ವೀರಾಜಪೇಟೆ, ಜೂ.1 : ವಿಶ್ವ ಪರಿಸರ ದಿನಾಚರಣೆಯನ್ನು ತಾ. 5ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಗುವದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ. ಹೇಮ್ಕುಮಾರ್ ತಿಳಿಸಿದ್ದಾರೆ.
ವಿಶ್ವ ರಾಷ್ಟ್ರಗಳ ಒಕ್ಕೂಟದ ನಿರ್ಧಾರದಂತೆ ಜಾಗತಿಕ ಮಟ್ಟದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲು ಈ ಬಾರಿ ಭಾರತ ಸರಕಾರದ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವೀರಾಜಪೇಟೆಯಲ್ಲಿ ತಾ.5ರಂದು ಬೆಳಿಗ್ಗೆ ಇಲ್ಲಿನ ಮಿನಿ ವಿಧಾನ ಸೌಧದ ಸುತ್ತ ಮುತ್ತಲು ಗಿಡ ನೆಡುವ ಕಾರ್ಯಕ್ರಮ, ನಂತರ ಇಲ್ಲಿನ ಮುಖ್ಯಬೀದಿಯಿಂದ ಸುಣ್ಣದ ಬೀದಿ, ಗೋಣಿಕೊಪ್ಪಲು ರಸ್ತೆ, ತೆಲುಗರ ಬೀದಿಯಿಂದ ಮಾರಿಯಮ್ಮ ದೇವಾಲಯದವರೆಗೆ ಶುಚಿತ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ತರುವಾಯ ಮಾರಿಯಮ್ಮ ದೇವಾಲಯದಿಂದ ತಾಲೂಕು ಮೈದಾನದವರೆಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾವನ್ನು ಏರ್ಪಡಿಸಲಾಗಿದೆ ಎಂದು ಹೇಮ್ಕುಮಾರ್ ತಿಳಿಸಿದರು.