ಮಡಿಕೇರಿ, ಜೂ. 11: ನಿನ್ನೆಯಿಂದ ಬಿರುಸುಗೊಂಡಿರುವ ಮಳೆಯಿಂದಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಮಂದಿ ಮರುಕಪಡುವಂತಹ ಸ್ಥಿತಿ ಎದುರಾಗಿದೆ. ಜಿಲ್ಲಾ ಪಂಚಾಯಿತಿ ಕಚೇರಿ, ಲೋಕೋಪಯೋಗಿ ಇಲಾಖೆ, ಶಾಸಕತ್ರಯರ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವ ಕೋಟೆಯ ಅರಮನೆ ಮಾಡು ಸಂಪೂರ್ಣ ಸೋರತೊಡಗಿದೆ.
ಕಳೆದ 24 ಗಂಟೆಗಳ ಗಾಳಿ-ಮಳೆಗೆ ಒಂದಿಷ್ಟು ಹೆಂಚು ಮಾಡುವಿನಿಂದ ಜಾರಿ ಬಿದ್ದು ಒಡೆದು ಹೋಗಿವೆ. ನೂರಾರು ಹೆಂಚುಗಳು ಯಾವದೇ ಕ್ಷಣದಲ್ಲಿ ಕೆಳಗೆ ಬೀಳುವ ಅಪಾಯದೊಂದಿಗೆ ಇನ್ನಷ್ಟು ಅನಾಹುತ ಸೃಷ್ಟಿಸುವ ಸ್ಥಿತಿ ಕೋಟೆಯೊಳಗೆ ಗೋಚರಿಸತೊಡಗಿದೆ. ಕೋಟೆ ಗಣಪತಿ ದೇವಾಲಯ ಹಿಂಭಾಗದಲ್ಲಿ ನೀರು ನಿಂತು ಹೊರ ಹೋಗಲು ಚರಂಡಿ ಸಂಪರ್ಕವಿಲ್ಲದೆ ಕೋಟೆ ಆವರಣದ ಈ ಭಾಗದಲ್ಲಿ ಕೆರೆಯಂತೆ ಬಾಸವಾಗತೊಡಗಿದೆ. ಇನ್ನು ಕೋಟೆ ಹಿಂಭಾಗ ಸರಕಾರಿ ನೌಕರರ ಸಭಾಂಗಣ ಬಳಿಯೂ ರಸ್ತೆ ಗುಂಡಿಯಲ್ಲಿ ನೀರು ಕೆರೆಯಂತೆ ಗೋಚರಿಸುತ್ತಿದೆ. ಇಲ್ಲಿನ ಗೌಳಿಬೀದಿ-ಮೊಣ್ಣಪ್ಪ ಗ್ಯಾರೇಜು ಬಳಿ ಸೇತುವೆಗೆ ಹೊಂದಿಕೊಂಡಂತೆ ರಸ್ತೆಯಲ್ಲಿ ನೀರು ನಿಂತು ಅಲ್ಲೇ ಗುಂಡಿಬಿದ್ದು, ಮತ್ತಷ್ಟು ಅಪಾಯದ ಮುನ್ಸೂಚನೆ ಎದುರಾಗಿದೆ. ಒಟ್ಟಿನಲ್ಲಿ ಕಳೆದ 24 ಗಂಟೆಗಳ ಮಳೆಯಲ್ಲಿ ಮಡಿಕೇರಿ ಜನ ಬಸವಳಿದರೆ, ಬೀದಿ ದನಗಳು ಕೋಟೆ ಆವರಣದೊಳಗೆ ಆಸರೆ ಪಡೆದಿವೆ. ಕಾಲೇಜು ರಸ್ತೆ, ರಾಣಿಪೇಟೆ ಮಾರ್ಗದ ತಿರುವಿನಲ್ಲಿ ಮರವೊಂದು ಮುರಿದು ಬಿದ್ದಿದೆ. ಮಳೆ ತೀವ್ರಗೊಂಡರೆ ನಗರದ ಹಲವೆಡೆ ಅಪಾಯಗಳು ಎದುರಾಗುವ ಮುನ್ಸೂಚನೆ ಗೋಚರಿಸತೊಡಗಿದೆ.