*ಗೋಣಿಕೊಪ್ಪಲು, ಜೂ. 11: ಕಾಳು ಮೆಣಸಿಗೆ ಬರುವ ಸೊರಗು ಮತ್ತು ಹಳದಿ ರೋಗವನ್ನು ಹತೋಟಿಗೆ ತರಲು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ, ವತಿಯಿಂದ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಜೈವಿಕ ಗೊಬ್ಬರವನ್ನು ಕಾಳು ಮೆಣಸು ಬೆಳೆಯಲ್ಲಿ ರೈತರ ತಾಕುಗಳಲ್ಲಿ ಪರೀಕ್ಷಿಸಿ ಇಳುವರಿಯನ್ನು ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ರೈತರು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ ಇಳುವರಿಯನ್ನು ಹೆಚ್ಚಿಸಬೇಕೆಂದು ಹೇಳಿದರು. ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಜೈವಿಕ ಗೊಬ್ಬರಗಳು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯಿಂದ ಪ್ರಾಮುಖ್ಯತೆಯನ್ನು ಪಡೆದಿರುತ್ತವೆÉ. ಪ್ರಸ್ತುತ ಜೈವಿಕ ಗೊಬ್ಬರಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರೆತೆಯಿಂದಾಗಿ ಜೈವಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿರುತ್ತದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಜೈವಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಬೆಂಗಳೂರುರವರು ಜೈವಿಕ ಗೊಬ್ಬರವಾದ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುತ್ತಾರೆ ಎಂದು ಹೇಳಿದರು.

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನಲ್ಲಿ ಲಭ್ಯವಿದ್ದು ಜಿಲ್ಲೆಯ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು 08274-247274 ಸಂಪರ್ಕಿಸುವಂತೆ ತಿಳಿಸಿದರು.