ಮಡಿಕೇರಿ, ಜೂ. 11: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೂರು ಬೇರೆಬೆಳ್ಳಚ್ಚು, ದೇವಸ್ತೂರು, ಹಚ್ಚಿನಾಡು ಮುಂತಾದ ಗ್ರಾಮೀಣ ವಿದ್ಯಾರ್ಥಿಗಳ ಸಹಿತ, ಸಾರ್ವಜನಿಕರು ನಿತ್ಯ ಮಡಿಕೇರಿಗೆ ಬಂದು ಹೋಗಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ತೊಂದರೆಪಡುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ಇಂದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಹೆಚ್ಚುವರಿ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಿದರು. ಕಾಲೂಕು-ದೇವಸ್ತೂರು ನಡುವೆ ತೀರಾ ಹದಗೆಟ್ಟಿರುವ ರಸ್ತೆಯಿಂದಾಗಿ ನಿತ್ಯ ಮಾಂದಲಪಟ್ಟಿಗೆ ಬಂದು ಹೋಗುವ ಪ್ರವಾಸಿಗರ ಸಹಿತ ಸಾರ್ವಜನಿಕರು ತೊಂದರೆಯಲ್ಲಿ ಸಿಲುಕಿದ್ದು, ಕೂಡಲೇ ರಸ್ತೆ ಸರಿಪಡಿಸಿ ನಿತ್ಯ ಬಸ್ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ವಿಪರೀತ ಗಾಳಿ - ಮಳೆಯ ನಡುವೆ ಹದಗೆಟ್ಟ ರಸ್ತೆಯಲ್ಲಿ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಮಡಿಕೇರಿಗೆ ಬಂದು ಹೋಗಲು ಅಸಾಧ್ಯವಾಗಿದ್ದು, ಮಾಂದಲಪಟ್ಟಿ ತನಕ ಬಸ್ ವ್ಯವಸ್ಥೆ ಕಲ್ಪಿಸಿದರು. ರಸ್ತೆ ಹಾಳಾಗಿರುವ ಕಾರಣ ಬರುತ್ತಿಲ್ಲವೆಂದು ಗಮನ ಸೆಳೆದರು. ಗ್ರಾಮದ ಹೇಯ ಎ.ಟಿ. ಮಾದಪ್ಪ, ಮಾಜೀ ಹಿರಿಯ ಉಪಪ್ರದಾನ ಪಳಂಗಪ್ಪ ಸೇರಿದಂತೆ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಜಿ.ಪಂ. ಅಧ್ಯಕ್ಷರಿಗೂ ಈ ಬಗ್ಗೆ ಪ್ರತ್ಯೇಕ ಮನವಿ ಸಲ್ಲಿಸಿದರು.