ಮಡಿಕೇರಿ, ಜೂ.1: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಚೂರಿಯಾಲ್‍ನಲ್ಲಿರುವ ಭದ್ರಕಾಳಿ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 4 ರಂದು ನಡೆಯಲಿದೆ, ಸುಮಾರು 300 ವರ್ಷಗಳ ಇತಿಹಾಸವಿರುವ ದೇವಸ್ಥಾನವು ಪಾಳುಬಿದ್ದ ನಂತರ 2015ರಲ್ಲಿ ಬೈತೂರಿನ ಶ್ರೀಕುಬೇರನ್ ನಂಬೂದರಿಪಾಡ್ ತಂತ್ರಿ ಅವರಿಂದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಳಶೋತ್ಸವ ಕಾರ್ಯ ನಡೆದು ಜೀರ್ಣೋದ್ಧಾರಗೊಂಡಿದೆ. ಇದೀಗ ನಿತ್ಯಪೂಜಾ ಕೈಂಕರ್ಯಗಳು ನಡೆದುಕೊಂಡು ಬರುತ್ತಿದ್ದು, ಈ ದೇವಾಲಯದ ವಾರ್ಷಿಕ ಹಬ್ಬವು, ತಾ. 4ರಂದು ಮುಂಜಾನೆ ಬೈತೂರಿನ ಶ್ರೀ ಕುಬೇರನ್ ನಂಬೂದರಿಪಾಡ್ ತಂತ್ರಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಹಾಪೂಜೆಯ ನಂತರ ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಪರವಾಗಿ ನಾಟೋಳಂಡ ಹರೀಶ್ ಪರಮೇಶ್ವರ್ ತಿಳಿಸಿದ್ದಾರೆ.