸದಾನಂದ