ಸೋಮವಾರಪೇಟೆ, ಜೂ. 11: ಕೃಷಿ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ವಿವಿಧ ತಳಿಗಳ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.
ಮುಸುಕಿನ ಜೋಳ ತಳಿಗಳಾದ ಗಂಗಾ ಕಾವೇರಿ ಜಿ.ಕೆ.3059, ಸಿ.ಪಿ.818, ಪೈನಿಯಾರ್30 ಬಿ07, ಕಾವೇರಿ 25 ಕೆ 55, ಬಿಸ್ಕೋ-ಪ್ರಿನ್ಸ್ ತಳಿಗಳನ್ನು ಗುಡ್ಡೆಹೊಸೂರು, ಕೂಡಿಗೆ, ಕೊಡ್ಲಿಪೇಟೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ದಾಸ್ತಾನಿರಿಸಲಾಗಿದ್ದು, ಸಾಮಾನ್ಯ ವರ್ಗಕ್ಕೆ 1 ಕೆ.ಜಿ.ಗೆ ರೂ. 20, ಎಸ್‍ಸಿ,ಎಸ್.ಟಿ ವರ್ಗಕ್ಕೆ ರೂ. 30 ಸಹಾಯ ಧನದಲ್ಲಿ ವಿತರಣಾ ಕಾರ್ಯ ಪ್ರಾರಂಭವಾಗಿದೆ ಎಂದು ರಾಜಶೇಖರ್ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಅಧಿಕ ಇಳುವರಿ ಭತ್ತಗಳಾದ ತುಂಗ, ಬಿ.ಆರ್. 2655 (ಬಾಂಗ್ಲಾರೈಸ್) ಐಆರ್-64, ಅತಿರ ವನ್ನು ಸಾಮಾನ್ಯ ವರ್ಗಕ್ಕೆ 1ಕೆ.ಜಿ.ಗೆ ರೂ. 8, ಎಸ್.ಸಿ,ಎಸ್.ಟಿ ವರ್ಗಕ್ಕೆ ರೂ. 12 ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ಹೈಬ್ರೀಡ್ ಭತ್ತದ ತಳಿಗಳಾದ ಗಂಗಾ ಕಾವೇರಿ ಜಿಕೆ-3059, ವಿಎನ್‍ಆರ್-2233, ಪಿಸಿಎ-837 ಗಳನ್ನು ಸಾಮಾನ್ಯ ವರ್ಗಕ್ಕೆ 1ಕೆ.ಜಿ.ಗೆ ರೂ. 55, ಎಸ್.ಸಿ,ಎಸ್.ಟಿ ವರ್ಗಕ್ಕೆ ರೂ. 82.50 ರಂತೆ ಸಹಾಯ ಧನದಲ್ಲಿ ವಿತರಿಸಲಾಗುವದು.
ರೈತರು ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರ, ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಯವರ ಪರವಾನಗಿ ಪಡೆದು ಸಹಕಾರ ಸಂಘದ ಮೂಲಕ ಪಡೆಯಬಹುದಾಗಿದೆ.
ಈಗಾಗಲೇ ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರದ ಸೆಣಬಿನ ಬೀಜಗಳನ್ನು ರೈತರಿಗೆ ಶೇ. 50 ರ ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ರೈತರು ತಮ್ಮ ಭತ್ತದ ಜಮೀನನ್ನು ಉಳುಮೆ ಮಾಡಿ ಎಕರೆಗೆ 15-20ಕೆ.ಜಿ. ಬೀಜವನ್ನು ಎರಚಿ ನಂತರ ಹೂ ಬಿಡುವ ಮುನ್ನ 20 ರಿಂದ 25 ದಿನಗಳ ಸಸಿಗಳನ್ನು ಭೂಮಿಗೆ ಸೇರಿಸಬೇಕು.
ಇದರಿಂದ ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿಗೆ ಸೇರಿಸುವದರ ಜತೆಗೆ ಮಣ್ಣಿನ ರಚನೆ ಮತ್ತು ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹಾಗೂ ಮಣ್ಣಿನಲ್ಲಿ ಜೈವಿಕ ಕ್ರಿಯೆ ಉತ್ತಮಗೊಂಡು ಭತ್ತದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಕೊಡಗು ಜಿಲ್ಲೆಯ ಮಣ್ಣಿನಲ್ಲಿ ಸತು ಮತ್ತು ಬೋರಾನ್ ಕೊರತೆ ಇರುವದರಿಂದ ಉತ್ತಮ ಇಳುವರಿ ಪಡೆಯಲು ಮುಸುಕಿನ ಜೋಳ ಬೆಳೆಗೆ 1 ಎಕರೆಗೆ 5 ಕೆ.ಜಿ. ಜಿಂಕ್ ಸಲ್ಫೇಟ್, 2 ಕೆ.ಜಿ. ಬೋರಾಕ್ಸ್‍ನ್ನು ಮಣ್ಣಿಗೆ ಸೇರಿಸಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ. ಎಂದು ಡಾ. ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಆಯಾ ಹೋಬಳಿಗಳ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ.