ವೀರಾಜಪೇಟೆ, ಜೂ. 11: ಮನುಷ್ಯರ ಮಧ್ಯೆ ಭಿನ್ನತೆ ಹಾಗೂ ಸಂಶಯದ ಬೀಜ ಬಿತ್ತುವ ಶಕ್ತಿಗಳಿಗೆ ಸಮಾಜ ತಕ್ಕ ಉತ್ತರ ನೀಡು ವಂತಾಗಬೇಕು. ಯಾವದೇ ಧರ್ಮ ಮನುಷ್ಯರನ್ನು ಕಡೆಗಣಿಸಲು ಕಲಿಸುವದಿಲ್ಲ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಕರಾವಳಿ ವಲಯ ಸಂಚಾಲಕ ಅಕ್ಬರಲಿ ಉಡುಪಿಯವರು ರಮದಾನ್ ಹೇಳಿದರು.

ಖಾಸಗಿ ಬಸ್ ನಿಲ್ದಾಣ ಸಮೀಪದ ಡಿ.ಹೆಚ್.ಎಸ್. ಎನ್‍ಕ್ಲೇವ್‍ನಲ್ಲಿ ವೀರಾಜಪೇಟೆಯ ಮುಸ್ಲಿಮ್ ಒಕ್ಕೂಟ ರಂಜಾನ್ ಪ್ರಯುಕ್ತ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಮದಾನಿನ ಉಪವಾಸ ವ್ರತವು ಮನುಷ್ಯನ ಬದುಕನ್ನು ಸಂಸ್ಕರಿಸುತ್ತದೆ ಮತ್ತು ಮಾತು ಹಾಗೂ ಮನಸ್ಸಿಗೆ ಹತೋಟಿಯನ್ನು ನೀಡುತ್ತದೆ. ಉಪವಾಸದ ಆಚರಣೆಯಿಂದ ಮನುಷ್ಯನ ಮುಂದಿನ ಬದುಕು ಯಶಸ್ವಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮನುಷ್ಯ ಧರ್ಮ ಎಂಬದು ಅತಿಶ್ರೇಷ್ಠ. ಉಪವಾಸದ ಅರ್ಥ ಭಗವಂತನ ಸಾಮೀಪ್ಯ. ಬದುಕನ್ನು ಪ್ರೀತಿಯಿಂದ ಆರಂಭಿಸಿ ಪ್ರೀತಿಯಿಂದಲೇ ಮುಗಿಸಬೇಕು. ಧರ್ಮಗಳೆಲ್ಲವೂ ಬಾಂಧವ್ಯದ ಸಂದೇಶವನ್ನು ಬಿತ್ತರಿಸಿವೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎ. ಪೂವಣ್ಣ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಪಿ.ಕೆ. ಮುಹಮ್ಮದ್ ಹಾಗೂ ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ನಿಸಾರ್ ಅಹಮದ್, ಪಿ.ಕೆ. ಅಬ್ದುಲ್ ರಹಮಾನ್ ವೇದಿಕೆಯಲ್ಲಿದ್ದರು.

ಆರ್.ಕೆ. ಅಹಮದ್ ತಾಹಾ ಖಿರಾಅತ್ ಪಠಿಸಿದರು.