ಮಡಿಕೇರಿ, ಜೂ. 11 : ಸಾಕಷ್ಟು ಸಂದರ್ಭಗಳಲ್ಲಿ ಇಂದಿನ ಕಾಯಿಲೆ ಗಳಿಗೆ ಪರಿಹಾರ ಕಂಡುಕೊಳ್ಳಲಾರದೆ, ಇಂಗ್ಲೀಷ್ ಔಷಧಿಯ ದುಷ್ಪರಿಣಾಮ ಗಳ ಕುರಿತು ಆಡಿಕೊಳ್ಳುವವರಿದ್ದಾರೆ. ಹೀಗಾಗಿ ಭಾರತೀಯ ವೈದ್ಯ ಪದ್ಧತಿ (ಆಯುರ್ವೇದ)ಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಆಯುರ್ವೇದ ದಿಂದ ಅಡ್ಡ ಪರಿಣಾಮಗಳು ಬೀರುವದಿಲ್ಲ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ, ಆ ಕಾರಣಕ್ಕಾಗಿಯೇ ಕೇಂದ್ರ ಸರಕಾರವು ಪ್ರತ್ಯೇಕ ಆಯುಷ್ ಇಲಾಖೆಯೊಂದಿಗೆ ಎಲ್ಲೆಡೆ ಜನತೆಗೆ ಸುಲಭದಲ್ಲಿ ಕೈಗೆಟಕುವಂತೆ ಔಷಧಿಗಳನ್ನು ಬಿಡುಗಡೆಗೊಳಿಸುತ್ತಿದೆ.
ಇನ್ನು ಅನುಭವಿಗಳ ಮಾತಿನ ಪ್ರಕಾರ ಇಂಗ್ಲೀಷ್ ಔಷಧಿಗಳು ಸಾಕಷ್ಟು ಅಡ್ಡ ಪರಿಣಾಮಗಳನ್ನು ಬೀರುವದರೊಂದಿಗೆ, ಮನುಷ್ಯ ಹಸಿವಿಗಾಗಿ ಊಟ ಮಾಡುವಂತೆ, ಔಷಧಿಗಳನ್ನು ತೆಗೆದುಕೊಂಡರೆ ಮಾತ್ರ ಸುಧಾರಣೆ ಕಾಣಲಿದೆ. ಔಷಧಿ ತೆಗೆದುಕೊಳ್ಳದಿದ್ದರೆ, ಮತ್ತೊಂದು ಸಮಸ್ಯೆಗೆ ಎಡೆಮಾಡಿಕೊಡಲಿದೆಯಂತೆ.
ಬದಲಾಗಿ ಆಯುರ್ವೇದ ಔಷಧಿ ಒಮ್ಮೆ ಸೇವಿಸಿ ಸಮಸ್ಯೆ ಬಗೆಹರಿದರೆ ಮತ್ತೆ ಮತ್ತೆ ಆ ಔಷಧಿ ಸೇವಿಸಬೇಕಾದ ಅಗತ್ಯವಿರುವದಿಲ್ಲ ಎಂದು ಅನುಭವಿಗಳು ಅಭಿಪ್ರಾಯಪಡುತ್ತಾರೆ. ಇನ್ನು ಆಹಾರ ಪದ್ಧತಿಯಲ್ಲಿ ಜಾಗರೂಕತೆ, ಒತ್ತಡ ರಹಿತ ಜೀವನ, ಯೋಗ, ಧ್ಯಾನ ಇತ್ಯಾದಿಯೊಂದಿಗೆ ಶುಚಿತ್ವಕ್ಕೆ ಒತ್ತು ನೀಡುವದು, ಉತ್ತಮ ಗಾಳಿ ಸೇವನೆ ಇತ್ಯಾದಿ ಮನುಷ್ಯ ಆರೋಗ್ಯ ಸುಧಾರಣೆಯಲ್ಲಿ ಪರಿಣಾಮ ಬೀರಲಿವೆ.
ಆ ಸಲುವಾಗಿ ಸರಕಾರಗಳು ಆಸ್ಪತ್ರೆಗಳಲ್ಲಿ ಇಂಗ್ಲೀಷ್ ಔಷಧಿಯೊಂದಿಗೆ ಆಯುರ್ವೇದ ಔಷಧಿಗಳು ಕೂಡ ರೋಗಿಗಳಿಗೆ ಲಭಿಸುವ ದಿಕ್ಕಿನಲ್ಲಿ ಯೋಜನೆ ರೂಪುಗೊಳಿಸತೊಡಗಿದೆ. ಇದು ಪುಟ್ಟ ಜಿಲ್ಲೆ ಕೊಡಗಿನಲ್ಲಿಯೂ ಭವಿಷ್ಯದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗುವ ಆಶಯವಿದೆ.
ಮಡಿಕೇರಿ - ಕುಶಾಲನಗರ : ಕಳೆದ ಅನೇಕ ವರ್ಷಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿಯ ಮಹದೇವಪೇಟೆಯಲ್ಲಿರುವ ಆಯುಷ್ ಆಯುರ್ವೇದ ಆಸ್ಪತ್ರೆಯು ಈಗ ಸಾಕಷ್ಟು ಸುಧಾರಣೆ ಕಾಣತೊಡಗಿದೆ. ಮಾತ್ರವಲ್ಲದೆ, ನಗರದ ರೋಟರಿ ಸಭಾಂಗಣ ಬಳಿ ಪ್ರತ್ಯೇಕ ಆಯುರ್ವೇದ ಚಿಕಿತ್ಸಾಲಯ ಹೊಂದಿದೆ. ಭವಿಷ್ಯದಲ್ಲಿ ಅದಕ್ಕೆ ಹೊಂದಿಕೊಂಡಂತೆ 10 ಹಾಸಿಗೆಗಳ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ತಲೆಯೆತ್ತಲಿದೆ. ಈ ನಡುವೆ ಕುಶಾಲನಗರದಲ್ಲಿಯೂ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು ಜನತೆಯ ಅನುಕೂಲಕ್ಕಾಗಿ ಇರುವಷ್ಟು ವ್ಯವಸ್ಥೆಯೊಂದಿಗೆ ಪ್ರಾರಂಭಿಸಲಾಗಿದೆ.
ಇಲ್ಲಗಳ ನಡುವೆ ಸೇವೆ : ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಆಯುರ್ವೇದದೊಂದಿಗೆ ಹೋಮಿಯೋಪತಿ ಚಿಕಿತ್ಸಾ ಆಸ್ಪತ್ರೆಯನ್ನು ಇಲ್ಲಗಳ ನಡುವೆಯೂ ನಡೆಸಲಾಗುತ್ತಿದೆ. ಈ ಪುಟ್ಟ ಜಿಲ್ಲೆಯಲ್ಲಿ ಆಯುಷ್ ಇಲಾಖೆಯಿಂದ ಈಗಾಗಲೇ ವಿವಿಧ ರೀತಿ ಜನಸೇವೆಗಾಗಿ 60 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 43 ಹುದ್ದೆಗಳಿಗೆ ನೇಮಕಾತಿ ನಡೆಯದೇ ಕೇವಲ 17 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹದೇವಪೇಟೆಯ ಜಿಲ್ಲಾ ಆಯುಷ್ ಅಧಿಕಾರಿ ಕಚೇರಿಯಲ್ಲಿ ಓರ್ವ ಹಿರಿಯ ಡಾ. ರಾಮಚಂದ್ರ ಅವರು ಕಾರ್ಯನಿರ್ವಹಿಸುತ್ತಿದ್ದು, ದ್ವಿತೀಯ ದರ್ಜೆ ಸಹಾಯಕ ಹಾಗೂ ‘ಡಿ’ ಗ್ರೂಪ್ ನೌಕರರ ನೇಮಕವಾಗಿಲ್ಲ. ಜಿಲ್ಲಾ ಸರಕಾರಿ ಆಯುಷ್ ಆಸ್ಪತ್ರೆಗೆ ಇಬ್ಬರು ಹಿರಿಯ ವೈದ್ಯರು, ಔಷಧಿ ವಿತರಕರು ಇಲ್ಲ. ‘ಡಿ’ ಗ್ರೂಪ್, ಅಡುಗೆ ಸಿಬ್ಬಂದಿ ಹುದ್ದೆಯೂ ಖಾಲಿ ಇವೆ.
ಅಲ್ಲದೆ ಜಿಲ್ಲೆಯ ಒಟ್ಟು 12 ಕಡೆಗಳಲ್ಲಿ ಆಯುರ್ವೇದ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಇದ್ದು, ಹಲವೆಡೆ ವೈದ್ಯರಿದ್ದರೆ, ಸಿಬ್ಬಂದಿಯಿಲ್ಲ, ಸಿಬ್ಬಂದಿ ಇರುವೆಡೆ ವೈದ್ಯರಿಲ್ಲ. ಪರಿಣಾಮ ವೀರಾಜಪೇಟೆ, ಸೋಮವಾರಪೇಟೆ, ಶ್ರೀಮಂಗಲ, ನಲ್ಲೂರು, ಬೆಸೂರು, ತೊರೆನೂರು, ಅರಪಟ್ಟು, ಕರಿಕೆ, ಪಾರಾಣೆ ಮುಂತಾದೆಡೆ ಆಯುರ್ವೇದ ಕೇಂದ್ರಗಳಿದ್ದರೂ ಜನತೆಗೆ ಸಮರ್ಪಕ ಸೇವೆಗಳು ಲಭಿಸದಂತಾಗಿದೆ. ಈ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಹಂತದಲ್ಲಿ ವ್ಯವಹರಿಸಬೇಕಿದೆ.
ತಾರತಮ್ಯ ನೀಗಿಸಬೇಕು: ಆಯುಷ್ ಕೇಂದ್ರಗಳ ಸಮಸ್ಯೆ ಕುರಿತು ‘ಶಕ್ತಿ’ ಜಿಲ್ಲೆಯ ಅಧಿಕಾರಿ ಡಾ. ರಾಮಚಂದ್ರ ಅವರ ಗಮನ ಸೆಳೆದಾಗ, ಎಂಬಿಬಿಎಸ್ ಹಾಗೂ ಇತರ ತಜ್ಞ ವೈದ್ಯರಂತೆ ಆಯುಷ್ ಇಲಾಖೆಯ ವೈದ್ಯ ಸಿಬ್ಬಂದಿ ಕೂಡ ದುಡಿಯುತ್ತಿದ್ದು, ಸರಕಾರ ವೇತನ ತಾರತಮ್ಯ ನೀಗಿಸಿ ಸಮಾನ ಗೌರವ ಕಲ್ಪಿಸುವಂತೆ ಅಭಿಪ್ರಾಯಪಟ್ಟರು.
ರಾಜ್ಯ ಸಚಿವ ಸಂಪುಟ ಈ ಬಗ್ಗೆ ಗಮನ ಹರಿಸಿ, ವೇತನ ತಾರತಮ್ಯ ಹೋಗಲಾಡಿಸುವದಲ್ಲದೆ, ಖಾಲಿ ಹುದ್ದೆಗಳನ್ನು ಹೊರಗುತ್ತಿಗೆಯಲ್ಲಿ ಭರ್ತಿಗೆ ಆಯಾ ಜಿಲ್ಲಾಧಿಕಾರಿಗಳ ಮಟ್ಟದ ಸಮಿತಿಗೆ ಅಧಿಕಾರ ನೀಡಿದರೆ, ಸ್ಥಳೀಯವಾಗಿ ಅಭ್ಯರ್ಥಿಗಳ ನೇಮಕಾತಿ ಸಾಧ್ಯವೆಂದು ಪ್ರತಿಕ್ರಿಯಿಸಿದರು.
ಪ್ರಸಕ್ತ ಆಯುಷ್ ಇಲಾಖೆಯು ಜಿಲ್ಲಾಡಳಿತದ ಸಹಕಾರದೊಂದಿಗೆ ವಿಶ್ವಯೋಗ ದಿನಾಚರಣೆ, ವಿವಿಧ ಕಾರ್ಯಾಗಾರಗಳ ಮುಖಾಂತರ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ಅವರು ತಿಳಿಸಿದರು. ಭವಿಷ್ಯದಲ್ಲಿ ಕೊಡಗಿನ ಹವಾಗುಣಕ್ಕೆ ತಕ್ಕಂತೆ ಆಯುಷ್ ಇಲಾಖೆಯಿಂದ ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆಗೆ ಗಮನ ನೀಡಲಾಗುವದು ಎಂದು ಡಾ. ರಾಮಚಂದ್ರ ಅಭಿಪ್ರಾಯಪಟ್ಟರು.
ಪ್ರಸಕ್ತ 60 ಮಂದಿ ಕಾರ್ಯನಿರ್ವಹಿಸುವಲ್ಲಿ ಕೇವಲ 17 ಮಂದಿ ಕರ್ತವ್ಯದೊಂದಿಗೆ 43 ಹುದ್ದೆಗಳು ಖಾಲಿ ಇರುವದಾಗಿ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ಕಾಳಜಿ ವಹಿಸಬೇಕೆಂಬದು ‘ಶಕ್ತಿ’ಯ ಆಶಯ.