ಸೋಮವಾರಪೇಟೆ,ಜೂ.11: ಸೋಮವಾರಪೇಟೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದೆ. ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಶಾಂತಳ್ಳಿ ಹೋಬಳಿಗೆ ಕಳೆದ 2 ದಿನದಲ್ಲೇ 21 ಇಂಚು ಮಳೆ ದಾಖಲಾಗಿದೆ. ಅಲ್ಲಲ್ಲಿ ಮನೆ, ತಡೆಗೋಡೆಗೆ ಹಾನಿಯಾಗಿದ್ದರೆ, ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಾಂತಳ್ಳಿ, ಬೆಟ್ಟದಳ್ಳಿ ಪಂಚಾಯಿತಿಗಳು ವಿದ್ಯುತ್ ಸ್ಥಗಿತದಿಂದ ಕತ್ತಲೆಯಲ್ಲಿ ಮುಳುಗಿವೆ.ಕಳೆದ 5 ದಿನಗಳಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬ್ಬೂರು ಗ್ರಾಮದ ಹೊಳೆ ತುಂಬಿ ಹರಿಯುತ್ತಿದ್ದು, ಅಕ್ಕಪಕ್ಕದ ಶುಂಠಿ, ಗೆಣಸು, ಕಾಫಿ ತೋಟಗಳಿಗೆ ನೀರು ನುಗ್ಗಿದೆ. ಗ್ರಾಮದ ಮಣಿ ಕುಶಾಲ ಅವರಿಗೆ ಸೇರಿದ 1 ಏಕರೆ ಶುಂಠಿ ಕೃಷಿ ಹಾನಿಗೀಡಾಗಿದೆ.

ಸ್ಥಳಾಂತರಕ್ಕೆ ತಹಶೀಲ್ದಾರ್ ಸೂಚನೆ: ಆಲೇಕಟ್ಟೆ ರಸ್ತೆಯ ಕಕ್ಕೆಹೊಳೆಯಲ್ಲಿ ನೀರಿನ ಹರಿವು ಅಧಿಕವಾಗಿದ್ದು, ತಗ್ಗುಪ್ರದೇಶದಲ್ಲಿರುವ ಕೃಷ್ಣ, ಮಣಿ, ಅಪ್ಪಣ್ಣಿ, ರವಿ, ದೊರೆಮಣಿ ಅವರುಗಳ ಮನೆಯೊಳಗೆ ಹೊಳೆ ನೀರು ನುಗ್ಗಿದೆ. ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ವೀರೇಂದ್ರ ಬಾಡ್ಕರ್ ಭೇಟಿ ನೀಡಿ ಪರಿಶೀಲಿಸಿದ್ದು, ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ಥರಿಗೆ ನೆರವು ಒದಗಿಸುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.

ಮುಂದುವರೆದ ಹಾನಿ: ಭಾರೀ ಮಳೆ ಗಾಳಿಗೆ ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಾನಗಲ್ಲು ಬಾಣೆ ಗ್ರಾಮದ ಅನಿತಾ ಅವರಿಗೆ ಸೇರಿದ ವಾಸದ ಮನೆ ಕುಸಿದು ಬಿದ್ದಿದ್ದು ರೂ.40 ಸಾವಿರ ನಷ್ಟ ಸಂಭವಿಸಿದೆ. ಗರ್ವಾಲೆ ಗ್ರಾಮದ ಟಿ.ಎಂ. ಬೇಬಿ ಅವರ ಮನೆಯ ಛಾವಣಿ ಜಖಂಗೊಂಡಿದ್ದು 25 ಸಾವಿರ ನಷ್ಟವಾಗಿದೆ.

ಗರಗಂದೂರು ಗ್ರಾಮದ ಕಮಲ ಅವರ ಮನೆಯ ಶೀಟ್ ಹಾರಿ ಹೋಗಿದ್ದು, 10 ಸಾವಿರ ನಷ್ಟ ಸಂಭವಿಸಿದ್ದರೆ, ಶಾಂತಳ್ಳಿ ಹೋಬಳಿಯ ಕೂತಿ ಗ್ರಾಮದ ದೇವಮ್ಮ ಅವರ ಮನೆಯ ಹೆಂಚು, ಸಿಮೆಂಟ್ ಶೀಟ್‍ಗಳು ನೆಲಕ್ಕುರುಳಿ 50 ಸಾವಿರದಷ್ಟು ನಷ್ಟವಾಗಿದೆ. ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆಯ ಹೆಚ್.ಎಂ. ರವಿ ಅವರ ಮನೆಯ ಮೇಲೆ ಬೃಹತ್ ಗಾತ್ರದ ಸಿಲ್ವರ್ ಮರ ಬಿದ್ದು 30 ಸಾವಿರ ನಷ್ಟವಾಗಿದೆ. ಕಲ್ಕಂದೂರಿನ ಜೀನತ್ ಅವರ ಮನೆಯ ತಡೆಗೋಡೆ ಕುಸಿದಿದ್ದು 50 ಸಾವಿರದಷ್ಟು ನಷ್ಟ ಸಂಭವಿಸಿದೆ. ಪಟ್ಟಣದ ವರಲಕ್ಷ್ಮೀ ಸಿದ್ದೇಶ್ವರ್ ಅವರ ಮನೆಯ ತಡೆಗೋಡೆ ಕುಸಿದಿದ್ದು, 50 ಸಾವಿರದಷ್ಟು ಹಾನಿಯಾಗಿದೆ.

ಬಜೆಗುಂಡಿ ಗ್ರಾಮದ ರಾಗಿಣಿ ಸುಬ್ರಮಣಿ,

(ಮೊದಲ ಪುಟದಿಂದ) ಅಂತೋಣಿ ಅವರಿಗೆ ಸೇರಿದ ವಾಸದ ಮನೆ ಅತೀ ಮಳೆಗೆ ಕುಸಿದು ಬಿದ್ದಿದೆ. ಮಣ್ಣಿನ ಗೋಡೆ ಶೀತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಇದರೊಂದಿಗೆ ಬಜೆಗುಂಡಿಯ ಆನಂದ, ನವೀನ, ಸುರೇಶ, ಚಂದ್ರ ಅವರುಗಳ ಮನೆಯ ಪಕ್ಕದಲ್ಲಿ ಬರೆ ಕುಸಿತ ಉಂಟಾಗಿದ್ದು, ಇನ್ನಷ್ಟು ಅಪಾಯ ಸಂಭವಿಸುವ ಮುನ್ಸೂಚನೆ ಇದೆ.

ಶಾಂತಳ್ಳಿ ಹೋಬಳಿಯ ಹರಗ ಗ್ರಾಮದಲ್ಲಿ ಜಿ.ಸಿ. ಅಣ್ಣಯ್ಯ ಅವರ ವಾಸದ ಮನೆಯ ಒಂದು ಪಾಶ್ರ್ವ ಕುಸಿದು ನಷ್ಟ ಸಂಭವಿಸಿದೆ. ಗಣಗೂರು ವೃತ್ತದಲ್ಲಿ ಬಸವಣ್ಣಯ್ಯ, ಗುರುಸ್ವಾಮಿ ಅವರುಗಳ ಶುಂಠಿ ಗದ್ದೆಗೆ ನೀರು ನುಗ್ಗಿದ್ದು, ಕೃಷಿ ನಷ್ಟವಾಗಿದೆ.

ಚಿಕ್ಕಬ್ಬೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಚಿಕ್ಕಬ್ಬೂರಿನ ಹೊಳೆ ಕಳೆದ 20 ವರ್ಷದ ನಂತರ ಅಪಾಯಕಾರಿ ಸ್ಥಿತಿಯಲ್ಲಿ ಹರಿಯುತ್ತಿದೆ. ಹೊಳೆ ಪಾತ್ರದ ಮನೆಗಳು, ಕೃಷಿ ಪ್ರದೇಶಗಳಿಗೆ ಹಾನಿಯಾಗುವ ಸಂಭವ ಅಧಿಕವಾಗಿದೆ.

ಶಾಸಕ ರಂಜನ್ ಭೇಟಿ: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾನಿಗೊಳಗಾದ ಪ್ರದೇಶಕ್ಕೆ ಖುದ್ದು ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿದ್ದಾರೆ. ಹಾನಿಗೊಳಗಾದ ಕುಟುಂಬಸ್ಥರಿಗೆ ಸಾಂತ್ವಾನ ನೀಡುವದರೊಂದಿಗೆ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಾಬ ಹೋಬಳಿ ವ್ಯಾಪ್ತಿಗೆ 138.8 ಮಿ.ಮೀ., ಶಾಂತಳ್ಳಿಗೆ 196 ಮಿ.ಮೀ., ಶನಿವಾರಸಂತೆಗೆ 101.4, ಕೊಡ್ಲಿಪೇಟೆಗೆ 135.5, ಕುಶಾಲನಗರಕ್ಕೆ 11 ಮಿ.ಮೀ., ಸುಂಟಿಕೊಪ್ಪಕ್ಕೆ 42 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ವಿದ್ಯುತ್ ಇಲಾಖಾ ಸಿಬ್ಬಂದಿಗಳು ಅವಿರತ ಶ್ರಮದ ಮೂಲಕ ವಿದ್ಯುತ್ ಸಮಸ್ಯೆ ಸರಿಪಡಿಸಲು ಶ್ರಮಿಸುತ್ತಿದ್ದಾರೆ. ಅಲ್ಲಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿದ್ದು, ಸಮರೋಪಾದಿ ಕೆಲಸದಲ್ಲಿ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ಶಾಂತಳ್ಳಿ ಹೋಬಳಿಯಾದ್ಯಂತ ಅತೀ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಚರಂಡಿ ಸೌಲಭ್ಯ ಇಲ್ಲದ ಹಿನ್ನೆಲೆ ಬಹುತೇಕ ರಸ್ತೆಗಳ ಮೇಲೆಯೇ ಮಳೆ ನೀರು ಹರಿಯುತ್ತಿದ್ದು, ಗ್ರಾಮೀಣ ಭಾಗದ ರಸ್ತೆಗಳು ಇನ್ನಷ್ಟು ದುಸ್ಥಿತಿಗೆ ತಲುಪಿವೆ.

ಸೋರುತ್ತಿರುವ ಮಾರುಕಟ್ಟೆ: ಸೋಮವಾರಪೇಟೆ ಪ.ಪಂ. ಹೈಟೆಕ್ ಮಾರುಕಟ್ಟೆ ಭಾರೀ ಮಳೆಗೆ ಸೋರುತ್ತಿದೆ. ಕಳೆದ 5 ವರ್ಷಗಳ ಹಿಂದೆ ನಿರ್ಮಿಸಿರುವ ಹೈಟೆಕ್ ಮಾರುಕಟ್ಟೆಯ ಛಾವಣಿ ಅಲ್ಲಲ್ಲಿ ರಂದ್ರಗಳಾಗಿದ್ದು, ನೀರು ಒಳ ಬರುತ್ತಿರುವದರಿಂದ ಇಡೀ ಆವರಣ ಕೊಳಚೆಮಯವಾಗಿದೆ. ಸೋರುತ್ತಿರುವ ಛಾವಣಿಯ ಅಡಿಯಲ್ಲಿಯೇ ವರ್ತಕರು ವ್ಯಾಪಾರ ವಹಿವಾಟು ನಡೆಸಿದ್ದಾರೆ.

ಛಾವಣಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೆಲಸಕ್ಕೆ ಹಿನ್ನಡೆಯಾಗಿದೆ. ಮಳೆ ಕಡಿಮೆಯಾದೊಡನೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವದು ಎಂದು ಪ.ಪಂ. ಅಭಿಯಂತರ ವೀರೇಂದ್ರ ತಿಳಿಸಿದ್ದಾರೆ.