ಮಡಿಕೇರಿ, ಜೂ. 11: ಕಳೆದ ರಾತ್ರಿಯಿಂದ ತಲಕಾವೇರಿ-ಭಾಗಮಂಡಲ ತಪ್ಪಲುವಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದು, ದಕ್ಷಿಣ ಕೊಡಗಿನ ಬ್ರಹ್ಮಗಿರಿ ಶ್ರೇಣಿಯ ಶ್ರೀಮಂಗಲ, ಕುಟ್ಟ, ಬೀರುಗ, ಬಿರುನಾಣಿ ಸೇರಿದಂತೆ ಉತ್ತರ ಕೊಡಗಿನ ಪುಷ್ಪಗಿರಿ ತಪ್ಪಲು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದೆ. ಪರಿಣಾಮ ಸುತ್ತಮುತ್ತಲಿನ ಗ್ರಾಮೀಣ ಜನಜೀವನ ಅಸ್ತವ್ಯಸ್ತಗೊಂಡು ಕಳೆದ ಐದು ದಿನಗಳಿಂದ ವಿದ್ಯುತ್ ವ್ಯತ್ಯಯದಿಂದ ಗ್ರಾಮಸ್ಥರು ಕಾರ್ಗತ್ತಲೆಯಲ್ಲಿ ಕಳೆಯುವಂತಾಗಿದೆ. ಸೂರ್ಲಬ್ಬಿ ಸಹಿತ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಮೊಬೈಲ್ ಇತ್ಯಾದಿ ಸಂಪರ್ಕ ಸಾಧನಗಳು ಕೂಡ ಸ್ತಬ್ಧಗೊಂಡಿವೆ ಎಂದು ಅಲ್ಲಿನ ಜನತೆ ಅಸಹಾಯಕತೆ ತೋಡಿಕೊಂಡಿದ್ದಾರೆ.ಇನ್ನು ತಲಕಾವೇರಿ-ಭಾಗಮಂಡಲದಲ್ಲಿ ಮಳೆ ಕ್ಷೀಣಗೊಂಡಿರುವ ಕಾರಣ ಇಂದು ಮಡಿಕೇರಿ-ಭಾಗಮಂಡಲ ಹಾಗೂ ಭಾಗಮಂಡಲ, ನಾಪೋಕ್ಲು ಮಾರ್ಗದ ರಸ್ತೆ ಸಂಪರ್ಕ ಸುಗಮಗೊಂಡಿದೆ. ಉತ್ತರ ಕೊಡಗಿನ ಮುಟ್ಲು, ಹಮ್ಮಿಯಾಲ, ಕುಂಬಾರಗಡಿಗೆ, ಸೂರ್ಲಬ್ಬಿ ಸುತ್ತಮುತ್ತ ಭಾರೀ ಮಳೆಯಿಂದಾಗಿ ಹಟ್ಟಿಹೊಳೆ ಹಾಗೂ ಮಾದಾಪುರ ಹೊಳೆಗಳು ತುಂಬಿ ಹರಿಯುವದರೊಂದಿಗೆ ಹಾರಂಗಿ ಜಲಾಶಯದ ನೀರಿನ ಮಟ್ಟ ಏರತೊಡಗಿದೆ. ಕಳೆದ ನಾಲ್ಕು ದಿನಗಳಲ್ಲಿ ಜಲಾಶಯ ನೀರಿನ ಮಟ್ಟ 20 ಅಡಿಗಳಷ್ಟು ಏರಿಕೆಗೊಂಡಿದೆ. ಇತ್ತ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಕೂಡ ಇಂದು ಸ್ವಲ್ಪ ಮಳೆ ಪ್ರಮಾಣ ಇಳಿಮುಖ ಗೋಚರಿಸಿತು.

ಬರೆ ಕುಸಿತ: ಮಕ್ಕಂದೂರು-ಮುಕ್ಕೋಡ್ಲು ಮಾರ್ಗದ ತಂತಿಪಾಲ ಬಳಿ ಭಾರೀ ಪ್ರಮಾಣದ ಬರೆ ಕುಸಿತ ಉಂಟಾಗಿದೆ. ರಸ್ತೆ ಬದಿಯ ಮರಗಳು ಸಹಿತ ಭೂಕುಸಿತದಿಂದ ಅರ್ಧದಷ್ಟು ರಸ್ತೆ ಹಾನಿಗೊಂಡಿದೆ.

(ಮೊದಲ ಪುಟದಿಂದ) ಗ್ರಾಮಕ್ಕೆ ವಾಹನ ಸಂಪರ್ಕ ಕಡಿತಗೊಂಡಿರುವ ಪರಿಣಾಮ ಸುತ್ತ ಮುತ್ತಲಿನ ನಿವಾಸಿಗಳು ಶ್ರಮದಾನದಿಂದ ಸಂಚಾರ ವ್ಯವಸ್ಥೆ ಕಲ್ಪಿಸಿಕೊಂಡಿದ್ದು, ಮಕ್ಕಂದೂರು ಗ್ರಾ.ಪಂ. ಸದಸ್ಯ ರಮೇಶ, ಅಭಿವೃದ್ಧಿ ಅಧಿಕಾರಿ ಚಂಗಪ್ಪ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಗಡಿಯಲ್ಲಿ ಮಳೆ: ಅತ್ತ ದಕ್ಷಿಣ ಕೊಡಗಿನ ಕೇರಳ ಗಡಿ ಗ್ರಾಮಗಳಲ್ಲಿ ಭಾರೀ ಮಳೆಯ ಪರಿಣಾಮ ಕುಟ್ಟ, ಶ್ರೀಮಂಗಲ, ಬಿರುನಾಣಿ, ಕಾನೂರು ಸುತ್ತ ಮುತ್ತ ಜನಜೀವನ ಅಸ್ತವ್ಯಸ್ತಗೊಂಡು ಆತಂಕದ ಛಾಯೆ ಎದುರಾಗಿದೆ ಎಂದು ಕುಟ್ಟ ನಾಗರಿಕ ತಿಮ್ಮು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ನೆರೆಯ ಕೇರಳದಲ್ಲಿ ಮುಂಗಾರು ತೀವ್ರಗೊಂಡಿರುವ ಕಾರಣ ಗಡಿ ಗ್ರಾಮಗಳಲ್ಲಿ ಈ ಸನ್ನಿವೇಶ ಗೋಚರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಳೆ ವಿವರ: ಕಳೆದ 24 ಗಂಟೆಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಸರಾಸರಿ 4 ಇಂಚು ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಇಂದು ಹಗಲು ಮಳೆಯಲ್ಲಿ ಸುಧಾರಣೆ ಗೋಚರಿಸಿದೆ. ಪ್ರಸಕ್ತ ವರ್ಷಾರಂಭದಿಂದ ಇಂದಿನ ತನಕ ಮಡಿಕೇರಿಯಲ್ಲಿ ಒಟ್ಟು 39.15 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ 40 ಇಂಚು ಮಾತ್ರ ದಾಖಲಾಗಿತ್ತು. ಇಲ್ಲಿ ಈಗಲೇ ಈ ದಾಖಲೆಯ ಮಳೆ ಕಂಡುಬಂದಿದೆ.

ಇತರೆಡೆ ಮಳೆ ವಿವರ: ಹಿಂದಿನ 24 ಗಂಟೆಗಳಲ್ಲಿ ತಲಕಾವೇರಿಗೆ 8.97 ಇಂಚು ಮಳೆಯಾದರೆ, ಶಾಂತಳ್ಳಿಗೆ 7.71 ಇಂಚು ದಾಖಲಾಗಿದೆ. ಭಾಗಮಂಡಲ 6.85 ಇಂಚು, ನಾಪೋಕ್ಲು 5.16 ಇಂಚು, ಸೋಮವಾರಪೇಟೆ 5.46 ಇಂಚು ಮಳೆ ದಾಖಲಾಗಿದೆ. ಶನಿವಾರಸಂತೆ 3.99 ಇಂಚು, ಕೊಡ್ಲಿಪೇಟೆ 5.33 ಇಂಚು, ದಕ್ಷಿಣ ಕೊಡಗಿನ ಹುದಿಕೇರಿ 4.88 ಇಂಚು, ಶ್ರೀಮಂಗಲ 4.65 ಇಂಚು ಮಳೆಯಾಗಿದೆ. ಅಲ್ಲದೆ ವೀರಾಜಪೇಟೆಗೆ 4.9 ಇಂಚು, ಅಮ್ಮತ್ತಿ 2.75 ಇಂಚು, ಪೊನ್ನಂಪೇಟೆ 3.23 ಇಂಚು, ಬಾಳೆಲೆ 2.28 ಇಂಚು ಮಳೆಯಾಗಿದೆ. ಇತ್ತ ಸಂಪಾಜೆ 2.76 ಇಂಚು, ಸುಂಟಿಕೊಪ್ಪ 1.65 ಇಂಚು ಹಾಗೂ ಕುಶಾಲನಗರ 0.43 ಇಂಚು ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2806.80 ಅಡಿಗಳು, ಕಳೆದ ವರ್ಷ ಇದೇ ದಿನ 2808.07 ಅಡಿ. ಇಂದಿನ ನೀರಿನ ಒಳ ಹರಿವು 4780 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 345 ಕ್ಯುಸೆಕ್ ಇತ್ತು.

ಭತ್ತ ಸಸಿಮಡಿ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಸಕಾಲದಲ್ಲಿ ಆರಂಭವಾಗಿರುವದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವದರಿಂದ ಭತ್ತ ಸಸಿಮಡಿ ಮಾಡುವ ಕಾರ್ಯಕ್ಕೆ ಸಿದ್ಧತೆಗಳು ನಡೆದಿವೆ. ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ, ಕುಂಬಾರಗಡಿಗೆ ಸುತ್ತಮುತ್ತ ನಾಟಿಗೆ ಸಿದ್ಧತೆ ಸಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿದ್ದು, ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯ ಶೇ.18 ಪೂರ್ಣಗೊಂಡಿದೆ. ಸೋಮವಾರಪೇಟೆ ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ಗುರಿ ಇದ್ದು, ಇದರಲ್ಲಿ ಈಗಾಗಲೇ 735 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಬಿತ್ತನೆ ಕಾರ್ಯ ಮುಂದುವರೆದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಪ್ರತಿ ಕೆ.ಜಿ.ಗೆ 15 ರೂ.ಗಳ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಇದ್ದು, ಸಕಾಲದಲ್ಲಿ ಮಳೆಯಾಗುತ್ತಿರು ವದರಿಂದ ಭತ್ತ ಸಸಿಮಡಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲ್ಲಿ ದಾಸ್ತಾನು ಮಾಡಿ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.

ರೈತರು ಸಸಿಮಡಿ ಮಾಡುವ ಸಂದರ್ಭದಲ್ಲಿ ಬಿತ್ತನೆಗೆ ಮೊದಲು ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಉಪಯೋಗಿಸುವದು ಸೂಕ್ತವಾಗಿದೆ. ಪ್ರತಿ ಕೆ.ಜಿ. ಭತ್ತ ಬಿತ್ತನೆ ಬೀಜಕ್ಕೆ 4 ಗ್ರಾಂ. ಬೇವಿಸ್ಟಿನ್ (ಕಾರ್ಬನ್‍ಡೈಜಿಂ) ಶಿಲೀಂಧ್ರನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ನಂತರ ಮೊಳಕೆಗೆ ಇಡುವ ಮೊದಲು ಬೀಜೋಪಚಾರ ಮಾಡುವದು ಒಳಿತಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ರಾಜು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತಿ ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ 4 ಗ್ರಾಂ. ನಂತೆ ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು, ಮೊಳಕೆ ಬಂದ ನಂತರ ಸಸಿ ಮಡಿಯಲ್ಲಿ ಬಿತ್ತನೆ ಮಾಡುವದು. ಹೀಗೆ ಮಾಡುವದರಿಂದ ಬೀಜದಿಂದ ಬರುವ ಬೆಂಕಿ ರೋಗವನ್ನು ತಡೆಗಟ್ಟಬಹುದಾಗಿದೆ.

ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರ, ಬಿ.ಆರ್.2655 ತಳಿ ಭತ್ತಗಳನ್ನು ಜೂನ್ 10 ರಿಂದ 20 ರೊಳಗೆ ಬಿತ್ತನೆ ಮಾಡಬಹುದಾಗಿದೆ. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್ ಮೂರನೇ ಅಥವಾ 4ನೇ ವಾರದಲ್ಲಿ ಬಿತ್ತನೆ ಮಾಡುವದು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದ ನಂತರ ಬಿತ್ತನೆಗೆ ಬಳಸುವದು ಸೂಕ್ತವಾಗಿದೆ.

ರಸಗೊಬ್ಬರ ದಾಸ್ತಾನು: ಜಿಲ್ಲೆಯ ಸಹಕಾರ ಸಂಘ ಹಾಗೂ ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ಡಿ.ಎ.ಪಿ, ಎಂ.ಒ.ಪಿ, ಹಾಗೂ 17:17:17, 15:15:15, 10:26:26. ಹೀಗೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರ ಒಟ್ಟು 14,835 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ರಾಜು ಮಾಹಿತಿ ನೀಡಿದ್ದಾರೆ.

ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನಾಪೆÇೀಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹವು ಎರಡು ಅಡಿಗಳಷ್ಟು ಹರಿಯುತ್ತಿದೆ. ಬಸ್ ಮತ್ತು ಇತರ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಯಾವದೇ ಕ್ಷಣದಲ್ಲೂ ರಸ್ತೆ ಸಂಚಾರ ಕಡಿತಗೊಳ್ಳುವ ಭೀತಿ ಮೂಡಿದೆ.

ಉಳಿದಂತೆ ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡು ಹಾಗೂ ನಾಪೆÇೀಕ್ಲು - ಮಡಿಕೇರಿ ರಸ್ತೆಯ ಕೊಟ್ಟಮುಡಿ ಬಳಿ ಕಾವೇರಿ ನದಿ ಪ್ರವಾಹದಲ್ಲಿ ಏರಿಕೆಯಾಗುತ್ತಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ರಸ್ತೆ ತಡೆ ಉಂಟಾಗುವ ಭೀತಿ ಮೂಡಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಡ್ರಹೊಳೆಗೆ ನೂತನ ಸೇತುವೆ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜನರು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲಲ್ಲಿ ಬರೆ ಕುಸಿತ, ಮರದ ಕೊಂಬೆ ಬಿದ್ದಿರುವ ಘಟನೆ ಹೊರತುಪಡಿಸಿದರೆ, ಯಾವದೇ ಹೆಚ್ಚಿನ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕೊಟ್ಟಮುಡಿ - ಮೂರ್ನಾಡು ಕೂಡು ರಸ್ತೆಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದ್ದು, ಎಎಸ್‍ಐ ವಿಶ್ವನಾಥ್ ಮತ್ತು ಹೆಡ್ ಕಾನ್ಸ್‍ಟೆಬಲ್ ರವಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ವಾಹನ ಚಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಿದ್ದಾಪುರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.ಕರಡಿಗೋಡುವಿನ ನದಿ ದಡದ ಸಮೀಪದ ಇಳಿಜಾರಿನಲ್ಲಿರುವ ಕೆಲವು ಮನೆಗಳ ಸಮೀಪ ಪ್ರವಾಹ ನೀರು ಬರುತ್ತಿದ್ದು, ಜಲಾವೃತ ಗೊಳ್ಳುವ ಸಾಧ್ಯತೆ ಇದೆ.ನದಿ ದಡದಲ್ಲಿರುವ ಹೊಟೇಲ್‍ವೊಂದರ ಬಾಗಿಲಿನ ಮೆಟ್ಟಿಲಿನವರೆಗೆ ಚಿಕ್ಕನಳ್ಳಿಯ ಕಿರು ಸೇತುವೆ ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತ ಗೊಂಡಿದೆ.ಇದಲ್ಲದೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ನೀರಿನ ರಭಸವಾದ ಹೊಡೆತಕ್ಕೆ ನದಿ ದಡ ಕುಸಿಯುತ್ತಿದ್ದು ಕರಡಿಗೋಡುವಿನ ನದಿ ದಡದವರು ಭಯಭೀತರಾಗಿದ್ದಾರೆ.

ನದಿ ದಡದಲ್ಲಿ ಆಧಾರವಾಗಿರುವ ಬಿದಿರುಗಳು ನೀರಿನ ಹೊಡೆತಕ್ಕೆ ನದಿಪಾಲಾಗಿದ್ದು ನದಿದಡದ ಮನೆಗಳಿಗೆ ಆಧಾರವಿಲ್ಲದಂತಾಗಿದೆ.ಈ ಹಿನ್ನೆಲೆಯಲ್ಲಿ ಬಹುತೇಕ ಮನೆಗಳ ಹಿಂಬದಿ ಬಿರುಕು ಬಿಟ್ಟಿದೆ.ವೀರಾಜಪೇಟೆ ತಹಸೀಲ್ದಾರ್ ಗೋವಿಂದರಾಜ್ ನೇತೃತ್ವದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್,ಗ್ರಾಮಲೆಕ್ಕಿಗ ಮಂಜುನಾಥ್ ಸಹಾಯಕ ಕೃಷ್ಣ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಕರಡಿಗೋಡು ನದಿದಡದ ನಿವಾಸಿಗಳಿಗೆ ಕರಡಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲಾ ಸಿದ್ಧತೆ ಕೈಗೊಂಡಿದ್ದಾರೆ.

ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಸೋಮವಾರ ಧಾರಾಕಾರ ಮಳೆಯಾಗಿದೆ. ಮುಂಜಾನೆಯಿಂದಲೇ ಆರಂಭವಾದ ಮಳೆ ಮಧ್ಯಾಹ್ನದವರೆಗೆ ಬಿಡುವು ನೀಡದೇ ಸುರಿಯಿತು. ಒಟ್ಟು 3 ಇಂಚು 25 ಸೆಂಟ್ ಮಳೆಯಾಗಿದೆ. ಮಳೆಯಿಂದ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ ಆಗಾಗ್ಗೆ ಕಡಿತಗೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಹೊಳೆ, ಕೆರೆಗಳು ತುಂಬಿದ್ದು, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಹೊಳೆ ಮೈದುಂಬಿ ಹರಿಯುತ್ತಿದೆ.

ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕಾವೇರಿ ಪಾತ್ರದಲ್ಲಿ ಹೆಚ್ಚಿನ ಮಳೆ ಕಾರಣ ಕೊಪ್ಪ ಕಾವೇರಿ ಸೇತುವೆ ಕೆಳಗಡೆ ನದಿ ತುಂಬಿ ಹರಿಯುತ್ತಿದ್ದ ದೃಶ್ಯ ಕಂಡುಬಂದಿದೆ. ಸಂಜೆ ವೇಳೆಗೆ 6 ಮೀಟರ್ ಎತ್ತರಕ್ಕೆ ನೀರು ಹರಿಯುತ್ತಿದ್ದು ಇನ್ನು 1 ಅಡಿ ಹೆಚ್ಚಳವಾದಲ್ಲಿ ನದಿ ಅಪಾಯದ ಅಂಚು ಮೀರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ಡೆಹೊಸೂರು: ಸಮೀಪದ ರಸಲ್‍ಪುರ ಬಾಳುಗೊಡುವಿನಲ್ಲಿ ಕಾವೇರಿ ನದಿನೀರು ಕಿರುಸೇತುವೆ ಮೂಲಕ ಗದ್ದೆಗಳಿಗೆ ನುಗ್ಗಿದ್ದು, ಸ್ಥಳೀಯರು ಈ ಗದ್ದೆಗಳಲ್ಲಿ ಬಲೆಗಳನ್ನು ಬಳಸಿ ಮೀನುಹಿಡಿಯುವ ದೃಶ್ಯಕಂಡುಬಂತು. ಇನ್ನೂ ಹೆಚ್ಚಿನ ಮಳೆ ಬಂದರೆ ಅಲ್ಲಿನ ರೈತ ರಾಜಪ್ಪ ಎಂಬವರ ಬೆಳೆದ ಬಾಳೆ ತೊಟಕ್ಕೆ ಹಾನಿಯಾಗಲಿದೆ.