ಗೋಣಿಕೊಪ್ಪ ವರದಿ, ಜೂ. 11: ಹೊರ ದೇಶಗಳಿಗೆ ಜೇನು ನೊಣಗಳನ್ನು ರಫ್ತ್ತು ಮಾಡಲು ಅವಕಾಶ ವಿರುವದರಿಂದ ಕೃಷಿಕರು ಜೇನು ನೊಣಗಳ ಉತ್ಪಾದನೆಗೆ ಮುಂದಾಗ ಬೇಕಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಸಾಜು ಜಾರ್ಜ್ ಸಲಹೆ ನೀಡಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ತೋಟಗಾರಿಕಾ ಸಹಾಯಕ ಅಧಿಕಾರಿಗಳಿಗೆ ಮೂರು ದಿನ ರಾಜ್ಯಮಟ್ಟದ ರಾಣಿ ಜೇನು ನೊಣ ಮತ್ತು ಜೇನು ಕುಟುಂಬಗಳ ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೇನು ನೊಣಗಳು ಸುಮಾರು ಶೇ. 30 ಕ್ಕೂ ಅಧಿಕ ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ತನ್ನ ಕಾಣಿಕೆ ನೀಡುತ್ತಿವೆ. ಈ ನೊಣದ ಪರಾಗಸ್ಪರ್ಶದಿಂದ ಆಹಾರ ಉತ್ಪಾದನೆ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಶ ಸೇರಿದಂತೆ ವಿದೇಶಗಳಲ್ಲೂ ಜೇನು ನೊಣಗಳಿಗೆ ಹೆಚ್ಚು ಬೇಡಿಕೆ ಇದೆ. ಇದರಿಂದಾಗಿ ಜೇನು ನೊಣಗಳ ಉತ್ಪಾದನೆಗೆ ಒತ್ತು ನೀಡಿದರೆ ರಫ್ತು ಮಾಡುವ ಮೂಲಕ ಆದಾಯ ಹೆಚ್ಚಿಸಲು ಅವಕಾಶವಿದೆ ಎಂದರು.

ಅರಣ್ಯ ಮಹಾವಿದ್ಯಾಲಯದ ನೈಸರ್ಗಿಕ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲದ ಪಾರಂಪರಿಕ ಮೌಲ್ಯದಲ್ಲಿ ವಿವಿಧ ಹಣ್ಣುಗಳ ಉತ್ಪಾದನೆಗೆ ಪರಾಗಸ್ಪರ್ಶದ ಕ್ರಿಯೆ ಪ್ರಮುಖ ಪಾತ್ರ ವಹಿಸಿಕೊಂಡಿದೆ. ಆದ್ದರಿಂದ ಆಹಾರ ಉತ್ಪಾದನೆಯ ಮೂಲವಾಗಿರುವ ಜೇನು ನೊಣಗಳ ರಕ್ಷಣೆ ಅಗತ್ಯ ಎಂದರು.

ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಸಿ. ಜಿ. ಕುಶಾಲಪ್ಪ ಮಾತನಾಡಿ, ಜೇನು ಕೃಷಿ ಮೂಲಕ ರೈತರ ಆದಾಯ ಹೆಚ್ಚಿಸುವ ಉದ್ಯೋಗ ಸೃಷ್ಠಿಗೆ ತೋಟಗಾರಿಕಾ ಅಧಿಕಾರಿಗಳು ಮುಂದಾಗ ಬೇಕು. ರೈತರ ಆದಾಯ ಹೆಚ್ಚಿದಷ್ಟು ಜೇನು ನೊಣ ಉತ್ಪಾದನೆಯೊಂದಿಗೆ ಆಹಾರ ಉತ್ಪಾದನೆ ಕೂಡ ಹೆಚ್ಚಾಗಲಿದೆ ಎಂದರು.

ರಾಜ್ಯದ ಬೀದರ್, ಹಾಸನ, ಕೊಪ್ಪಳ, ಧಾರವಾಡ, ಹೊಳೆನರಸಿಪುರ, ಮಂಗಳೂರು, ಪುತ್ತೂರು, ಹುಣಸೂರು, ಚಾಮರಾಜನಗರ, ಗುಂಡ್ಲುಪೇಟೆ, ಚೆನ್ನರಾಯಪಟ್ಟಣ, ಹಾಗೂ ಚಿಕ್ಕ ಮಗಳೂರು ಭಾಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಅರಣ್ಯ ಮಹಾವಿದ್ಯಾಲಯದ ತಜ್ಞರುಗಳಾದ ಡಾ. ಆರ್. ಎನ್. ಕೆಂಚರೆಡ್ಡಿ, ರಮೇಶ್, ಡಾ. ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು. ವಿದ್ಯಾ ಜಗದೀಶ್ ಪ್ರಾರ್ಥಿಸಿದರು.