ವೀರಾಜಪೇಟೆ, ಜೂ. 11 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಬೆಳಗಿನಿಂದಲೇ ನಿರಂತರ ಮಳೆಯಾಗುತ್ತಿದ್ದು ವೀರಾಜಪೇಟೆ ಸುತ್ತ ಮುತ್ತಲ ಪ್ರದೇಶದ ಅರಸುನಗರ, ನೆಹರೂನಗರ ಹಾಗೂ ಮಲೆತಿರಿಕೆ ಬೆಟ್ಟದಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಭಯಭೀತರಾಗಿದ್ದಾರೆ. ಭಾರೀ ಮಳೆ, ಗಾಳಿ, ಗುಡುಗು ಹಾಗೂ ಮಿಂಚಿನಿಂದ ನಿವಾಸಿಗಳು ತತ್ತರಿಸಿದ್ದಾರೆ.ಇಲ್ಲಿನ ಮಾಂಸ ಮಾರುಕಟ್ಟೆಯ ಬಳಿ, ಮೀನುಪೇಟೆ ಹಾಗೂ ಆರ್ಜಿ ಗ್ರಾಮದಲ್ಲಿ ಎರಡು ದಿನಗಳಿಂದಲೂ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ವಾಹನ ಸಂಚಾರಕ್ಕೆ ಯಾವದೇ ರೀತಿಯ ಅಡಚಣೆ ಉಂಟಾಗಿಲ್ಲ. ಚರ್ಚ್ ರಸ್ತೆಯ ಶಾಂತಾ ಚಿತ್ರ ಮಂದಿರದ ಬಳಿಯಲ್ಲಿಯೂ ರಸ್ತೆ ಮೇಲೆ ನೀರು ಹರಿಯುತ್ತಿದೆ. ಕಲ್ಲುಬಾಣೆಯಲ್ಲಿ ಕೊಟ್ಟಿಗೆಯೊಂದು ನೆಲಸಮಗೊಂಡಿದೆ ಯಾವದೇ ಪ್ರಾಣ ಹಾನಿಯಾಗಿಲ್ಲ. ದೊಡ್ಡಟ್ಟಿ ಚೌಕಿಯಿಂದ ಚರ್ಚ್ ರಸ್ತೆಯ

(ಮೊದಲ ಪುಟದಿಂದ) ಮಸೀದಿಯ ಮುಂಭಾಗದ ಸಮುದಾಯದ ಒತ್ತಾಗಿ ಇಂದು ಬೆಳಗಿನ ಜಾವ ಮರ ಬಿದ್ದಿದ್ದರೂ ಸಮುದಾಯದ ಕಟ್ಟಡಕ್ಕೆ ಯಾವದೇ ಹಾನಿ ಸಂಭವಿಸಿಲ್ಲ ಎಂದು ಮುಖ್ಯಾಧಿಕಾರಿ ಎನ್.ಪಿ.ಹೇಮ್ ಕುಮಾರ್ ತಿಳಿಸಿದ್ದಾರೆ.

ನಿನ್ನೆ ದಿನ ಬೆಳಗಿನಿಂದ ಇಂದು 8ಗಂಟೆಯವರೆಗೆ ಈ ವಿಭಾಗಕ್ಕೆ ಒಟ್ಟು 4.24 ಇಂಚುಗಳಷ್ಟು (104 ಮಿ.ಮೀ) ಮಳೆ ಸುರಿದಿದೆ. ಕದನೂರು, ಆರ್ಜಿ ಹಾಗೂ ಬಿಟ್ಟಂಗಾಲ ಗ್ರಾಮದ ಸುತ್ತ ಮುತ್ತಲ ಪ್ರದೇಶದಲ್ಲಿರುವ ಗದ್ದೆ, ಬಾಣೆ ಜಾಗ ಮೂರು ದಿನಗಳಿಂದ ನೀರಿನಿಂದ ಜಲಾವೃತಗೊಂಡಿದ್ದು ಯಥಾ ಸ್ಥಿತಿ ಮುಂದುವರೆದಿದೆ.