ಶನಿವಾರಸಂತೆ, ಜೂ. 11: ಶನಿವಾರಸಂತೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಹೈಮಾಸ್ಕ್ ದೀಪ ಒಂದು ತಿಂಗಳಿನಿಂದ ರಾತ್ರಿ ಬೆಳಕು ನೀಡುತ್ತಿಲ್ಲ. ಅದರ ನಾಲ್ಕು ದೀಪಗಳೂ ಕೆಟ್ಟಿವೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ನಾಲ್ಕು ರಸ್ತೆಗಳು ಸೇರುವ ಸ್ಥಳವೂ ಆಗಿದ್ದು, ತಾತ್ಕಾಲಿಕ ಬಸ್ ನಿಲ್ದಾಣವೆನಿಸಿದೆ. ಬಾಡಿಗೆ ವಾಹನ ಹಾಗೂ ಆಟೋ ನಿಲ್ದಾಣವೆನಿಸಿದೆ. ಈ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳು, ಹೊಟೇಲ್, ಕ್ಯಾಂಟೀನ್‍ಗಳು ಅಧಿಕ ಸಂಖ್ಯೆಯಲ್ಲಿವೆ. ವೃತ್ತ ಸದಾ ಪ್ರಯಾಣಿಕರಿಂದ ಜಂಗುಳಿಯಿಂದ ಕೂಡಿರುತ್ತದೆ. ರಾತ್ರಿ ಸಮಯ ಕಾರ್ಗತ್ತಲು, ಸುರಿಯುವ ಮಳೆ ಬೇರೆ. ಬಸ್‍ನಿಂದ ಇಳಿದ ಪ್ರಯಾಣಿಕರು, ಅಂಗಡಿಗೆ ಬರುವ ಗ್ರಾಹಕರು, ಭಯದಿಂದ ಪರದಾಡುವ ಸ್ಥಿತಿ ಬಂದಾಗಿದೆ. ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಹಾಗೂ ಅಧಿಕಾರಿಗಳು ಪ್ರತಿದಿನ ಈ ವೃತ್ತಕ್ಕಾಗಿಯೇ ತಿರುಗಾಡುತ್ತಾರೆ. ಇನ್ನಾದರೂ ಹೈಮಾಸ್ಕ್ ದೀಪವನ್ನು ದುರಸ್ತಿಪಡಿಸಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.